ಮೂಡುಬಿದಿರೆ : ಮಹಾವೀರ ಕಾಲೇಜು ಸುವರ್ಣ ಮಹೋತ್ಸವ ಸಂಭ್ರಮ

Update: 2016-04-15 12:18 GMT

 ಮೂಡುಬಿದಿರೆ : ಖಾಸಗಿ ಶಿಕ್ಷಣ ಸಂಸ್ಥೆಗಳು ಮೂಲ ಶಿಕ್ಷಣದೊಂದಿಗೆ ಸಂಶೋಧನೆಗೆ ಹೆಚ್ಚು ಒತ್ತು ನೀಡಬೇಕು. ಶಿಕ್ಷಣದೊಂದಿಗೆ ಉದ್ಯೋಗಕ್ಕೂ ಆದ್ಯತೆ ನೀಡಬೇಕು. ಕರಾವಳಿ ಜಿಲ್ಲೆಯಲ್ಲಿ ಶಿಕ್ಷಣ ಮತ್ತು ಶಿಕ್ಷಣ ಸಂಸ್ಥೆಗಳು ಅವಿನಾಭವ ಸಂಬಂಧ ಹೊಂದಿರುವುದರಿಂದ ಮೌಲ್ಯಯುತ ಶಿಕ್ಷಣ ಸಿಗುತ್ತಿದ್ದು ಇದು ದೇಶಕ್ಕೆ ಮಾದರಿಯಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಟಿ. ಬಿ. ಜಯಚಂದ್ರ ಹೇಳಿದರು.  ಮಣಿಪಾಲ ಅಕಾಡಮಿ ಆಫ್ ಜನರಲ್ ಎಜ್ಯುಕೇಶನ್‌ನ ಆಡಳಿತಕ್ಕೊಳಪಟ್ಟಿರುವ ಇಲ್ಲಿನ ಮಹಾವೀರ ಕಾಲೇಜಿನಲ್ಲಿ ಶುಕ್ರವಾರ ನಡೆದ ಸುವರ್ಣ ಮಹೋತ್ಸವ ಮತ್ತು ಸ್ಥಾಪಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ಮೂರು ಕೋಟಿ ಮಕ್ಕಳಿಗೆ ಮಾತ್ರ ಉನ್ನತ ಶಿಕ್ಷಣ ಸಿಗುತ್ತಿದ್ದು ಈ ಪ್ರಮಾಣ ಹೆಚ್ಚಾಗಬೇಕಾದರೆ ದೇಶದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಹೆಚ್ಚಾಗಬೇಕು ಎಂದು ಹೇಳಿದ ಅವರು ಜಗತ್ತಿನಲ್ಲಿ ನಡೆಯುವ ಸಂಶೋಧನೆಗಳ ಮೂಲ ಬೇರು ಭಾರತವೇ ಆಗಿವೆ ಎಂದರು.  ಕೇಂದ್ರದ ಮಾಜಿ ಸಚಿವ ಆಸ್ಕರ್ ಫೆರ್ನಾಂಡಿಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಖಾಸಗಿ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡಬಹುದು ಎಂಬುದನ್ನು ದೇಶಕ್ಕೆ ತೋರಿಸಿಕೊಟ್ಟಿರುವುದು ಮಣಿಪಾಲದ ಶಿಕ್ಷಣ ಸಂಸ್ಥೆಗಳು. ಸೇವಾ ಮನೋಭಾವನೆಯಿಂದ ಹುಟ್ಟಿಕೊಂಡ ಈ ಸಂಸ್ಥೆಗಳು ಇನ್ನಷ್ಟು ಬಲಿಷ್ಠವಾದ ಬೆಳೆಯಬೇಕು.

ಮುಂದೆಯೂ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.  ಮಣಿಪಾಲ ಅಕಾಡೆಮಿಯ ಕುಲಸಚಿವ ಡಾ. ರಾಮದಾಸ್ ಪೈ ಅಧ್ಯಕ್ಷತೆ ವಹಿಸಿದ್ದರು. ಸಚಿವ, ಮಹಾವೀರ ಕಾಲೇಜು ಆಡಳಿತ ಮಂಡಳಿಯ ಅದ್ಯಕ್ಷ ಕೆ. ಅಭಯಚಂದ್ರ ಜೈನ್ ಕಾಲೇಜಿನ ಸ್ಥಾಪನೆ ಹಾಗೂ ಅದಕ್ಕಾಗಿ ಶ್ರಮಿಸಿದವರನ್ನು ಸ್ಮರಿಸಿ ಕಾಲೇಜನ್ನು ಮತ್ತಷ್ಟು ಆಧುನೀಕರಣಗೊಳಿಸಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುವುದು. ಸಹ ಸಂಸ್ಥೆ ಎಸ್.ಎನ್.ಎಂ ಪೊಲಿಟೆಕ್ನಿಕ್‌ನಲ್ಲಿ 19 ಹುದ್ದೆಗಳು ಖಾಲಿ ಇದ್ದು, ಅದನ್ನು ಭರ್ತಿಗೊಳಿಸುವುದರೊಂದಿಗೆ ಅನುದಾನ ಒದಗಿಸಬೇಕು ಎಂದರು.  ಮಣಿಪಾಲ ಅಕಾಡಮಿ ಆಫ್ ಜನರಲ್ ಎಜ್ಯುಕೇಶನ್ ನ ಅಧ್ಯಕ್ಷ ಡಾ. ಎಚ್. ಎಸ್. ಬಲ್ಲಾಳ್ ಮಂಗಳೂರಿನ ಉದ್ಯಮಿ ಮನೋಹರ್ ಎಸ್.ಎನ್ ಮೂಡುಬಿದಿರೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಕಾಲೇಜಿನ ಸ್ಥಾಪಕ ಸದಸ್ಯ ಪಿ.ಎಸ್ ಭಟ್ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಘವೇಂದ್ರ ಪ್ರಭು, ಮಹಾವೀರ ಕಾಲೆಜು ಟ್ರಸ್ಟ್‌ನ ಉಪಾದ್ಯಕ್ಷ ಸಂಪತ್ ಸಾಮ್ರಾಜ್ಯ ಮಹಾವೀರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ರಮೇಶ್ ಭಟ್, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಹರೀಶ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ನೀಲ್ ಕೆನೆತ್‌ವಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂಧರ್ಭದಲ್ಲಿ ನಿವೃತ್ತ ಪ್ರಾಂಶುಪಾಲರು, ವರ್ಗಾಯುತ ಅಧ್ಯಾಪಕರು, ಕಛೇರಿ ಸಿಬ್ಬಂಧಿಗಳನ್ನು ಸನ್ಮಾನಿಸಲಾಯಿತು. ಸಂಪತ್ ಸಾಮ್ರಾಜ್ಯ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಚಂದ್ರಶೇಖರ್ ದೀಕ್ಷಿತ್ ವರದಿ ವಾಚಿಸಿದರು. ಗ್ರಂಥ ಪಾಲಕಿ ನಳಿನಿ ವಂದಿಸಿದರು. ಆಶಾ ಶಾಲೆಟ್ ಡಿ’ಸೋಜ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News