ಸೂರಿಕುಮೇರು ಟ್ಯಾಂಕರ್ ಪಲ್ಟಿ: ಗ್ಯಾಸ್ ಸೋರಿಕೆಯಿಂದ ಹೊಟೇಲ್‌ಗೆ ಬೆಂಕಿ

Update: 2016-04-19 03:36 GMT

ಬಂಟ್ವಾಳ, ಎ.19: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಸೂರಿಕುಮೇರು ಬಳಿ ರಾತ್ರಿ 1 ಗಂಟೆ ಸುಮಾರಿಗೆ ಮಗುಚಿ ಬಿದ್ದ ಅನಿಲ ಸಾಗಾಟದ ಟ್ಯಾಂಕರ್‌ನಿಂದ ಭಾರೀ ಪ್ರಮಾಣದಲ್ಲಿ ಗ್ಯಾಸ್ ಸೋರಿಕೆ ಉಂಟಾಗಿದೆ. ಇದರಿಂದ ಘಟನಾ ಸ್ಥಳದ ಸಮೀಪದಲ್ಲಿದ್ದ ಲಕ್ಷ್ಮೀನಾರಾಯಣ ಎಂಬವರಿಗೆ ಸೇರಿದ ಹೊಟೇಲ್‌ಗೆ ಬೆಂಕಿ ತಗುಲಿದ್ದು, ಅಪಾರ ನಷ್ಟ ಉಂಟಾಗಿದೆ.
ಗ್ಯಾಸ್ ಸೋರಿಕೆಯಿಂದ ಹೊಟೇಲ್‌ಗೆ ಬೆಂಕಿ ಹತ್ತಿಕೊಂಡಿದ್ದು ರೆಫ್ರಿಜರೇಟರ್, ಫ್ಯಾನ್‌ಗಳು, ಅಡುಗೆ ಗ್ಯಾಸ್ ಸಿಲಿಂಡರ್ ಸೇರಿದಂತೆ ಹೊಟೇಲ್ನಲ್ಲಿ ಹಲವು ಸಾಮಗ್ರಿಗಳು ಸುಟ್ಟು ಭಸ್ಮವಾಗಿವೆ. ಟ್ಯಾಂಕರ್ ಪಲ್ಟಿ ಕಾರಣ ಘಟನಾ ಸ್ಥಳಕ್ಕೆ ಸುಮಾರು 10ರಷ್ಟು ಅಗ್ನಿಶಾಮಕ ದಳದ ವಾಹನಗಳು ಆಗಮಿಸಿದ್ದವು. ಇದರಲ್ಲಿನ ಅಗ್ನಿ ಶಾಮಕ ದಳದ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಹೊಟೇಲ್ ನಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ನಂದಿಸಿದ್ದಾರೆ.
ಹೊಟೇಲ್‌ನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಬಾಗಿಲು ಒಡೆದು ಅದರೊಳಗೆ ಪ್ರವೇಶಿಸಿ ಬೆಂಕಿಯನ್ನು ನಂದಿಸಿದ್ದಾರೆ. ಈ ಹೊಟೇಲ್ ಇರುವ ಕಟ್ಟಡದಲ್ಲಿ 12 ವಿವಿಧ ಮಳಿಗೆಗಳಿದ್ದವು. ಅಲ್ಲದೇ ಹೊಟೇಲ್‌ನಲ್ಲಿದ್ದ ಗ್ಯಾಸ್ ಸಿಲಿಂಡರ್‌ಗೂ ಬೆಂಕಿ ವ್ಯಾಪಿಸಿತ್ತು. ಆದರೆ ಅಗ್ನಿಶಾಮಕ ದಳದ ಸಿಬ್ಬಂದಿಯ ಸಕಾಲಿಕ ಕಾರ್ಯಾಚರಣೆಯಿಂದ ಭಾರೀ ಅವಘಡವೊಂದು ತಪ್ಪಿದೆ.
ಟ್ಯಾಂಕರ್‌ನಿಂದ ಅನಿಲ ಸೋರಿಕೆಯಾದ ಹಿನ್ನೆಲೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಈ ಅವಘಡ ಸಂಭವಿಸಿದೆ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

ಹೆಚ್ಚಿನ ವಿವರಗಳಿಗೆ ಓದಿ.....

ಸೂರಿಕುಮೇರು: ಗ್ಯಾಸ್ ಟ್ಯಾಂಕರ್ ಪಲ್ಟಿ,  ಭಾರೀ ಪ್ರಮಾಣದಲ್ಲಿ ಅನಿಲ ಸೋರಿಕೆ,  ಸ್ಥಳೀಯರ ಸ್ಥಳಾಂತರ

ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ಸೂರಿಕುಮೇರು ರಾಷ್ಟ್ರೀಯ ಹೆದ್ದಾರಿ(75) ಯಲ್ಲಿ ಅನಿಲ ತುಂಬಿದ ಟ್ಯಾಂಕರೊಂದು ಪಲ್ಟಿಯಾದ ಪರಿಣಾಮ ಟ್ಯಾಂಕರ್ ನಿಂದ ಅನಿಲ ಸೋರಿಕೆಯಾಗಿದ್ದು, ಸ್ಥಳೀಯ 20ಕ್ಕೂ ಹೆಚ್ಚು ಮನೆಗಳ ಜನರನ್ನು ತೆರವುಗೊಳಿಸಲಾಗಿದೆ.

ಸೋಮವಾರ ತಡ ರಾತ್ರಿ ಸುಮಾರು 1 ಗಂಟೆ ವೇಳೆಗೆ ಈ ಅವಘಡ ಸಂಭವಿಸಿದೆ.  ಮಂಗಳೂರು ಎಂ.ಆರ್.ಪಿ.ಎಲ್. ನಿಂದ ಬೆಂಗಳೂರಿಗೆ ಅನಿಲ ಹೇರಿಕೊಂಡು ತೆರಳುತ್ತಿದ್ದ ಈ ಟ್ಯಾಂಕರ್ ಸೂರಿಕುಮೇರು ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿ ಬಿದ್ದಿದೆ. ತಕ್ಷಣ ಟ್ಯಾಂಕರ್ ನಿಂದ ಅನಿಲ ಸೋರಿಕೆಯಾಗಿದ್ದು, ಪರಿಸರವನ್ನೆಲ್ಲ ಆವರಿಸಿದೆ.

ಟ್ಯಾಂಕರ್ ಪಲ್ಟಿಯಾದ ಭಾರೀ ಶಬ್ದ ಹಾಗೂ ಅನಿಲ ಸೋರಿಕೆಯ ದುರ್ವಾಸನೆಯಿಂದ ಅಪಾಯದ ಅರಿವಾದ ಹತ್ತಿರದ 3, 4 ಮನೆಗಳ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ಓಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ವಿಟ್ಲ, ಬಂಟ್ವಾಳ ನಗರ ಹಾಗೂ ಗ್ರಾಮಾಂತರ ಪೊಲೀಸರು ಸ್ಥಳೀಯ ಸುಮಾರು ಇಪ್ಪತ್ತಕ್ಕೂ ಹೆಚ್ಚು ಮನೆಗಳನ್ನು ತೆರವುಗೊಳಿಸಿದ್ದಾರೆ. ಯಾರಿಗೂ ಯಾವುದೇ ಗಾಯವಾದ, ಜೀವಕ್ಕೆ ಅಪಾಯವಾದ ಬಗ್ಗೆ ವರದಿಯಾಗಿಲ್ಲ.

ಬೆಳಿಗೆಯವರೆಗೂ ಟ್ಯಾಂಕರ್ ನಿಂದ ಅನಿಲ ಸೋರಿಕೆಯಾಗುತ್ತಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಮುಂಜಾಗ್ರತ ಕ್ರಮವಾಗಿ ಹೆದ್ದಾರಿಯಲ್ಲಿ ವಾಹನಗಳ ಸಂಚಾರವನ್ನು ಪೊಲೀಸರು ರಾತ್ರಿಯಿಂದಲೇ ಸ್ಥಗಿತಗೊಳಿಸಿದ್ದಾರೆ.

Writer - ಇಮ್ತಿಯಾಝ್ ಬಂಟ್ವಾಳ

contributor

Editor - ಇಮ್ತಿಯಾಝ್ ಬಂಟ್ವಾಳ

contributor

Similar News