ಬಂಟ್ವಾಳ: ಅಮ್ಟಾಡಿ ಗ್ರಾಪಂ ವ್ಯಾಪ್ತಿಯಲ್ಲಿ ಡೆಂಗ್ ಹಾವಳಿ

Update: 2016-04-16 18:27 GMT

 ಬಂಟ್ವಾಳ, ಎ. 16: ತಾಲೂಕಿನ ಅಮ್ಟಾಡಿ ಗ್ರಾಪಂ ವ್ಯಾಪ್ತಿಯಲ್ಲಿ ಶಂಕಿತ ಡೆಂಗ್ ಹಾಗೂ ಮಲೇರಿಯಾ ಪ್ರಕರಣಗಳು ಪತ್ತೆಯಾಗಿದ್ದು, ಗ್ರಾಮದ ನಾಗರಿಕರು ಭಯಭೀತರಾಗಿದ್ದಾರೆ. ಅಮ್ಟಾಡಿ ಗ್ರಾಪಂ ವ್ಯಾಪ್ತಿಯಲ್ಲಿ ಎರಡು ವಾರಗಳಿಂದ ಸುಮಾರು 16 ಮಂದಿಯಲ್ಲಿ ಶಂಕಿತ ಡೆಂಗ್ ಪ್ರಕರಣ ಹಾಗೂ ಒಂದು ಮಲೇರಿಯಾ ಪ್ರಕರಣ ಪತ್ತೆಯಾಗಿದೆ.

ರೋಗ ಬಾಧಿತರಲ್ಲಿ ಕೆಲವರು ಚಿಕಿತ್ಸೆಯ ಬಳಿಕ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಏಳೆಂಟು ಮಂದಿ ತುಂಬೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೆಲವರು ಚೇತರಿಸಿಕೊಂಡಿದ್ದಾರೆ.

ಗ್ರಾಮದ ಜನರಿಗೆ ರೋಗ ಬಾಧಿಸುತ್ತಿರುವ ಬಗ್ಗೆ ಸ್ಥಳೀಯ ಮುಖಂಡರು ಗ್ರಾಪಂ ಹಾಗೂ ತಾಪಂ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಆದರೆ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ ತೋರಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳೀಯ ಮುಖಂಡರು ಜಿಲ್ಲಾ ಆರೋಗ್ಯ ಅಧಿಕಾರಿಯನ್ನು ಭೇಟಿ ಮಾಡಿ ದೂರು ನೀಡಿದ್ದರು.

ತಕ್ಷಣ ಕಾರ್ಯ ಪ್ರವೃತ್ತರಾದ ಆರೋಗ್ಯಾಧಿಕಾರಿ ರೋಗ ಪೀಡಿತರು ಚಿಕಿತ್ಸೆ ಪಡೆಯುತ್ತಿರುವ ತುಂಬೆ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಗ್ರಾಮಕ್ಕೆ ಭೇಟಿ ನೀಡಿ ಸುತ್ತಮುತ್ತಲಿನ ಪರಿಸರವನ್ನು ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆಯ ವೇಳೆ ಗ್ರಾಮದಸತೋಟಗಳ ತೋಡುಗಳಲ್ಲಿ ಹಾಗೂ ಅಡಿಕೆ ಹಾಳೆಗಳಲ್ಲಿ ನೀರು ನಿಂತಿರುವುದು ಪತ್ತೆಯಾಗಿದ್ದು, ಈ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ರೋಗ ಹರಡಿರುವ ಬಗ್ಗೆ ಅವರು ಶಂಕೆ ವ್ಯಕ್ತಪಡಿಸಿದ್ದಾರೆ.

ಡೆಂಗ್ ಪ್ರಕರಣ ಪತ್ತೆಯಾದ ಪ್ರದೇಶದಲ್ಲಿ ಫಾಗಿಂಗ್ ನಡೆಸುವಂತೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವಂತೆ ಗ್ರಾಪಂ ಹಾಗೂ ತಾಪಂ ಅಧಿಕಾರಿಗಳಿಗೆ ಜಿಲ್ಲಾ ಆರೋಗ್ಯಾಧಿಕಾರಿ ಇದೇ ವೇಳೆ ಸೂಚನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News