ಬೆಳಪು ವಿಜ್ಞಾನ ಕೇಂದ್ರಕ್ಕೆ 50 ಕೋ.ರೂ. ಅನುದಾನ ಬಿಡುಗಡೆ: ಸಚಿವ ಜಯಚಂದ್ರ

Update: 2016-04-15 18:52 GMT

ಕಾಪು, ಎ.15: ಬೆಳಪುವಿನಲ್ಲಿ ಸುಮಾರು 140 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಿಜ್ಞಾನ ಸಂಶೋಧನಾ ಕೇಂದ್ರಕ್ಕೆ ಸದ್ಯಕ್ಕೆ ಅಗತ್ಯ ಇರುವ 50 ಕೋಟಿ ರೂ. ಅನುದಾನವನ್ನು ಈ ವರ್ಷವೇ ಬಿಡುಗಡೆ ಮಾಡಲಾಗುವುದು ಎಂದು ರಾಜ್ಯ ಕಾನೂನು ಹಾಗೂ ಉನ್ನತ ಶಿಕ್ಷಣ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.

ಬೆಳಪುವಿಗೆ ಇಂದು ಭೇಟಿ ನೀಡಿ ವಿಜ್ಞಾನ ಕೇಂದ್ರದ ರೂಪುರೇಷೆ ಯನ್ನು ಪರಿಶೀಲಿಸಿದ ಬಳಿಕ ಮಾಧ್ಯಮದ ವರೊಂದಿಗೆ ಅವರು ಮಾತನಾಡುತ್ತಿದ್ದರು.

ಈ ಕೇಂದ್ರಕ್ಕೆ ಈಗಾಗಲೇ 20 ಎಕರೆ ಜಾಗವನ್ನು ನೀಡಲಾಗಿದ್ದು, ಇನ್ನು ಹೆಚ್ಚುವರಿಯಾಗಿ 14 ಎಕರೆ ಜಾಗ ಒದಗಿಸಿ ಗಡಿ ಗುರುತಿಸುವ ಕಾರ್ಯ ಮಾಡ ಲಾಗುವುದು. ಈ ಯೋಜನೆಗೆ ಬೇಕಾದ ಸಂಪೂರ್ಣ ಹಣವನ್ನು ರಾಜ್ಯ ಸರಕಾರ ಒದಗಿಸಲಿದೆ. ಕೇಂದ್ರದ ಕಾಮಗಾರಿಯನ್ನು ಮುಂದಿನ ಎರಡು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದರು.

ಪಶ್ಚಿಮ ಘಟ್ಟದ ಮೇಲಾಗುತ್ತಿರುವ ಹಾನಿ ಹಾಗೂ ಪರಿಸರ ಮಾಲಿನ್ಯದ ಪರಿಣಾಮವನ್ನು ಇಂದು ದೇಶವೇ ಅನುಭವಿಸುತ್ತಿದೆ. 4ರಿಂದ 5 ಡಿಗ್ರಿ ತಾಪಮಾನ ಏರಿಕೆಯಾಗಿದೆ. ಆದ್ದರಿಂದ ಈ ದೆಸೆಯಲ್ಲಿ ಸಂಶೋಧನೆ ಆಗಬೇಕಾಗಿದೆ. ಜೀವವೈವಿಧ್ಯವನ್ನು ಉಳಿಸುವ ಕಾರ್ಯ ಮಾಡಬೇಕು. ಅದಕ್ಕೆ ನ್ಯಾನೋ ತಂತ್ರಜ್ಞಾನ ಉತ್ತಮ ದಾರಿಯಾಗಿದೆ. ಈ ಕೇಂದ್ರವನ್ನು ಇದೇ ಉದ್ದೇಶದಿಂದ ನಿರ್ಮಿಸಲಾಗುತ್ತಿದೆ. ಇಲ್ಲಿ ಇದೇ ವಿಚಾರಗಳ ಕುರಿತ ಸಂಶೋಧನೆಗೆ ಆದ್ಯತೆ ನೀಡಲಾಗುತ್ತದೆ ಎಂದರು.

ರಾಜ್ಯದಲ್ಲಿ 22 ಕುಟುಂಬ ನ್ಯಾಯಾ ಲಯ ಸ್ಥಾಪಿಸುವ ಕುರಿತು ಈ ಬಾರಿಯ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇದಕ್ಕೂ ಮೊದಲೇ 22 ಕಡೆ ನ್ಯಾಯಾಲಯ ಸ್ಥಾಪಿಸುವ ಬಗ್ಗೆ ಪ್ರಸ್ತಾಪಗಳು ಬಂದಿತ್ತು. ಈ ಬಗ್ಗೆ ಹೈಕೋರ್ಟ್ ಕೂಡ ಸೂಚನೆ ನೀಡಿತ್ತು. ಈ ಪ್ರಸ್ತಾಪ ಇದೀಗ ಆರ್ಥಿಕ ಇಲಾಖೆಯಲ್ಲಿ ಬಾಕಿ ಇದೆ. ಉಡುಪಿ ಯಲ್ಲಿ ಸುಮಾರು 600 ಕೌಟುಂಬಿಕ ಪ್ರಕರಣಗಳು ಬಾಕಿ ಇರುವು ದರಿಂದ ಉಡುಪಿಯನ್ನು ಸೇರಿಸಿ ಮಂಜೂರು ಮಾಡಲಾಗುವುದು ಎಂದು ಜಯಚಂದ್ರ ತಿಳಿಸಿದರು.

ವಿವಿಗಳ ಪ್ರಶ್ನೆ ಪತ್ರಿಕೆ, ಅಂಕಪಟ್ಟಿಗಳ ಸಮಸ್ಯೆಗಳಿಗೆ ಮಾಹಿತಿ ಸಂಪರ್ಕ ತಂತ್ರಜ್ಞಾನವೇ ಪರಿಹಾರ. ಈ ಹಿಂದೆ ಪರೀಕ್ಷೆ, ಪ್ರಶ್ನೆಪತ್ರಿಕೆಗೆ ಸಂಬಂಧಿಸಿ ತಂತ್ರಜ್ಞಾನವನ್ನು ಅಳವಡಿಸಿಕೊಂಡೇ ಇಲ್ಲ. ಈ ಬಾರಿಯ ಬಜೆಟ್‌ನಲ್ಲಿ ಮಾಹಿತಿ ಸಂಪರ್ಕ ತಂತ್ರಜ್ಞಾನಕ್ಕಾಗಿ ಸುಮಾರು 100 ಕೋಟಿ ರೂ. ಮೀಸಲಿರಿಸಲಾಗಿದೆ ಎಂದವರು ಹೇಳಿದರು.
ಆನ್‌ಲೈನ್ ವ್ಯವಸ್ಥೆಯನ್ನು ಅಭಿವೃದ್ಧಿ ಗೊಳಿಸಿ, ಮುಂದಿನ ಎರಡು ಮೂರು ತಿಂಗಳಲ್ಲಿ ಅನುಷ್ಠಾನಗೊಳಿಸಲಾಗುವುದು. ಇದರಿಂದ ಪಾರದರ್ಶಕತೆ ಮೂಡಿ ಪ್ರಶ್ನೆ ಪತ್ರಿಕೆ, ಅಂಕ ಪಟ್ಟಿ ಸಮಸ್ಯೆ ಸರಿಪಡಿಸಲು ಸಾಧ್ಯವಾಗುತ್ತದೆ ಎಂದರು.

ಈವರೆಗೆ ಪ್ರಶ್ನೆಪತ್ರಿಕೆ, ಅಂಕಪಟ್ಟಿಯನ್ನು ಹೊರಗುತ್ತಿಗೆಯ ಮೂಲಕ ಖಾಸಗಿಯವರಿಗೆ ನೀಡಲಾಗುತ್ತಿತ್ತು. ಇನ್ನು ಹೊರಗುತ್ತಿಗೆಗೆ ನೀಡುವುದಿಲ್ಲ. ಉನ್ನತ ಶಿಕ್ಷಣದ ಎಲ್ಲ ಪರೀಕ್ಷೆಗಳನ್ನು ಮಂಡಳಿಯ ಮೂಲಕವೇ ನಡೆಸ ಲಾಗುವುದು. ಮಾಹಿತಿ ಸಂಪರ್ಕ ತಂತ್ರಜ್ಞಾನದ ವ್ಯಾಪ್ತಿ ಯಲ್ಲಿ ಬಂದರೆ ಯಾವುದೇ ಸಮಸ್ಯೆಯಾ ಗುವುದಿಲ್ಲ ಎಂದು ಅವರು ಹೇಳಿದರು.

ಎತ್ತಿನಹೊಳೆಯಿಂದ ಪಶ್ಚಿಮಘಟ್ಟಕ್ಕೆ ಯಾವುದೇ ತೊಂದರೆಯಿಲ್ಲ. ವರ್ಷ ಪೂರ್ತಿ ಎತ್ತಿನಹೊಳೆಯಿಂದ ನೀರು ತೆಗೆಯುವುದಿಲ್ಲ. ಕೇವಲ ಮೂರು ನಾಲ್ಕು ತಿಂಗಳು ಮಾತ್ರ ನೀರನ್ನು ಟ್ಯಾಪ್ ಮಾಡಿ ತೆಗೆಯಲಾಗುತ್ತದೆ. ಈ ಬಗ್ಗೆ ಜನರಲ್ಲಿ ಗೊಂದಲ ಮೂಡಿದ್ದು, ಅವರಿಗೆ ಮನವರಿಕೆ ಮಾಡಿಸಲಾಗುವುದು. ಅದೇ ರೀತಿ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಪಕ್ಷದ ನಾಯಕ ಜನಾರ್ದನ ಪೂಜಾರಿ ಅವರಿಗೂ ಮನವರಿಕೆ ಮಾಡಲಾಗುವುದು ಎಂದು ಸಚಿವ ಜಯಚಂದ್ರ ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ, ಮಂಗಳೂರು ವಿವಿಯ ಕುಲಪತಿ ಡಾ.ಭೈರಪ್ಪ, ಕುಲಸಚಿವ ಕೆಂಪರಾಜ್, ಆರ್ಥಿಕ ಅಧಿಕಾರಿ ಪ್ರೊ.ರೇಗೋ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News