ದಾಸನಕಜೆಯಲ್ಲಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ

Update: 2016-04-15 18:23 GMT

ಸುಳ್ಯ, ಎ.15: ಅಂಬೇಡ್ಕರ್ ಜಗತ್ತು ಕಂಡ ಮಾನವ ಹಕ್ಕುಗಳ ಪ್ರತಿಪಾದಕ. ದಲಿತ ನಾಯಕರೆಂದು ಅವರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಅವರು ದೇಶದ ನಾಯಕ ಎಂದು ಮಂಗಳೂರಿನ ಶ್ರೀ ನಾರಾಯಣಗುರು ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರ ಹೇಳಿದ್ದಾರೆ.

ನೆಲ್ಲೂರು ಕೆಮ್ರಾಜೆ ಗ್ರಾಪಂ, ದಾಸನಕಜೆಯ ದೀನದಯಾಳ್ ಎಜ್ಯುಕೇಶನ್ ಮತ್ತು ರೂರಲ್ ಅರ್ಬನ್ ಡೆವಲಪ್‌ಮೆಂಟ್ ಟ್ರಸ್ಟ್, ಶ್ರೀ ನಾಗಬ್ರಹ್ಮ ಆದಿಬ್ರಹ್ಮ ಮೊಗೇರ್ಕಳ ದೈವಸ್ಥಾನಗಳ ಆಶ್ರಯದಲ್ಲಿ ದೈವಸ್ಥಾನದ ವಠಾರದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್‌ರ 125ನೆ ಜಯಂತಿ ಆಚರಣಾ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.

ಅಂಬೇಡ್ಕರ್ ಈ ದೇಶದ ಮಹಾನ್ ವ್ಯಕ್ತಿಯಾಗಿ ಬಾಳಿದವರು. ಸಂವಿಧಾನವನ್ನು ರೂಪಿಸಿ ದೇಶದ ಆಡಳಿತ ವ್ಯವಸ್ಥೆಯನ್ನು ಗಟ್ಟಿಗೊಳಿಸಿದವರು. ಅಪಾರ ಜ್ಞಾನವನ್ನು ಹೊಂದಿದ್ದ ಅಂಬೇಡ್ಕರ್‌ರವರು ಹುಟ್ಟಿದ ದಿನವನ್ನು 100ಕ್ಕೂ ಮಿಕ್ಕಿ ಹೆಚ್ಚು ದೇಶಗಳಲ್ಲಿ ಆಚರಿಸಲಾಗುತ್ತದೆ ಎಂದು ಹೇಳಿದ ಅವರು ಅಂಬೇಡ್ಕರ್‌ಪ್ರತಿಪಾದಿಸಿರುವ ವಿಚಾರಧಾರೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಶಾಸಕ ಎಸ್.ಅಂಗಾರ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಹರೀಶ್ ಕಂಜಿಪಿಲಿ, ತಾಪಂ ಸದಸ್ಯೆ ವಿದ್ಯಾಲಕ್ಷ್ಮೀ ಎರ್ಮೆಟ್ಟಿ, ಗ್ರಾಪಂ ಅಧ್ಯಕ್ಷ ಈಶ್ವರಪ್ಪ ಗೌಡ, ದಾಸನಕಜೆ ಶ್ರೀ ನಾಗಬ್ರಹ್ಮ ಆದಿಬ್ರಹ್ಮ ದೈವಸ್ಥಾನದ ಅಧ್ಯಕ್ಷ ಕೃಷ್ಣ ಸುಳ್ಳಿ ಉಪಸ್ಥಿತರಿದ್ದರು. ನ್ಯಾಯವಾದಿ ಜಗದೀಶ್ ಡಿ.ಪಿ. ಸ್ವಾಗತಿಸಿ, ಬಾಬು ದಾಸನಕಜೆ ವಂದಿಸಿದರು. ಪ್ರಶಾಂತ್ ಮತ್ತು ಪ್ರಸಾದ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News