ರೋಗಿಗಳನ್ನು ನಿರ್ಲಕ್ಷಿಸುವವರ ವಿರುದ್ಧ ಕ್ರಮ: ಸಚಿವ ಖಾದರ್

Update: 2016-04-19 09:57 GMT

ಮಂಗಳೂರು, ಎ. 19: ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಬರುವ ಬಡ ರೋಗಿಗಳ ಬಗ್ಗೆ ನಿರ್ಲಕ್ಷ ವಹಿಸಿದರೆ ಸಂಬಂಧಪಟ್ಟ ಸಿಬ್ಬಂದಿಗಳು ಹಾಗೂ ವೈದ್ಯರ ವಿರುದ್ಧ ಕ್ರಮಕ್ಕೂ ಇಲಾಖೆ ಹಿಂಜರಿಯುವುದಿಲ್ಲ ಎಂದು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಎಚ್ಚರಿಕೆ ನೀಡಿದ್ದಾರೆ.

ಅವರು ಇಂದು ನಗರದ ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ನವೀಕೃತ ಪಿಸಿಯೋಥೆರಪಿ ಮತ್ತು ಡಿಸ್ಟ್ರಿಕ್ಟ್ ಅರ್ಲಿ ಇಂಟರ್‌ವೆನ್ಶನ್ ಸೆಂಟರ್(ಡಿಇಐಸಿ) ವಿಭಾಗವನ್ನು ಉದ್ಘಾಟಿಸಿ ಮಾತನಾಡಿದರು.

ವೆನ್ಲಾಕ್ ಆಸ್ಪತ್ರೆಯಲ್ಲಿ ಡೆಂಟಲ್, ಡಯಾಲಿಸಿಸ್ ಸೆಂಟರ್ ಸೇರಿದಂತೆ ಅಗತ್ಯ ಎಲ್ಲಾ ವಿಭಾಗಗಳನ್ನು ಸುಸಜ್ಜಿತ ರೀತಿಯಲ್ಲಿ ಕಲ್ಪಿಸಲಾಗಿದೆ. ಆದರೆ ಬರುವ ರೋಗಿಗಳಿಗೆ ಆಸ್ಪತ್ರೆಯ ಸಿಬ್ಬಂದಿಗಳಿಂದ ಉತ್ತಮ ಸೇವೆ ಅತಿಮುಖ್ಯ.ಕರ್ತವ್ಯ ಲೋಪ ತೋರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದರು.

ಆಸ್ಪತ್ರೆಯಲ್ಲಿ ನಿರ್ಲಕ್ಷ್ಯದ ಕುರಿತಂತೆ ಹಲವಾರು ದೂರು, ಆರೋಪಗಳು ಬರುತ್ತಿವೆ. ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಬೇಕು. ಕರ್ತವ್ಯಲೋಪ ಉಂಟಾದರೆ ವೈದ್ಯರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು.

ಸೇವಾ ಬದ್ಧತೆಯಿಂದ ಕೆಲಸ ಮಾಡುವವರು ಮಾತ್ರ ಈ ಕ್ಷೇತ್ರಕ್ಕೆ ಬರಬೇಕು. ಸರಕಾರಿ ಕೆಲಸಗಳಲ್ಲಿ ಸಹಜವಾಗಿಯೇ ಒತ್ತಡ ಇರುತ್ತದೆ. ಒತ್ತಡವನ್ನು ಸಹಿಸಿಕೊಂಡೇ ಕೆಲಸ ಮಾಡಬೇಕು. ರೋಗಿಗಳು ಹಲವಾರು ಸಮಸ್ಯೆ, ತೊಂದರೆಗಳೊಂದಿಗೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವಾಗ ಅವರ ಸಮಸ್ಯೆಗಳನ್ನು ಸಮಚಿತ್ತದಿಂದ ಆಲಿಸಿ ಪರಿಹಾರ ನೀಡಲು ಮುಂದಾಗಬೇಕು. ಅದು ಬಿಟ್ಟು ತಮ್ಮ ವೈಯಕ್ತಿಕ ಸಮಸ್ಯೆ, ಒತ್ತಡವನ್ನು ರೋಗಿಗಳ ಮೇಲೆ ಪ್ರಯೋಗಿಸುವಂತಾಗಬಾರದು ಎಂದು ಹೇಳಿದರು.

ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ.ಐ.ಶ್ರೀವಿದ್ಯಾ, ಖ್ಯಾತ ವೈದ್ಯರಾದ ಡಾ.ಶಾಂತಾರಾಮ ಶೆಟ್ಟಿ, ಎಂ.ವಿ.ಶೆಟ್ಟಿ ಸಂಸ್ಥೆಯ ಮುಖ್ಯಸ್ಥ ಡಾ.ಎಂ.ಆರ್.ಶೆಟ್ಟಿ, ಶ್ರೀದೇವಿ ಶಿಕ್ಷಣ ಸಂಸ್ಥೆಯ ಮೈನಾ ಶೆಟ್ಟಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್, ಮಂಗಳೂರು ರೋಟರಿ ಕ್ಲಬ್ ಅಧ್ಯಕ್ಷ ಯತೀಶ್ ಬೈಕಂಪಾಡಿ, ಕಾರ್ಪೋರೇಟರ್ ಎ.ಸಿ.ವಿನಯರಾಜ್, ಡಾ.ಪ್ರಭುದೇವ್, ಡಾ.ಯು.ವಿ.ಶೆಣೈ ಉಪಸ್ಥಿತರಿದ್ದರು.

ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕಿ ಹಾಗೂ ಜಿಲ್ಲಾ ಶಸಚಿಕಿತ್ಸಕಿ ಡಾ.ರಾಜೇಶ್ವರಿದೇವಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

ಫಿಜಿಯೋಥೆರಪಿ ವಿಭಾಗದಲ್ಲಿ ಹೈಟೆಕ್ ಸೌಲಭ್ಯ

ವೆನ್‌ಲಾಕ್‌ನ ಫಿಜಿಯೋಥೆರಪಿ ವಿಭಾಗವನ್ನು ರೋಟರಿ ಕ್ಲಬ್ ಸಹಭಾಗಿತ್ವದಲ್ಲಿ ಸುಮಾರು 30 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಸಂಪೂರ್ಣವಾಗಿ ನವೀಕರಿಸಲಾಗಿದೆ. ಅತ್ಯಾಧುನಿಕ ವಿದೇಶಿ ನಿರ್ಮಿತ ಉಪಕರಣಗಳನ್ನು ಜೋಡಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೇರೆ ಯಾವುದೇ ಆಸ್ಪತ್ರೆಯಲ್ಲಿ ಇಲ್ಲದಂತಹಾ ಹೈಟೆಕ್ ಉಪಕರಣಗಳು ಈಗ ವೆನ್‌ಲಾಕ್ ಆಸ್ಪತ್ರೆಯಲ್ಲಿ ಲಭ್ಯವಿವೆ. ಈ ವಿಭಾಗದಲ್ಲಿ ಎಲೆಕ್ಟ್ರೋ ಥೆರಪಿಯ ರೀತಿಯಲ್ಲಿ ಮಂಡಿ, ಸೊಂಟ, ಭುಜ, ಕುತ್ತಿಗೆ ಇತ್ಯಾದಿ ನೋವುಗಳನ್ನು ಶಮನಗೊಳಿಸಲಾಗುತ್ತದೆ. ಜತೆಗೆ ಎಕ್ಸರ್‌ಸೈಸ್ ಥೆರಪಿಯಂತೆ ರೇಂಜ್ ಆ್ ಮೂವ್‌ಮೆಂಟ್, ಸ್ಟ್ರೆಂತ್, ಎಂಡ್ಯೂರೆನ್ಸ್ ಪಡೆಯಲು ಅವಕಾಶವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News