ಸುಳ್ಳು ಆರೋಪ ಮಾಡಿದರೆ ಮಾನನಷ್ಟ ಮೊಕದ್ದಮೆ

Update: 2016-04-19 18:32 GMT

ಉಡುಪಿ, ಎ.19: ‘ಇನ್ನು ಮುಂದಿನ ದಿನಗಳಲ್ಲಿ ನನ್ನ ವಿರುದ್ಧ ಅಥವಾ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ಮೇಲಾಗಲೀ ಯಾವುದೇ ದಾಖಲೆಗಳಿಲ್ಲದೇ ಸುಳ್ಳು ಆರೋಪ ಮಾಡಿದವರ ವಿರುದ್ಧ ಹಾಗೂ ಸುಳ್ಳು ಆರೋಪ ಮಾಡುವಂತೆ ಪ್ರಚೋದನೆ ನೀಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗುವುದು’ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಣ್ಣಾಮಲೈ ಎಚ್ಚರಿಕೆ ನೀಡಿದ್ದಾರೆ.

ಎ.18ರಂದು ಕಡಿಯಾಳಿ ಕಟ್ಟೆ ಆಚಾರ್ಯ ಮಾರ್ಗದ ನಿವಾಸಿ ವಯೋವೃದ್ಧೆ ಸಾವಿತ್ರಿ ಭಟ್ ಮತ್ತು ಅವರ ಇಬ್ಬರು ಮಕ್ಕಳು ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿ ಕರೆದ ಸುದ್ದಿಗೋಷ್ಠಿಯಲ್ಲಿ ಎಸ್ಪಿ ಹಾಗೂ ಪೊಲೀಸ್ ಇಲಾಖೆಯ ವಿರುದ್ಧ ಆರೋಪಗೈದಿರುವ ಹಿನ್ನೆಲೆಯಲ್ಲಿ ಎಸ್ಪಿ ಅಣ್ಣಾಮಲೈ ಇಲಾಖೆಯ ವೆಬ್‌ಸೈಟ್‌ನಲ್ಲಿ ಸ್ಪಷ್ಟನೆಯ ಜೊತೆ ಈ ರೀತಿಯ ಎಚ್ಚರಿಕೆಯನ್ನು ನೀಡಿದ್ದಾರೆ.

ಸಾವಿತ್ರಿ ಭಟ್ ಹಾಗೂ ಅವರ ಎರಡು ಮಕ್ಕಳೊಂದಿಗೆ ನನ್ನ ಕಚೇರಿಯಲ್ಲಿ ನಾನು ದರ್ಪದಿಂದ ವರ್ತಿಸಿ ಮರ್ಯಾದೆ ನೀಡಿರುವುದಿಲ್ಲ ಎಂಬ ಹೇಳಿಕೆ ಸುಳ್ಳು. ನಾನು ನನ್ನ ಕಚೇರಿಗೆ ಭೇಟಿಯಾಗಲು ಬರುವ ಎಲ್ಲರಿಗೂ ಗೌರವ ನೀಡುತ್ತಿದ್ದೇನೆ. ಅದರಲ್ಲೂ ಹಿರಿಯ ನಾಗರಿಕರಿಗೆ ವಿಶೇಷವಾದ ಗೌರವ ನೀಡುತ್ತಿದ್ದೇನೆ. ಅದೇ ರೀತಿ ಸಾವಿತ್ರಿ ಭಟ್‌ಗೂ ಗೌರವ ನೀಡಿದ್ದೇನೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಕುಂದಾಪುರ ಎಸಿಯವರು ನೀಡಿರುವ ಸ್ಪಷ್ಟ ಆದೇಶದಂತೆ ಮನೆ ನಂಬ್ರ 8-3-50ನ್ನು ತೆರವುಗೊಳಿಸಿ ಈಗಾಗಲೇ ಸಾವಿತ್ರಿ ಭಟ್‌ಗೆ ನೀಡಲಾಗಿದೆ. ಕುಂದಾಪುರ ಎಸಿ ಅವರ ಆದೇಶವಿಲ್ಲದೇ ಮನೆ ನಂಬ್ರ 8-3-50ಎ ಅನ್ನು ತೆರವುಗೊಳಿಸುವುದು ಕಾನೂನು ಸಮ್ಮತವಾಗಿರುವುದಿಲ್ಲ. ಸಂಪೂರ್ಣವಾಗಿ ಮನೆಯನ್ನು ತೆರವುಗೊಳಿಸಿ ಸಾವಿತ್ರಿ ಭಟ್‌ಗೆ ಹಸ್ತಾಂತರಿಸುವಂತೆ ಕುಂದಾಪುರ ಎಸಿಯವರಿಂದ ಪ್ರತ್ಯೇಕ ಆದೇಶವನ್ನು ತಂದಲ್ಲಿ ಕೂಡಲೇ ತೆರವುಗೊಳಿಸಲಾಗುವುದು ಎಂದು ಉಡುಪಿ ವೃತ್ತ ನಿರೀಕ್ಷಕ ಶ್ರೀಕಾಂತ್ ಲಿಖಿತವಾಗಿ ಹಿಂಬರಹವನ್ನು ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News