ಚುಟುಕು ಸುದ್ದಿಗಳು

Update: 2016-04-15 17:50 GMT

ನಾಳೆ ಯುನೈಟೆಡ್ ಟ್ರೋಫಿ ಕ್ರಿಕೆಟ್ ಪಂದ್ಯಾಟ
ವಿಟ್ಲ, ಎ.15: ಯುನೈಟೆಡ್ ಫ್ರೆಂಡ್ಸ್ ಗೂಡಿನಬಳಿ ಇದರ ತೃತೀಯ ವರ್ಷದ ಅಂಗವಾಗಿ 28 ತಂಡಗಳ 7 ಜನರ 30 ಗಜಗಳ ಅಂಡರ್ ಆರ್ಮ್ ಯುನೈಟೆಡ್ ಟ್ರೋಫಿ-2016 ಕ್ರಿಕೆಟ್ ಪಂದ್ಯಾಟವು ಎ.17ರಂದು ಗೂಡಿನಬಳಿ ಹಳೆ ಸೇತುವೆ ಬಳಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

ಎ.17: ಕೃತಿ ಬಿಡುಗಡೆ
ಮಂಗಳೂರು, ಎ.15: ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ವತಿಯಿಂದ ತುಳುಭವನದ ಸಿರಿಚಾವಡಿಯಲ್ಲಿ ಎ.17ರಂದು ಅಪರಾಹ್ನ 2:30ಕ್ಕೆ ಕೋಟಿ ಚೆನ್ನಯ ಆಂಗ್ಲ ಭಾಷಾಂತರ ಕೃತಿಯನ್ನು ಹಂಪಿ ವಿವಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಬಿ.ಎ. ವಿವೇಕ ರೈ ಬಿಡುಗಡೆ ಮಾಡುವರು ಎಂದು ಪ್ರಕಟನೆ ತಿಳಿಸಿದೆ.

ಎ.17ರಿಂದ ಬ್ರಹ್ಮಕಲಶ
ಪುತ್ತೂರು, ಎ.15: ತಾಲೂಕಿನ ನೆಲ್ಯಾಡಿಯ ಕುತ್ರಾಡಿ ಹಾರ್ಪಳ ಶ್ರೀ ಶಾಸ್ತಾರೇಶ್ವರ ದೇವಸ್ಥಾನದ ನವೀಕರಣ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶ ಮಹೋತ್ಸವ ಎ.17ರಿಂದ 22ರವರೆಗೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕುಶಾಲಪ್ಪಗೌಡ ಪೂವಾಜೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್‌ನಿಂದ ಅಂಬೇಡ್ಕರ್ ಜನ್ಮ ದಿನಾಚರಣೆ
ಮಂಗಳೂರು, ಎ.15: ಸಂವಿಧಾನ ಶಿಲ್ಪಿಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರ 125ನೆ ಜನ್ಮ ದಿನವನ್ನು ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಲಾಯಿತು. ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಅಂಬೇಡ್ಕರ್‌ರವರ ಭಾವ ಚಿತ್ರಕ್ಕೆ ಹೂಹಾರವನ್ನು ಹಾಕಿ ಮಾತನಾ ಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ವಿಭಾಗದ ಅಧ್ಯಕ್ಷ ಪದ್ಮನಾಭ ನರಿಂಗಾನ, ಕಾರ್ಪೋರೇಟರ್‌ಗಳಾದ ಅಪ್ಪಿ, ನಾಗವೇಣಿ, ಅಬ್ದುರ್ರವೂಫ್, ಕವಿತಾ ವಾಸು, ಪಕ್ಷದ ಮುಖಂ ಡರಾದ ಸದಾಶಿವ ಉಳ್ಳಾಲ, ಟಿ.ಕೆ. ಸುಧೀರ್, ಎಚ್.ಎಂ. ಅಶ್ರಫ್, ಕೆ. ಅಶ್ರಫ್, ನಝೀರ್ ಬಜಾಲ್, ಲುಕ್‌ಮಾನ್, ರಮಾನಂದ ಪೂಜಾರಿ, ಸುರೇಶ್ ಶೆಟ್ಟಿ, ಬಿ.ಎಸ್. ಹಸನಬ್ಬ, ಹೇಮಾ ಉಳ್ಳಾಲ್, ಪದ್ಮನಾಭ ಅಮೀನ್, ಸಿ.ಎಂ. ಮುಸ್ತ್ತಫಾ, ಸಂಜೀವ ಕೋಟ್ಯಾನ್, ಅಹ್ಮದ್ ಬಾವಾ, ಅಝೀಝ್ ಗುರುಪುರ, ಸುಲೈಮಾನ್, ಬಿ.ಪಿ. ಆಚಾರ್, ನಾಗೇಶ್ ಭಂಡಾರಿ, ಚಂದ್ರಶೇಖರ್, ತೆರೆಸಾ ಪಿಂಟೊ, ಡಿ.ಎಂ. ಮುಸ್ತಫಾ, ಹನೀಫ್ ಮೊದಲಾದವರು ಉಪಸ್ಥಿತರಿದ್ದರು.

ಮನೆ ಮಂಜೂರಾತಿಗೆ ಅರ್ಜಿ ಆಹ್ವಾನ
 ಉಡುಪಿ, ಎ.15: ಉಡುಪಿ ತಾಪಂ ವ್ಯಾಪ್ತಿಯಲ್ಲಿ 2015-16ನೆ ಸಾಲಿನ ಡಾ.ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆ ಅನುಷ್ಟಾನಗೊಳಿಸುವ ಪ್ರಕ್ರಿಯೆ ಈಗಾಗಲೇ ಜಾರಿಯಲ್ಲಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಿಂದ ಪಡೆಯಲಾದ ಸಾಮಾಜಿಕ ಮತ್ತು ಆರ್ಥಿಕ ಜಾತಿಗಣತಿ 2011ರ ಸಮೀಕ್ಷೆಯಲ್ಲಿ ಗುರುತಿಸಲಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಸತಿರಹಿತರ ಪಟ್ಟಿಯಲ್ಲಿ ಸ್ವಂತ ನಿವೇಶನ ಹೊಂದಿದ ಅರ್ಜಿ ಸಲ್ಲಿಸಲು ಬಾಕಿ ಇರುವ ಫಲಾನುಭವಿಗಳು ಸಂಬಂಧಿಸಿದ ಗ್ರಾಪಂಗೆ ಭೇಟಿ ನೀಡಿ ಎ.25ರೊಳಗೆ ಮನೆ ಮಂಜೂರಾತಿಗಾಗಿ ಅರ್ಜಿ ಸಲ್ಲಿಸುವಂತೆ ಉಡುಪಿ ತಾಪಂ ಇಒ ಪ್ರಕಟನೆ ತಿಳಿಸಿದೆ.

ತ್ವರಿತ ತನಿಖೆ ನಡೆಸಲು ಮನವಿ
ಗುರುವಾಯನಕೆರೆ, ಎ.15: ಇಲ್ಲಿನ ನಾಗರಿಕ ಸೇವಾ ಟ್ರಸ್ಟ್‌ನ ಜಂಟಿ ಕ್ರಿಯಾ ಸಮಿತಿಯು ಮುಂದಿಟ್ಟಿರುವ ವಿವಿಧ ಬೇಡಿಕೆಗಳ ಕುರಿತು ಕಂದಾಯ ಮತ್ತು ಇತರ ಇಲಾಖೆಗಳು ತ್ವರಿತವಾಗಿ ತನಿಖೆ ನಡೆಸುವಂತೆ ಗಂಭೀರ ನಿರ್ದೇಶನ ಕೊಡಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದೆ.
 ಡಿ. ವೀರೇಂದ್ರ ಹೆಗ್ಗಡೆ ಮತ್ತವರ ಕುಟುಂಬ ಮತ್ತು ಸಂಸ್ಥೆಗಳ ವಿರುದ್ಧ 1500 ಎಕ್ರೆ ಭೂಮಿಯ ಅವ್ಯವಹಾರ, ಧರ್ಮಸ್ಥಳ ದೇವಸ್ಥಾನದ ಸಾವಿರಾರು ಎಕರೆ ಭೂಮಿ ತನ್ನ ಕುಟುಂಬಕ್ಕೆ ಮಾಡಿಕೊಂಡಿದ್ದು, ದುಬಾರಿ ಬಡ್ಡಿಯ ಕಾನೂನುಬಾಹಿರ ಮೈಕ್ರೋಫೈನಾನ್ಸ್, ಡಿಸಿ ಮನ್ನಾ ಭೂಮಿಗೆ ಪರ್ಯಾಯ ಒದಗಿಸದಿರುವುದು, ಹರ್ಷೇಂದ್ರ ಕುಮಾರ್ ತಾನು ಭೂರಹಿತ ಎಂದು ಸುಳ್ಳು ದೃಢಪತ್ರ ಸಲ್ಲಿಸಿ ದರ್ಖಾಸ್ತು ಮಂಜೂರು ಮಾಡಿಕೊಂಡದ್ದು ಇತ್ಯಾದಿ ಬಗ್ಗೆ ಮುಖ್ಯಮಂತ್ರಿಗಳು, ಕಂದಾಯ ಸಚಿವರು, ಮುಜರಾಯಿ ಸಚಿವರು ತನಿಖೆಗೆ ಆದೇಶ ನೀಡಿದ್ದರೂ ಪ್ರಯೋಜನವಾಗಿಲ್ಲ. ಹಾಗಾಗಿ ಯಾವುದೇ ಒತ್ತಡ, ಪ್ರಭಾವಕ್ಕೊಳಗಾಗದೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆದೇಶಿಸಬೇಕೆಂದು ಸಮಿತಿಯು ಒತ್ತಾಯಿಸಿದೆ.

ಸಿಪಿಎಂ ಮುಖಂಡ ಕಾಸರಗೋಡಿಗೆ
   ಕಾಸರಗೋಡು, ಎ.15: ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ಕೇರಳ ಪ್ರತಿಪಕ್ಷ ನಾಯಕ ಹಾಗೂ ಸಿಪಿಎಂ ಹಿರಿಯ ನಾಯಕ ವಿ.ಎಸ್. ಅಚ್ಯುತಾನಂದನ್ ಎ.20ರಂದು ಜಿಲ್ಲೆಗೆ ಆಗಮಿಸಲಿರುವರು.
ಜಿಲ್ಲೆಯ ಮೂರು ಕಡೆಗಳಲ್ಲಿ ಎಲ್‌ಡಿಎಫ್ ಅಭ್ಯರ್ಥಿ ಪರ ಬೆಳಗ್ಗೆ 10ಕ್ಕೆ ಕುಂಬಳೆ, 3:30ಕ್ಕೆ ಪಾಲಕುನ್ನು, ಸಂಜೆ 5ಕ್ಕೆ ಚಿತ್ತಾರಿಕಾಲ್‌ನಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿರುವರು.

ಎ.24: ವಸತಿ ಉದ್ಘಾಟನೆ
ಬೆಳ್ತಂಗಡಿ, ಎ.15: ಧರ್ಮಸ್ಥಳದಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಕೆಎಸ್ಸಾರ್ಟಿಸಿ ಹೊಸ ಬಸ್ ನಿಲ್ದಾಣದ ಬಳಿ ನಿರ್ಮಿಸಲಾದ 500 ಕೊಠಡಿಗಳುಳ್ಳ ನೂತನ ಸಹ್ಯಾದ್ರಿ ವಸತಿ ಗೃಹವನ್ನು ಎ.24ರಂದು ಶೃಂಗೇರಿ ಶ್ರೀ ಶಾರದಾ ಪೀಠದ ಶ್ರೀ ಭಾರತೀತೀರ್ಥ ಸ್ವಾಮೀಜಿ ಮತ್ತು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಉದ್ಘಾಟಿಸಲಿದ್ದಾರೆ.
   ಸಚಿವ ಅಂಬರೀಶ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಕೆ. ವಸಂತ ಬಂಗೇರ ಅತಿಥಿಗಳಾಗಿ ಭಾವಹಿಸುವರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸುವರು ಎಂದು ಡಿ. ಹರ್ಷೇಂದ್ರ ಕುಮಾರ್ ತಿಳಿಸಿದ್ದಾರೆ.

ಡಾನ್ಸ್ ಆ್ಯಂಡ್ ಮ್ಯಾಥ್ಸ್ ಕಾರ್ಯಕ್ರಮ
ಮಂಗಳೂರು, ಎ.15: ರಂಗ ಭಾರತಿ ಮಂಗಳೂರು ಸಂಸ್ಥೆಯ ಆಶ್ರಯದಲ್ಲಿ ಕಲ್ಕೂರ ಪ್ರತಿಷ್ಠಾನ ಮತ್ತು ವೋಲ್ಗಾ ಮೆಡಿಕ್ವಿಪ್ ಸಹಯೋಗದೊಂದಿಗೆ ನಾಟ್ಯ ಚಂದ್ರಿಕಾ ಕುಂದಾಪುರ ಪ್ರಸ್ತುತಿಯ ಡ್ಯಾನ್ಸ್ ಆ್ಯಂಡ್ ಮ್ಯಾಥ್ಸ್ ಕಾರ್ಯಾಗಾರ ನಗರದಲ್ಲಿ ಇತ್ತೀಚೆಗೆ ನಡೆಯಿತು.
 ಕಾಪಿಕಾಡ್ ಬಿಜೈಯ ಶ್ರೀಗೌರಿ ಸಂಕೀರ್ಣದಲ್ಲಿ ನಡೆದ ಕಾರ್ಯಾಗಾರವನ್ನು ಲೋಕೇಶ್‌ಆಚಾರ್ ಉದ್ಘಾಟಿಸಿದರು. ಅತಿಥಿಗಳಾಗಿ ಭರತನಾಟ್ಯದ ಬಾಲಕಲಾವಿದೆ ನಾಗರಶ್ಮಿ ಭಾಗವಹಿಸಿದ್ದರು. ಶಿಬಿರದ ನಿರ್ದೇಶಕ ಕೆ.ವಿ.ರಮಣ್ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ರಂಗ ಭಾರತಿಯ ಈಶ್ವರಿ ರಾಮಕೃಷ್ಣ ಭಟ್, ಸಂಪನ್ಮೂಲ ವ್ಯಕ್ತಿ ಡಾ.ಜಯಶಂಕರ ಪ್ರಮಾಣ ಪತ್ರಗಳನ್ನು ವಿತರಿಸಿದರು. ಶಿಬಿರಾರ್ಥಿಗಳಾದ ಧನ್ಯಶ್ರೀ, ಆರಾಧನಾ, ಸಹನಾ ಅನುಭವಗಳನ್ನು ಹಂಚಿಕೊಂಡರು. ಸೌಮ್ಯಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಅಧಿಕಾರ ಸ್ವೀಕಾರ
ಸುಳ್ಯ, ಎ.15: ಬೆಂಗಳೂರು ಚನ್ನಪಟ್ಟಣದಲ್ಲಿರುವ ಕರ್ನಾಟಕ ಪೊಲೀಸ್ ತರಬೇತಿ ಶಾಲೆಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಆಗಿದ್ದ ಕೃಷ್ಣಯ್ಯ ಸುಳ್ಯ ಪೊಲೀಸ್ ವೃತ್ತದ ನೂತನ ಇನ್ಸ್‌ಪೆಕ್ಟರ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.


ಎಸ್ಕೆಎಸ್‌ಬಿವಿ: ಜಲ ಜಾಗೃತಿ ಅಭಿಯಾನ
ಪುತ್ತೂರು, ಎ.15: ಪವಿತ್ರ ಕುರ್‌ಆನ್‌ನಲ್ಲಿ ನೀರಿನ ಬಗ್ಗೆ 63 ಬಾರಿ ಉಲ್ಲೇಖಿಸಲಾಗಿದೆ. ತುಂಬಿ ಹರಿಯುವ ನೀರಿನಲ್ಲಿ ಸ್ನಾನ ಮಾಡುತ್ತಿದ್ದರೂ ನೀರನ್ನು ಪೋಲು ಮಾಡದಂತೆ ಸೃಷ್ಟಿಕರ್ತನು ಆಜ್ಞೆ ಮಾಡಿದ್ದಾನೆ ಎಂದು ಪುತ್ತೂರು ಬದ್ರಿಯಾ ಜುಮಾ ಮಸೀದಿಯ ಖತೀಬ್ ಎಸ್.ಬಿ.ಮುಹಮ್ಮದ್ ದಾರಿಮಿ ಹೇಳಿದರು. ಮದ್ರಸ ವಿದ್ಯಾರ್ಥಿ ಸಂಘಟನೆಯಾದ ಎಸ್ಕೆಎಸ್‌ಬಿವಿ ವತಿಯಿಂದ ನಡೆದ ಜಲಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮೇ 25ರವರೆಗೆ ಎಸ್ಕೆಎಸ್‌ಬಿವಿ ವತಿಯಿಂದ ಜಲಜಾಗೃತಿ ಅಭಿಯಾನ ನಡೆಯಲಿದೆ. ನೀರಿನ ಮಹತ್ವವನ್ನು ಸಾರುವ ಬ್ಯಾನರನ್ನು ಮೊಹಲ್ಲಾದ ಮಸೀದಿಗಳಲ್ಲಿ ಅಳವಡಿಸಲಾಗಿದ್ದು, ಪ್ರತೀ ಮನೆ ಮನೆಗೂ ಈ ಕುರಿತು ಮಾಹಿತಿ ನೀಡಲಾಗುತ್ತಿದೆ.

ವಿಶೇಷ ಮಕ್ಕಳಿಗಾಗಿ ಫ್ಯಾಶನ್ ಶೋ
  ಮಣಿಪಾಲ, ಎ.15: ಮಣಿಪಾಲ ಎಂಐಟಿ ಆರ್ಕಿಟೆಕ್ಟ್ ಕಾಲೇಜಿನ ಫ್ಯಾಶನ್ ಹಾಗೂ ಒಳಾಂಗಣ ವಿನ್ಯಾಸ ವಿಭಾಗದ ವಿದ್ಯಾರ್ಥಿ ಗಳು ಮಣಿಪಾಲದ ‘ಆಸರೆ’ ವಿಶೇಷ ಮಕ್ಕಳ ಸಂಸ್ಥೆಯ ನೆರವಿ ಗಾಗಿ ವಿಶಿಷ್ಟವಾದ ಫ್ಯಾಶನ್ ಶೋ ಆಯೋಜಿಸಿದ್ದರು.
ಎಂಐಟಿಯ ಚತುಷ್ಕೋನದಲ್ಲಿ ಆಟಿಸಂ ಜಾಗೃತಿ ಸಪ್ತಾಹದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ.ಸುಮಾ ನಾಯಕ್ ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಆಸರೆಯ ವಿಶೇಷ ಮಕ್ಕಳೊಂದಿಗೆ ಫ್ಯಾಶನ್ ಶೋದಲ್ಲಿ ಭಾಗವಹಿಸಿದರು. ಆರ್ಕಿಟೆಕ್ಟ್‌ನ ಫ್ಯಾಶನ್ ಡಿಸೈನ್ ವಿದ್ಯಾರ್ಥಿಗಳು ರೂಪಿ ಸಿದ ವಿವಿಧ ವಿನ್ಯಾಸದ, ವಿವಿಧ ಬಣ್ಣಗಳ ಬಟ್ಟೆಗಳನ್ನು ಧರಿಸಿ ಆಸರೆಯ ವಿಶೇಷ ಮಕ್ಕಳು ಕ್ಯಾಟ್‌ವಾಕ್ ನಡೆಸಿದರು. ಈ ಕಾರ್ಯಕ್ರಮದಿಂದ ಸಂಗ್ರಹವಾದ ಸುಮಾರು ಒಂದು ಲಕ್ಷ ರೂ.ಗಳಿಗೂ ಅಧಿಕ ಮೊತ್ತವನ್ನು ‘ಆಸರೆ’ ಸಂಸ್ಥೆಗೆ ನೀಡುವುದಾಗಿ ಸಂಸ್ಥೆಯ ನಿರ್ದೇಶಕ ಪ್ರೊ. ನಿಶಾಂತ್ ಎಚ್.ಮನಾಪುರೆ ಪ್ರಕಟಿಸಿದರು. 

ಸಮುದಾಯದತ್ತ ಶಾಲೆ ಕಾರ್ಯಕ್ರಮ
ಮಂಗಳೂರು, ಎ.15: ಕುದ್ರೋಳಿಯ ಉರ್ದು ಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಅಖ್ತರ್ ಅಲಿಯ ಅಧ್ಯಕ್ಷತೆಯಲ್ಲಿ ಸಮುದಾಯದತ್ತ ಶಾಲೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಅತಿಥಿಯಾಗಿ ಭಾಗವಹಿಸಿದ ಗಫೂರ್ ಕುಳಾಯಿ ಶಿಕ್ಷಣದ ಮಹತ್ವದ ಬಗ್ಗೆ, ಕಾರ್ಪೊರೇಟರ್ ಅಬ್ದುಲ್ ಅಝೀಝ್ ದಿನದ ಮಹತ್ವದ ಬಗ್ಗೆ ಮಾತನಾಡಿದರು. ಜಾಯ್ಸೆ ಪಿಕಾರ್ಡೊ ಪರಿವೀಕ್ಷಕ ರಾಗಿ ಭಾಗವಹಿಸಿದ್ದರು.
ಸಭೆಯಲ್ಲಿ ಎಸ್‌ಡಿಎಂಸಿ ಸದಸ್ಯರಾದ ಉಮರ್ ಫಕೀರ್, ಖಲೀಲ್, ಮುಹಮ್ಮದ್ ಯೂಸುಫ್, ಫಾತಿಮಾ, ರತ್ನ, ರೊಹರಾ, ಜುಬೇದಾ, ಸುಮಯ್ಯ, ತಾಹಿರಾ, ಹಸೀನಾ, ರೇಷ್ಮಾ, ಮುಹಮ್ಮದ್ ಫೈಝಲ್, ಯಾಸಿನ್, ಸಬ್ರುನ್ನೀಸಾ, ಖತೀಜಾ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಮುಹಮ್ಮದ್ ಹನೀಫ್ ಸ್ವಾಗತಿಸಿದರು. ಸಹ ಶಿಕ್ಷಕಿ ಫಿಲೋಮಿನಾ ಸೆರಾವೊ ಕಾರ್ಯಕ್ರಮ ನಿರೂಪಿಸಿದರು.


ಜೇಸಿ ಸದಸ್ಯರಿಗೆ ತರಬೇತಿ ಶಿಬಿರ
ಬಂಟ್ವಾಳ, ಎ.15: ಜೇಸಿಐ ಬಂಟ್ವಾಳದ ವತಿಯಿಂದ ಬಿ.ಸಿ.ರೋಡಿನ ಯುವವಾಹಿನಿ ಸಭಾಂಗಣದಲ್ಲಿ ಜೇಸಿ ಸದಸ್ಯರಿಗೆ ನಡೆದ ತರಬೇತಿ ಕಾರ್ಯಾಗಾರ ನಡೆಯಿತು. ಜೇಸಿಐ ಬಂಟ್ವಾಳದ ಅಧ್ಯಕ್ಷ ಸಂತೋಷ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಯುವ ಜೇಸಿ ವಿಭಾಗದ ವಲಯ ಸಂಯೋಜಕ ರಾಧಕೃಷ್ಣ ಬಂಟ್ವಾಳ ಕಾರ್ಯಾಗಾರ ಉದ್ಘಾಟಿಸಿದರು. ಜೇಸಿ ತರಬೇತುದಾರ ಬಿ.ರಾಮಚಂದ್ರ ರಾವ್ ಮಾತನಾಡಿದರು. ಈ ಸಂದರ್ಭ ಬಂಟ್ವಾಳ ತಾಲೂಕು ಪತ್ರಕರ್ತರ ಸಂಘದ ರಜತ ವರ್ಷಚರಣೆಯ ಪ್ರಯುಕ್ತ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಪೋಡಿಯಂನ್ನು ಕೊಡುಗೆಯಾಗಿ ನೀಡಲಾಯಿತು.
ವೇದಿಕೆಯಲ್ಲಿ ವಲಯ 15ರ ಉಪಾಧ್ಯಕ್ಷ ಕೃಷ್ಣ ನಾರಾಯಣ ಮುಳಿಯ, ಪೂರ್ವ ರಾಷ್ಟ್ರೀಯ ನಿರ್ದೇಶಕ ಸಂಪತ್ ಬಿ. ಸುವರ್ಣ ಉಪಸ್ಥಿತರಿದ್ದರು. ನಿಕಟಪೂರ್ವ ಅಧ್ಯಕ್ಷ ಲೋಕೇಶ್ ಸುವರ್ಣ ಕಾರ್ಯಾಗಾರ ಸಂಯೋಜಿಸಿದ್ದರು. ಕಾರ್ಯದರ್ಶಿ ಡಾ. ಬಾಲಕೃಷ್ಣ ಕುಮಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News