ಮೂರು ಪಂಚಾಯತ್ ಸ್ಥಾನಗಳಿಗೆ ಶಾಂತಿಯುತ ಉಪಚುನಾವಣೆ

Update: 2016-04-17 12:16 GMT

ಸುಳ್ಯ: ಸುಳ್ಯ ತಾಲೂಕಿನಲ್ಲಿ ತೆರವಾಗಿರುವ ಎರಡು ಗ್ರಾಮ ಪಂಚಾಯತ್ ಹಾಗೂ ಒಂದು ನಗರ ಪಂಚಾಯತ್ ಸ್ಥಾನಕ್ಕೆ ಆದಿತ್ಯವಾರ ಉಪ ಚುನಾವಣೆಯು ಶಾಂತಿಯುತವಾಗಿ ನಡೆಯಿತು.

ಸುಳ್ಯ ನಗರ ಪಂಚಾಯತ್‌ನ 1ನೇ ವಾರ್ಡ್‌ನ ಸದಸ್ಯರಾಗಿದ್ದ ಚಂದ್ರಕುಮಾರ್‌ರವರ ಆಕಸ್ಮಿಕ ನಿಧನದಿಂದ ತೆರವಾಗಿದ್ದ ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ ನಡೆಯಿತು. ಬಿಜೆಪಿಯಿಂದ ದುಗಲಡ್ಕ ವಾರ್ಡ್ ಸಮಿತಿ ಅಧ್ಯಕ್ಷ ದಿನೇಶ್ ಮಣಿಯಾಣಿ , ಕಾಂಗ್ರೆಸ್‌ನಿಂದ ಚಂದ್ರಕುಮಾರ್‌ರ ಸಹೋದರ ಶಿವಕುಮಾರ್ ಕಂದಡ್ಕ ಸ್ಪರ್ಧಾ ಕಣದಲ್ಲಿದ್ದಾರೆ. ಇಲ್ಲಿ 347 ಪುರುಷ ಮತ್ತು 339 ಮಹಿಳೆಯರು ಒಟ್ಟು 686 ಮಂದಿ ಮತದಾರರಿದ್ದು, ಸರಕಾರಿ ಪ್ರೌಢಶಾಲೆ ದುಗಲಡ್ಕದಲ್ಲಿ ಮತದಾನ ನಡೆಯಿತು.

 ಅಮರಮುಡ್ನೂರು ಗ್ರಾ.ಪಂ.ನ ಅಮರಪಡ್ನೂರು 2ನೇ ಕ್ಷೇತ್ರದಲ್ಲಿ ತೆರವಾಗಿದ್ದ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತರಾಗಿ ಅಶೋಕ್ ಚೂಂತಾರು, ಬಿಜೆಪಿ ಬೆಂಬಲಿತರಾಗಿ ರತಿನ್ ಚೂಂತಾರು ಕಣದಲ್ಲಿದ್ದಾರೆ. ಇಲ್ಲಿ 851 ಮಂದಿ ಮತದಾರರಿದ್ದಾರೆ. 419 ಪುರುಷರು, 432 ಮಹಿಳೆಯರಿದ್ದು, ಈ ಕ್ಷೇತ್ರದವರು ದ.ಕ.ಜಿ.ಪ. ಹಿ.ಪ್ರಾ.ಶಾಲೆ ಶೇಣಿಯಲ್ಲಿ ಮತದಾನ ಮಾಡಿದರು.

ಕಲ್ಮಡ್ಕ ಗ್ರಾ.ಪಂ.ನ 1ನೇ ವಾರ್ಡ್‌ನಲ್ಲಿ ತೆರವಾಗಿರುವ ಪಡ್ಪಿನಂಗಡಿ 1ನೇ ವಾರ್ಡಿನಲ್ಲಿ ಬಿಜೆಪಿ ಬೆಂಬಲಿತರಾಗಿ ರವೀಶ್ ಆಕ್ರಿಕಟ್ಟೆ ಕಾಂಗ್ರೆಸ್ ಬೆಂಬಲಿತರಾಗಿ ಲೋಕೇಶ್ ಆಕ್ರಿಕಟ್ಟೆ ಕಣದಲ್ಲಿದ್ದರು. ಈ ಬಾರಿ ಇಲ್ಲಿ 495 ಪುರುಷ, 510 ಮಹಿಳೆಯವರು ಹೀಗೆ ಒಟ್ಟು 1005 ಮಂದಿ ಮತದಾರರಿದ್ದರು. ಇಲ್ಲಿಯ ಮತದಾರರು ಹಿ.ಪ್ರಾ.ಶಾಲೆ ಪಡ್ಪಿನಂಗಡಿ ಯಲ್ಲಿ ಮತದಾನ ಮಾಡಿದರು. ದೇವಚಳ್ಳ ಹಾಗೂ ಎಡಮಂಗಲ ಗ್ರಾ.ಪಂ.ನ ತಲಾ ಒಂದು ಸ್ಥಾನಗಳು ತೆರವಾಗಿದ್ದು, ಅವುಗಳಿಗೆ ಅವಿರೋಧ ಆಯ್ಕೆಯಾಗಿರುವುದರಿಂದ ಚುನಾವಣೆ ನಡೆದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News