ಕದ್ರಿ ಜಿಂಕೆ ಪಾರ್ಕ್‌ನಲ್ಲಿ ಅನಧಿಕೃತ ಕಟ್ಟಡ!: ತೆರವಿಗೆ ಜಿಲ್ಲಾಧಿಕಾರಿ ಸೂಚನೆ

Update: 2016-04-16 18:15 GMT


 

ಮಂಗಳೂರು, ಎ.16: ಕದ್ರಿ ಪಾರ್ಕ್ ಬಳಿಯ ಈ ಹಿಂದಿನ ಜಿಂಕೆ ಪಾರ್ಕ್‌ನಲ್ಲಿ ಬಯಲು ಮತ್ತು ಉದ್ಯಾನವನ ನಿಯಮವನ್ನು ಉಲ್ಲಂಘಿಸಿ ಸುಮಾರು 20ರಷ್ಟು ಕಟ್ಟಡ-ಮಳಿಗೆಗಳನ್ನು ಅನಧಿಕೃತವಾಗಿ ನಿರ್ಮಿಸಲಾಗಿದ್ದು, ಅದನ್ನು ತೆರವುಗೊಳಿ ಸುವಂತೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ತೋಟಗಾರಿಕಾ ಇಲಾಖೆಯ ಉಪನಿರ್ದೇ ಶಕರಿಗೆ ಸುತ್ತೋಲೆಯ ಮೂಲಕ ಆದೇಶಿಸಿದ್ದಾರೆ.

ಅಲ್ಲಿ ನಿರ್ಮಾಣವಾಗಿರುವ ಅಂಗಡಿ ಹಾಗೂ ಮಳಿಗೆಗಳು ಯಾವುದೇ ಅಧಿಕಾರಿ, ಇಲಾಖೆ ಅಥವಾ ಸಂಸ್ಥೆಗಳಿಂದ ಅನುಮೋದನೆಯಾಗಿದ್ದರೂ ಕೂಡ ಕಟ್ಟಡಗಳ ಕೆಲಸವನ್ನು ನಿಲ್ಲಿಸಬೇಕು. ಒಂದು ವೇಳೆ ಕೆಲಸ ನಿಲ್ಲಿಸದಿದ್ದರೆ ಬಯಲು ಮತ್ತು ಉದ್ಯಾನವನ ಕಾಯ್ದೆ ಪ್ರಕಾರ ಸಂಬಂಧಪಟ್ಟವರ ಮೇಲೆ ಕೂಡಲೇ ಪ್ರಕರಣ ದಾಖಲು ಮಾಡಲು ಕ್ರಮ ವಹಿಸುವಂತೆ ಸೂಚಿಸಿದ್ದಾರೆ. ಈ ಬಗ್ಗೆ ತೆಗೆದುಕೊಂಡ ಕ್ರಮಗಳ ಕುರಿತು ಎ.18ರೊಳಗೆ ವರದಿ ಸಲ್ಲಿಸುವಂತೆ ನಿರ್ದೇಶಿಸಿದ್ದಾರೆ.

ಎ.15ರಂದು ಜಿಪಂ ಸಿಇಒ ಜೊತೆ ಕದ್ರಿ ಪಾರ್ಕ್‌ನ ಬಳಿ ಇರುವ ಜಿಂಕೆ ಪಾರ್ಕ್ ನ ಒಳಗಡೆ ಪ್ರಸ್ತಾವಿತ ಕಾರಂಜಿ ಪಾರ್ಕ್‌ನ ಕಾಮಗಾರಿಯನ್ನು ಪರಿಶೀಲಿಸಲಾಗಿದೆ. ಆದರೆ ಅಲ್ಲಿ ಈ ಹಿಂದೆ ಕಾನೂನು ಬಾಹಿರವಾಗಿ ಮರಗಳನ್ನು ಕಡಿಯಲಾಗಿದೆ. ಈ ಬಗ್ಗೆ ಯಾವುದೇ ಇಲಾಖೆಯಿಂದ ಅನುಮತಿ ಪಡೆಯದಿರುವುದು ಸಹ ಗಮನಕ್ಕೆ ಬಂದಿದ್ದು, ಈ ಬಗ್ಗೆ ಪರಿಶೀಲಿಸಿ ತಕ್ಷಣ ವರದಿ ಸಲ್ಲಿಸಬೇಕು ಎಂದಿದ್ದಾರೆ.

ರಾಜ್ಯದ ಎಲ್ಲಾ ಪಾರ್ಕ್‌ಗಳು 1985ರ ಬಯಲು ಮತ್ತು ಉದ್ಯಾನವನದ ಕಾಯ್ದೆಗೆ ಒಳಪಟ್ಟಿವೆ. ಅದರ ಪ್ರಕಾರ ಉದ್ಯಾನವನದ ಕೆಲಸ ಬಿಟ್ಟು ಬೇರೆ ಯಾವುದೇ ಕಟ್ಟಡ, ಮಳಿಗೆಗಳು ಮೊದಲಾದ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ. ಹಾಗಿದ್ದರೂ ಜಿಂಕೆ ಪಾರ್ಕ್‌ನಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಿರುವುದರಿಂದ ರಸ್ತೆಯಲ್ಲಿ ಸಾರ್ವಜನಿಕರಿಗೆ ಸಂಚರಿಸಲು ಅನಾನುಕೂಲವಾಗಿದೆ. ಈ ಅಂಗಡಿಗಳಿಂದಾಗಿ ತ್ಯಾಜ್ಯ ವಸ್ತುಗಳ ಸಂಗ್ರಹವಾಗುತ್ತಿದ್ದು, ಪರಿಸರ ಮಾಲಿನ್ಯವೂ ಆಗಿದೆ. ಪಾರ್ಕ್‌ನ ಸೌಂದರ್ಯ ವೀಕ್ಷಣೆಗೆ ಇದರಿಂದ ಅಡಚಣೆಯಾಗಿದೆ. ಪಾರ್ಕ್‌ನ ನಿಷೇಧಿತ ಕಾಮಗಾರಿಯನ್ನು ತಕ್ಷಣ ನಿಲ್ಲಿಸಿ ಕೇವಲ ಪಾರ್ಕ್‌ನ ಉದ್ದೇಶಕ್ಕೆ ಮಾತ್ರ ಸೀಮಿತಗೊಳಿಸಬೇಕು.

ಈ ಹಿಂದೆಯೂ ಈ ರೀತಿ ಕಾನೂನು ಉಲ್ಲಂಘಿಸಿ ಕಾಮಗಾರಿ ಆಗಿರುವ ಬಗ್ಗೆ ಉಚ್ಚ ನ್ಯಾಯಾಲಯ ತೀವ್ರವಾಗಿ ಪರಿಗಣಿಸಿ ಹಲವಾರು ಪಾರ್ಕ್‌ಗಳಲ್ಲಿ ಅನಧಿಕೃತ ಕಟ್ಟಡಗಳ ತೆರವಿಗೆ ಆದೇಶ ನೀಡಿದೆ ಎಂಬುದಾಗಿ ಅವರು ತಮ್ಮ ಸುತ್ತೋಲೆಯಲ್ಲಿ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News