ಸುಡುಮದ್ದು ಸುರಕ್ಷತೆ ವಿಚಾರದಲ್ಲಿ ರಿಯಾಯಿತಿ ನೀಡದಂತೆ ಕೇಂದ್ರದಿಂದ ಕಟ್ಟು ನಿಟ್ಟಿನ ಆದೇಶ- ಡಿ.ವಿ. ಸದಾನಂದ ಗೌಡ

Update: 2016-04-17 12:19 GMT

ಪುತ್ತೂರು, ಎ. 17: ಕೇರಳದ ಕೊಲ್ಲಂನಲ್ಲಿ ನಡೆದ ಇತಿಹಾಸ ಭೀಕರ ಸುಡುಮದ್ದು ದುರಂತದ ಕುರಿತು ಕೇಂದ್ರ ಸರಕಾರವು ಗಂಭೀರ ಕ್ರಮಗಳನ್ನು ಕೈಗೊಂಡಿದ್ದು, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿದೆ. ಯಾವುದೇ ಕಾರಣಕ್ಕೂ ಸುಡುಮದ್ದು ಪ್ರದರ್ಶನ ಅಥವಾ ಮಾರಾಟದ ವಿಚಾರದಲ್ಲಿ ಸುರಕ್ಷತೆಗೆ ಯಾವುದೇ ರಿಯಾಯಿತಿ ನೀಡದಂತೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಡಿ.ವಿ. ಸದಾನಂದ ಗೌಡ ತಿಳಿಸಿದ್ದಾರೆ.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೆಯಲ್ಲಿ ಪಾಲ್ಗೊಳ್ಳಲು ಭಾನುವಾರ ಅಗಮಿಸಿದ ಅವರು, 2008 ರಲ್ಲಿ ಅನುಷ್ಠಾನಗೊಂಡ ಸ್ಪೋಟಕ ಕಾಯಿದೆಯಲ್ಲಿಯೇ ಸುಡುಮದ್ದು ತಯಾರಿ, ದಾಸ್ತಾನು, ಮಾರಾಟ ಮತ್ತು ಪ್ರದರ್ಶನಕ್ಕೆ ಸಂಬಂಧಪಟ್ಟಂತೆ ಸುರಕ್ಷತಾ ಮತ್ತು ಭದ್ರತಾ ಮಾರ್ಗಸೂಚಿಗಳಿದ್ದು, ಈ ಕಾನೂನಿಗೆ ತಿದ್ದುಪಡಿ ತರುವ ಯಾವುದೇ ಅಗತ್ಯ ಇಲ್ಲ ಎಂದು ಕಾನೂನು ತಜ್ಞರು ಸಲಹೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಪೋಟಕ ಕಾಯಿದೆ 2008 ರ ಮಾರ್ಗದರ್ಶಿ ಸೂತ್ರಗಳು ಮತ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ.

ವರದಿ ಕೇಳಿರುವ ಕೇಂದ್ರ

ಕೇರಳದ ಕೊಲ್ಲಂನಲ್ಲಿ ಯಾವ ಕಾರಣಕ್ಕಾಗಿ ಈ ಸ್ಪೋಟ ಸಂಭವಿಸಿತು ಎಂಬ ಕುರಿತು ವಿವರವಾದ ತನಿಖೆಯ ವರದಿಯನ್ನು ಕೇಂದ್ರ ಸರಕಾರದ ಗೃಹ ಇಲಾಖೆ ತರಿಸಲಿದ್ದು, ಅಗತ್ಯ ಬಿದ್ದರೆ ಕೇಂದ್ರದ ವಿಶೇಷ ತಂಡ ಈ ಸ್ಪೋಟಕ ದುರಂತದ ಘಟನೆಯನ್ನು ತನಿಖೆ ನಡೆಸಲಿದೆ. ಈಗಲೇ ಸುಡುಮದ್ದು ಪ್ರದರ್ಶನ ಮತ್ತು ತಯಾರಿ ಕುರಿತು ಎಚ್ಚರಿಕೆ ವಹಿಸದಿದ್ದಲ್ಲಿ ಮುಂದೆ ಇತರ ರಾಜ್ಯಗಳಲ್ಲೂ ಕೂಡ ಇಂತಹ ದುರ್ಘಟನೆ ಸಂಭವಿಸಬಹುದು. ಈ ಹಿನ್ನೆಲೆಯಲ್ಲಿ ಕೇಂದ್ರ ಮೇಲಿನ ಕ್ರಮಗಳಿಗೆ ಮುಂದಾಗಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ಸ್ವತ: ಕೊಲ್ಲಂಗೆ ಭೇಟಿ ನೀಡಿ ಅಲ್ಲಿನ ದುರಂತದ ಪ್ರತ್ಯಕ್ಷ ಅಧ್ಯಯನ ನಡೆಸಿದ್ದಾರೆ. ಗೃಹ ಮತ್ತು ಕಾನೂನು ಇಲಾಖೆಯ ಉನ್ನತ ಮಟ್ಟದ ಸಭೆಯನ್ನು ನಡೆಸಿದ್ದಾರೆ. ಕೊಲ್ಲಂನ ಭೀಕರ ದುರಂತ ದೇಶವನ್ನು ತಲ್ಲಣಿಸಿದ ಘಟನೆ. ಈ ದುರಂತದ ಹಿನ್ನೆಲೆಯಲ್ಲಿ ಗಂಭೀರ ಕ್ರಮಗಳಿಗೆ ಸ್ವತ: ಪ್ರಧಾನಿಯವರೇ ಸೂಚನೆ ನೀಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂಜೀವ ಮಠಂದೂರು, ನಗರಸಭಾ ಉಪಾಧ್ಯಕ್ಷ ವಿಶ್ವನಾಥ ಗೌಡ, ನಗರಸಭಾ ಸದಸ್ಯರಾದ ಕೆ. ಜೀವಂಧರ್ ಜೈನ್, ವಿನಯ ಭಂಡಾರಿ ಉಪಸ್ಥಿತರಿದ್ದರು.

ಬಟ್ಟಲು ಕಾಣಿಕೆ ಸಲ್ಲಿಸಿದ ಸಚಿವರು

ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಡಿ.ವಿ. ಸದಾನಂದ ಗೌಡ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಪರಮ ಭಕ್ತ. ಪುತ್ತೂರು ಜಾತ್ರೆಯ ಸಂದರ್ಭ ಎ. 17 ರಂದು ಅವರು ತಪ್ಪದೇ ದೇವಾಲಯಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಬಲಿ ಉತ್ಸವದಲ್ಲಿ ಸಾಮಾನ್ಯ ಭಕ್ತನಂತೆ ಪಾಲ್ಗೊಂಡು ಸರದಿಯ ಸಾಲಿನಲ್ಲಿ ದೇವರಿಗೆ ಬಟ್ಟಲು ಕಾಣಿಕೆ ಸಮರ್ಪಿಸಿ ಪ್ರಸಾದ ಪಡೆಯುತ್ತಾರೆ. ಭಾನುವಾರ ಸಚಿವ ಸದಾನಂದ ಗೌಡರು ದೇವಾಲಯಕ್ಕೆ ಆಗಮಿಸಿ ಬಟ್ಟಲು ಕಾಣಿಕೆ ಸಮರ್ಪಿಸಿ ನಿರ್ಗಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News