ಮುಂದಿನ ತಿಂಗಳು ಉಡುಪಿಯಲ್ಲಿ ಗ್ರಾಮ ವಾಸ್ತವ್ಯ: ಸಚಿವ ಆಂಜನೇಯ

Update: 2016-04-16 18:13 GMT

ಉಡುಪಿ, ಎ.16: ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಹಾಗೂ ಕೊರಗರ ಸಮಸ್ಯೆಗಳನ್ನು ಅರಿಯಲು ಯಾವುದಾದರೊಂದು ಕಾಲನಿಯ ಮನೆಯಲ್ಲಿ ಗ್ರಾಮ ವಾಸ್ತವ್ಯ ಮಾಡುವುದಾಗಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಎಚ್. ಆಂಜನೇಯ ಹೇಳಿದ್ದಾರೆ.

ಶನಿವಾರ ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರು ಈ ವಿಷಯ ತಿಳಿಸಿದರು.

ರಾಜ್ಯದಲ್ಲಿರುವ ಪರಿಶಿಷ್ಟರು, ದಲಿತರು ಹಾಗೂ ಇತರೆ ಹಿಂದುಳಿದ ವರ್ಗಗಳ ಅಭಿವೃದ್ಧಿ ಗಾಗಿ ಈ ಬಾರಿಯ ಬಜೆಟ್‌ನಲ್ಲಿ ಸಮಾಜ ಕಲ್ಯಾಣ ಇಲಾಖೆಗೆ 16,000 ಕೋಟಿ ರೂ. ನೀಡಿದ್ದು, ಹಿಂದಿನ ವರ್ಷದಲ್ಲಿ ವೆಚ್ಚ ಮಾಡದೇ ಇರುವ ಅನುದಾನವನ್ನು ಈ ವರ್ಷ ವೆಚ್ಚ ಮಾಡಲು ನಿರ್ಧರಿಸಲಾಗಿದೆ ಎಂದರು.

ಈ ಮೂಲಕ 33 ವಿವಿಧ ಇಲಾಖೆಗಳ ವಿವಿಧ ಯೋಜನೆಗಳ ಮೂಲಕ ಒಟ್ಟು 19,500 ಕೋಟಿ ರೂ. ವೆಚ್ಚ ಮಾಡಲಾಗುವುದು. ದಲಿತರಿಗೆ ಮೀಸಲಿಟ್ಟ ಅನುದಾನವನ್ನು ವೆಚ್ಚ ಮಾಡದೆ, ಉದ್ದೇಶಪೂರ್ವಕವಾಗಿ ನಿರ್ಲಕ್ಷ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಹಿಂದುಳಿದವರ ಮತ್ತು ದಲಿತ ವರ್ಗದ ಅಭಿವೃದ್ಧಿಗೆ ನಮ್ಮ ಸರಕಾರ ಆದ್ಯತೆ ನೀಡಿದೆ ಎಂದು ಸಚಿವರು ಹೇಳಿದರು.

ಅತ್ಯಂತ ಹಿಂದುಳಿದ ಕೊರಗ ಸಮುದಾಯದ ಸಮಸ್ಯೆಗಳನ್ನು ಅರಿಯಲು ಮಂಗಳೂರಿನಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದು, ಅವರ ಸಮು ದಾಯದ ಮುಖಂಡರು ಮತ್ತು ಅಧಿಕಾರಿಗ ಳೊಂದಿಗೆ ಚರ್ಚಿಸಿ 10 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ. ಕೊರಗರಲ್ಲಿ ಜೀವಿತಾವಧಿಯ ಪ್ರಮಾಣ ಇತರರಿಗಿಂತ ಕಡಿಮೆ ಇದ್ದು, ಅವರಿಗೆ ಉತ್ತಮ ವೈದ್ಯಕೀಯ ಸೌಲಭ್ಯ ಮತ್ತು ಪೌಷ್ಟಿಕಾಂಶಯುಕ್ತ ಆಹಾರ ಸರಬರಾಜು ಮಾಡಲಾಗುವುದು ಎಂದು ಆಂಜನೇಯ ತಿಳಿಸಿದರು.

ಈ ಸಂದರ್ಭ ಶಾಸಕ ಪ್ರಮೋದ್ ಮಧ್ವರಾಜ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪ್ರೇಮನಾಥ್, ಜಿಲ್ಲಾ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಯ ಅಧಿಕಾರಿ ಹರೀಶ್ ಗಾಂವಕರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.
 

ಹೈಕಮಾಂಡ್‌ನಿಂದ ಸೂಚನೆ

ರಾಜ್ಯ ಸಚಿವ ಸಂಪುಟದ ಪ್ರತಿಯೊಬ್ಬ ಉಸ್ತುವಾರಿ ಸಚಿವರು ಆಯಾ ಜಿಲ್ಲೆಯಲ್ಲೇ ಇದ್ದು, ಬರ ಪರಿಹಾರ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದು ಹೈಕಮಾಂಡ್ ಕಟ್ಟುನಿಟ್ಟಿನ ಆದೇಶ ನೀಡಿದೆ. ಅದರಂತೆ ತಾನೂ ಚಿತ್ರದುರ್ಗ ಜಿಲ್ಲೆಯಲ್ಲೇ ಇದ್ದು, ಈಗ ಮತ್ತೆ ಅಲ್ಲಿಗೆ ತೆರಳಿ ಬರ ಪರಿಹಾರ ಕಾರ್ಯದ ಉಸ್ತುವಾರಿ ನೋಡಿಕೊಳ್ಳುತ್ತೇನೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಯಡಿಯೂರಪ್ಪ ನೇಮಕದ ಕುರಿತು ಪ್ರಶ್ನಿಸಿದಾಗ ಕಾಂಗ್ರೆಸ್‌ಗೆ ಇದರಿಂದ ನಡುಕವೇನು ಉಂಟಾಗಿಲ್ಲ. ಇತ್ತೀಚಿನ ವರೆಗೆ ಆ ಪಕ್ಷಕ್ಕೆ ಸಾಕಷ್ಟು ಸಂಖ್ಯೆಯ ಅಭ್ಯರ್ಥಿಗಳೇ ಸಿಗುತ್ತಿರಲಿಲ್ಲ. ಆದರೆ ಇತ್ತೀಚೆಗೆ ವಿವಿಧ ಕಾರಣಗಳಿಂದ ಪಕ್ಷ ಚೇತರಿಸಿಕೊಂಡಿದೆ. ಪ್ರಬಲ ವಿರೋಧ ಇರುವುದು ನಮಗೂ ಒಳ್ಳೆಯದು. ಆದರೆ ಯಡಿಯೂರಪ್ಪ ನೇಮಕದಿಂದ ನಮಗೆ ನಡುಕ ಉಂಟಾಗಿಲ್ಲ ಎಂದರು.

ಮೂಢನಂಬಿಕೆ ಕಾಯ್ದೆ ಕೈಬಿಟ್ಟಿಲ್ಲ
ರಾಜ್ಯ ಸರಕಾರ ಮೂಢನಂಬಿಕೆ ನಿಷೇಧ ಕಾಯ್ದೆಯನ್ನು ಕೈಬಿಟ್ಟಿಲ್ಲ. ಈ ಪ್ರಸ್ತಾವವನ್ನು ಹಿಂದೆಗೆದುಕೊಂ ಡಿಲ್ಲ. ಕಾಯ್ದೆಯ ಬಗ್ಗೆ ಪರ-ವಿರುದ್ಧ ಚರ್ಚೆ ನಡೆಯುತ್ತಿದೆ. ಸರಕಾರ ವೈಜ್ಞಾನಿಕ ಆಚರಣೆಗೆ ವಿರೋಧ ಸೂಚಿಸಿಲ್ಲ. ಆದರೆ ನಂಬಿಕೆಯ ಹೆಸರಿನಲ್ಲಿ ಮುಗ್ಧ ಜನರ ವಂಚನೆ ಸರಿಯಲ್ಲ. ಪೇಜಾವರ ಶ್ರೀಗಳೊಂದಿಗೆ ಸಹ ಈ ಕಾಯ್ದೆ ಬಗ್ಗೆ ಮಾತನಾಡಿದ್ದೇನೆ. ಅವರು ಈ ಕಾಯ್ದೆಗೆ ವಿರೋಧ ಸೂಚಿಸಿಲ್ಲ. ಇದರ ಬಗ್ಗೆ ವ್ಯಾಪಕ ಚರ್ಚೆಯಾಗಬೇಕು ಎಂದಿದ್ದಾರೆ.

ಶ್ರೀಕೃಷ್ಣ ಮಠಕ್ಕೆ ದಿಢೀರ್ ಭೇಟಿಯ ಬಗ್ಗೆ ಕೇಳಿ ದಾಗ, ಗುರುಗಳ ಮೇಲಿನ ಗೌರವದಿಂದ ಬಂದಿದ್ದೇನೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಠಕ್ಕೆ ಭೇಟಿ ನೀಡದ ಬಗ್ಗೆ ಕೇಳಿದಾಗ, ಪ್ರಾಯಶ: ಅವರಿಗೆ ಅವಕಾಶ ಕೂಡಿ ಬಂದಿಲ್ಲ. ಹೀಗಾಗಿ ಬಂದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News