ರಥಬೀದಿ ಮಂಗಳೂರು ಸರಕಾರಿ ಪ್ರಥಮ ದರ್ಜೆ ಕಾಲೇಜುನಲ್ಲಿ ವಿದ್ಯಾರ್ಥಿ ಸಂಘದ ದಿನಾಚರಣೆ

Update: 2016-04-14 16:37 GMT

ಉಳ್ಳಾಲ,ಎ.14: ಸರಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ ಮಂಗಳೂರು, ಇಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿ ಸಂಘದ ದಿನಾಚರಣೆಯ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಯಾವುದೇ ವೃತ್ತಿಪರ ಕಲಾವಿದರಿಗೆ ಕಡಿಮೆಯಿಲ್ಲದಂತೆ ಅಮೋಘ, ಮನೋಜ್ಞ ಯಕ್ಷಗಾನ ಪ್ರದರ್ಶನ ನೀಡಿದರು. ಪೂರ್ಣಿಮಾ ಯತೀಶ್ ರೈಯವರ ಸಮರ್ಥ ನಿರ್ದೇಶನ ಕಾರ್ಯಕ್ರಮಕ್ಕೆ ಒಟ್ಟಂದದ ಮೆರುಗನ್ನು ನೀಡಿತ್ತು. ಧರಣಿಪಾಲಕ ಕೇಳು ಎಂಬ ಹಾಡಿನೊಂದಿಗೆ ಅನಾವರಣಗೊಂಡ ದೇವೇಂದ್ರನ ಒಡ್ಡೋಲಗ ದೇವಲೋಕದ ಕಲ್ಪನೆಯನ್ನು ನೀಡುವಲ್ಲಿ ದೇವೇಂದ್ರನಾಗಿ ವೈಷ್ಣವಿ ಹಾಗೂ ದೇವ ಬಲಗಳಾಗಿ ಚೇತನಾ ಹಾಗೂ ದೀಕ್ಷಿತಾ ಇವರು ಧೀಂಗಿಣಗಳಿಂದ ಪಾತ್ರಕ್ಕೆ ನ್ಯಾಯ ಒದಗಿಸಿದರು. ಮುರಾಸುರನ ಪಾತ್ರದಲ್ಲಿ ಮನೋಹರ್ ಮಿಂಚಿದರೆ, ಗರುಡನಾಗಿ ವಿಕಾಸ್ ಮಯ್ಯ ಉತ್ತಮ ಮಾತುಗಾರಿಕೆ ಹಾಗೂ ಧೀಂಗಿಣಗಳಿಂದ ಗಮನ ಸೆಳೆದರು. ರಕ್ಕಸ ಬಲಗಳಾಗಿ ದೀಕ್ಷಾ ಹಾಗು ಸುರಕ್ಷಿತಾ, ದೇವಿಯಾಗಿ ದೀಕ್ಷಾ ಮೆರೆದರು. ಹಾಸ್ಯದಲ್ಲಿ ನವೀನ್‌ಚಂದ್ರ ಶರ್ಮ ತಮ್ಮ ನವಿರಾದ ಹಾಸ್ಯದಿಂದ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಫಲರಾದರು. ಮೇಘಮುಖಿಯಾಗಿ ಪ್ರಿಯಾಂಕ ತಕ್ಕ ಮಟ್ಟಿಗೆ ನ್ಯಾಯ ಒದಗಿಸಿದರೆ, ವಿಷ್ಣುವಾಗಿ ಮೋಕ್ಷಿತಾ ತಮ್ಮ ಶುದ್ಧ ನಾಟ್ಯ ಮತ್ತು ಮಾತುಗಾರಿಕೆಯಿಂದ ಗಮನ ಸೆಳೆದರು. ಹಿಮ್ಮೇಳದಲ್ಲಿ ಶ್ರೀ ಸತೀಶ್ ಶೆಟ್ಟಿ ಬೋಂದೆಲ್, ಚೆಂಡೆ ಹಾಗೂ ಮದ್ದಳೆಯಲ್ಲಿ ಪ್ರಶಾಂತ್ ಒಗೆನಾಡು, ಜಯರಾಮ ಚೇಳಾರು ಸಮರ್ಥ ಜೊತೆ ನೀಡಿದರು ಮಾತ್ರವಲ್ಲದೆ ಕಾಂರ್ಕ್ರಮವು ಯಶಸ್ವಿಗೊಳ್ಳಲು ಶ್ರಮಿಸಿದರು. ಯುವಪೀಳಿಗೆ ಯಕ್ಷಗಾನದಂತಹ ಸಾಂಪ್ರದಾಯಿಕ ಕಲೆಗಳಿಂದ ದೂರ ಹೋಗುತ್ತಿರುವ ಈ ಕಾಲದಲ್ಲಿ ಪ್ರಾಂಶುಪಾಲರಾದ ಪ್ರೊ. ರಾಜಶೇಖರ್ ಹೆಬ್ಬಾರ್ ಸಿ ಇವರ ಪ್ರೋತ್ಸಾಹ, ಉಪನ್ಯಾಸಕರಾದ ಪ್ರೊ. ಪುರುಷೋತ್ತಮ ಭಟ್‌ರವರ ಸಂಯೋಜನೆ ಕಾರ್ಯಕ್ರಮದ ಸಫಲತೆಗೆ ಸಾಕ್ಷಿಯಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News