‘‘ಪೆರ್ನೆ ದುರಂತ ನೆನಪಾಗಿ ಅಂಗಿ ಹಾಕದೆ ಓಡಿಹೋದೆವು’’

Update: 2016-04-19 05:22 GMT

ಬಂಟ್ವಾಳ, ಎ.19: ‘‘ರಾತ್ರಿ ಊಟ ಮುಗಿಸಿ ಮಲಗಿದ್ದೆವು. ನಿದ್ರೆ ಹತ್ತುತ್ತಿದಂತೆ ಭಾರೀ ಶಬ್ದವೊಂದು ಕೇಳಿಸಿತು. ಅದರ ಬೆನ್ನಲ್ಲೇ ಬೋರ್‌ವೆಲ್ ಕೊರೆದಂತೆ ಇನ್ನೊಂದು ಭಾರೀ ಶಬ್ದ ಕೇಳಿಬರತೊಡಗಿತು. ಅಷ್ಟರಲ್ಲಿ ’’ಓಡಿರಿ... ಓಡಿರಿ... ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿದೆ... ಗ್ಯಾಸ್ ಸೋರಿಕೆ ಆಗುತ್ತಿದೆ’’ ಎಂದು ಯಾರೋ ಕೂಗುವುದು ಕೇಳಿಬಂತು. ತಕ್ಷಣ ನಮಗೆ ಘಟನೆಯ ಅರಿವಾಯಿತು. ಆಗ ಎರಡು ವರ್ಷದ ಹಿಂದೆ ಸಂಭವಿಸಿದ ಪೆರ್ನೆ ಗ್ಯಾಸ್ ಟ್ಯಾಂಕರ್ ಸ್ಫೋಟ ದುರಂತ ನೆನಪಾಗಿ ಆತಂಕಗೊಂಡು ನಡುಗಿದೆವು. ಈ ಸಂದರ್ಭದಲ್ಲಿ ಮನಸಿಗೆ ಏನೂ ತೋಚದೆ ಮನೆಯವರೊಂದಿಗೆ ತಾನು ಅಂಗಿಯೂ ಹಾಕದೆ ಓಡ ತೊಡಗಿದೆ’’ ಇದು ನಿನ್ನೆ ರಾತ್ರಿ ಸೂರಿಕುಮೇರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾದ ಸಮೀಪದಲ್ಲೇ ಇರುವ ಮನೆಯ ಅಬ್ದುಲ್ ಖಾದರ್ ಎಂಬವರು ರಾತ್ರಿ ನಡೆದ ಘಟನೆಯನ್ನು ಆತಂಕದಿಂದಲೇ ‘ವಾರ್ತಾಭಾರತಿ’ಗೆ ವಿವರಿಸಿದ್ದು ಹೀಗೆ... ‘‘ಟ್ಯಾಂಕರ್ ಬಿದ್ದ ಸುತ್ತಮುತ್ತಲು ಸುಮಾರು ನೂರಕ್ಕೂ ಹೆಚ್ಚು ಮನೆಗಳಿವೆ. ಮನೆಮಂದಿಯೆಲ್ಲ ಯಭೀತಗೊಂಡು ಓಡತೊಡಗಿದಾಗ ಊರಿಗೆ ಊರೇ ಗದ್ದಲ. ಮಕ್ಕಳ ಕೂಗು. ಕೆಲವರು ವಾಹನಗಳಲ್ಲಿ ದೂರ ಹೋದರೆ, ಹೆಚ್ಚಿನ ಮಂದಿ ದೂರ ಓಡುತ್ತಿದ್ದರು. ಕೆಲವರು ಮಕ್ಕಳನ್ನು ಎತ್ತಿ ಓಡುತ್ತಿದ್ದರು. ಅನಿಲ ಸೋರಿಕೆಯಿಂದ ಊರು ತುಂಬಾ ಗ್ಯಾಸ್ ವಾಸನೆ ಬೀರುತ್ತಿತ್ತು. ಅಂತೂ ಓಡಿ ದೂರ ಸೇರಿದರೂ ಮನಸ್ಸಿಗೆ ನೆಮ್ಮದಿ ಇಲ್ಲ. ಗಾಬರಿಯಿಂದ ನಿದ್ರೆ ಮಾಡದೆ ರಾತ್ರಿ ಕಳೆದೆವು. ಬೆಳಗ್ಗೆಯಾಗುತ್ತಿದಂತೆ ಮನೆಗೆ ವಾಪಸ್ ಬಂದೆವು ಎಂದು ಅವರು ಹೇಳಿದರು. ಯಾವಾಗ ಏನೂ ಸಂಭವಿಸಬಹುದಿತ್ತು. ಒಂದೆಡೆ ಸೇರಿದ ನಾವೆಲ್ಲರೂ ದೇವರಲ್ಲಿ ಮೊರೆ ಇಡುತ್ತಿದ್ದೆವು. ಆದರೆ, ದೇವರ ದಯೆಯಿಂದ ಯಾರಿಗೂ ಏನು ಸಂಭವಿಸಿಲ್ಲ ಎಂದು ಅವರು ಆತಂಕದಿಂದ ರಾತ್ರಿಯ ಭೀಕರ ಸನ್ನಿವೇಶವನ್ನು ‘ವಾರ್ತಾಭಾರತಿ’ಯೊಂದಿಗೆ ಬಿಚ್ಚಿಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News