ಗ್ಯಾಸ್ ಟ್ಯಾಂಕರ್ ಪಲ್ಟಿ ಪ್ರಕರಣ: ಆತಂಕಮುಕ್ತವಾದ ಸೂರಿಕುಮೇರು

Update: 2016-04-19 04:36 GMT

ಬಂಟ್ವಾಳ, ಎ.19: ರಾಷ್ಟ್ರೀಯ ಹೆದ್ದಾರಿ 75ರ ಸೂರಿಕುಮೇರು ಬಳಿ ರಾತ್ರಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಟ್ಯಾಂಕರ್‌ನಿಂದ ಆಗುತ್ತಿದ್ದ ಗ್ಯಾಸ್ ಸೋರಿಕೆಯನ್ನು ಎಚ್.ಪಿ. ಅಧಿಕಾರಿಗಳ ತಂಡ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹತೋಟಿಗೆ ತಂದಿದ್ದಾರೆ. ಇದರಿಂದ ಪರಿಸರದಲ್ಲಿ ಮೂಡಿದ್ದ ಆತಂಕದ ವಾತಾವರಣ ತಿಳಿಗೊಂಡಿದೆ.
ಘಟನೆ ನಡೆದ ಬೆನ್ನಲ್ಲೇ ಕಾಣಿಸಿಕೊಂಡಿದ್ದ ಗ್ಯಾಸ್ ಸೋರಿಕೆ ಬೆಳಗ್ಗೆಯವರೆಗೂ ಮುಂದುವರಿದಿತ್ತು. ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿದ್ದ ಮಂಗಳೂರಿನ ಎಚ್.ಪಿ. ಅಧಿಕಾರಿಗಳ ತಂಡ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಯ ನಿರಂತರ ಕಾರ್ಯಾಚರಣೆಯ ಫಲವಾಗಿ ಇಂದು ಬೆಳಗ್ಗೆ 8:30ರ ಸುಮಾರಿಗೆ ಅನಿಲ ಸೋರಿಕೆಯನ್ನು ಸಂಪೂರ್ಣ ಹತೋಟಿಗೆ ತರಲಾಗಿದೆ. ಸೋರಿಕೆಯಾಗುತ್ತಿದ್ದ ಟ್ಯಾಂಕರ್‌ನಿಂದ ಗ್ಯಾಸನ್ನು ಇನ್ನೊಂದು ಟ್ಯಾಂಕರ್‌ಗೆ ವರ್ಗಾಯಿಸಿ ಪರಿಸರದಲ್ಲಿ ಮೂಡಿದ್ದ ಆತಂಕವನ್ನು ಅಧಿಕಾರಿಗಳು ದೂರ ಮಾಡಿದ್ದಾರೆ.
ಸದ್ಯ ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಈ ರಸ್ತೆಯಾಗಿ ಸಾಗುವ ವಾಹನಗಳನ್ನು ಕಲ್ಲಡ್ಕ- ವಿಟ್ಲದ ಮೂಲಕ ಹಾದು ಹೋಗುವ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವಂತೆ ಪೊಲೀಸರು ನಿರ್ದೇಶ ನೀಡುತ್ತಿದ್ದಾರೆ.
ರಾತ್ರಿ 1 ಗಂಟೆ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿದ ಟ್ಯಾಂಕರ್ ರಾ. ಹೆದ್ದಾರಿ 75ರ ಸೂರಿಕುಮೇರು ಬಳಿ ಉರುಳಿ ಬಿದ್ದಿದೆ. ಇದರಿಂದ ಗ್ಯಾಸ್ ಸೋರಿಕೆ ಉಂಟಾಗಿತ್ತು. ಬಳಿಕದ ಘಟನೆಯೊಂದರಲ್ಲಿ ಅಲ್ಲೇ ಸ್ಥಳೀಯವಾಗಿದ್ದ ಹೊಟೇಲ್‌ವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಘಟನಾ ಸ್ಥಳದ ಸುತ್ತಮುತ್ತಲ ಪರಿಸರದಲ್ಲಿ ಗ್ಯಾಸ್ ವಾಸನೆ ವ್ಯಾಪಿಸಿ ಭಯದ ವಾತಾವರಣ ಸೃಷ್ಟಿಯಾಗಿತ್ತು. ಎಚ್‌ಪಿ ಅಧಿಕಾರಿಗಳ ಹಾಗೂ ಅಗ್ನಿಶಾಮಕ ದಳದ ಸಕಾಲಿಕ ಕಾರ್ಯಾಚರಣೆಯಿಂದ ಇದೀಗ ಇಡೀ ಪ್ರಕರಣ ಹತೋಟಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News