ಕೇರಳದ ಅಭಿವೃದ್ದಿಗೆ ಭಾಷ್ಯ ಬರೆದ ಎಡರಂಗಕ್ಕೆ ಪುನಃ ಅವಕಾಶ ನೀಡಿ- ವಿ.ಎಸ್‌ಅಚ್ಯುತಾನಂದನ್

Update: 2016-04-20 11:42 GMT

    ಮಂಜೇಶ್ವರ, ಎ.20 : ಕೇರಳದ ಭ್ರಷ್ಟ ಆಡಳಿತದಿಂದ ಮುಕ್ತಿ ಕಾಣಲು ಎಡರಂಗವನ್ನು ಅಧಿಕಾರಕ್ಕೆ ತರಬೇಕು.ರಾಜ್ಯದ ಉಮ್ಮನ್‌ಚಾಂಡಿ ಸರಕಾರ ಹಾಗೂ ಕೇಂದ್ರದ ಆಡಳಿತ ಒಂದೇ ತೆರನಾಗಿದೆ. ಅಧಿಕಾರದ ದುರುಪಯೋಗ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ನಡೆಯುತ್ತಿದೆ. ಇದರಿಂದ ಹೊರ ಬರಲು ಜನರು ಎಡರಂಗವನ್ನು ಬಹುಮತದಿಂದ ಗೆಲ್ಲಿಸಬೇಕಾಗಿದೆ ಎಂದು ಸಿಪಿಎಂ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ವಿ.ಎಸ್‌ಅಚ್ಯುತಾನಂದನ್ ಹೇಳಿದರು.

  ಕುಂಬಳೆ ಪೇಟೆಯ ಹೃದಯ ಭಾಗದಲ್ಲಿ ಬುಧವಾರ ನಡೆದ ಎಡರಂಗ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

   ರಾಜ್ಯದಲ್ಲಿ ಉಮ್ಮನ್‌ಚಾಂಡಿ ನಾಯಕತ್ವದ ಐಕ್ಯರಂಗ ಸರಕಾರ ಪಾಮೋಲಿನ್, ಸೋಲಾರ್ ಹಗರಣ ಹೀಗೆ ವಿವಿಧ ಬಗೆಯ ಭ್ರಷ್ಟಾಚಾರದಲ್ಲಿ ತೊಡಗಿದ್ದುಇದರಿಂದ ಮುಕ್ತಿ ದೊರೆಯಬೇಕಿದೆ ಎಂದು ಹೇಳಿದರು.ಎಡರಂಗದ ಆಶ್ವಾಸನೆಗಳು ಕೇವಲ ಕಾಗದದ ಮೇಲಣ ಬರಹಗಳಲ್ಲ ಬದಲಾಗಿ ಬಡ ಹಾಗೂ ಶ್ರೀ ಸಾಮಾನ್ಯನ ಬಾಳಿಗೆ ಬೆಳಕನ್ನು ನೀಡಬಲ್ಲ, ರಾಜ್ಯವನ್ನು ಪೂರಕ ಅಭಿವೃದ್ದಿ ದಿಸೆಯಲ್ಲಿ ಮುನ್ನಡೆಸ ಬಲ್ಲ ದಿಟ್ಟ ನುಡಿಗಳೆಂದರು.ರಾಜ್ಯ ಕಂಡ ಅಪ್ರತಿಮ ಮುಖ್ಯಮಂತ್ರಿಗಳಾದ ಇ.ಎಂ.ಎಸ್ ನಂಬೂದರಿಪ್ಪಾಡ್, ಇ.ಕೆ ನಾಯನಾರ್‌ರಂತೆಯೇ ರಾಜ್ಯವನ್ನು ಸರಿಯಾದ ಹಾದಿಯಲ್ಲಿ ಮುನ್ನಡೆಸುವುದಾಗಿ ಭರವಸೆಯಿತ್ತರು. ಉತ್ತಮ ಆಡಳಿತ ನೀಡಲು ಎಡರಂಗಕ್ಕೆ ಮಗದೊಮ್ಮೆ ಅವಕಾಶ ನೀಡಬೇಕೆಂದು ಕೇಳಿಕೊಂಡರು.

 ಮಂಜೇಶ್ವರ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಸಿ.ಎಚ್ ಕುಞಂಬು ಅವರ ಬಗ್ಗೆ ಮಾತನಾಡಿದ ವಿ.ಎಸ್ ಈ ಹಿಂದೆ ಹಲವು ಪ್ರಗತಿ ಪರ ಯೋಜನೆಗಳನ್ನು ಕುಞಂಬು ಕ್ಷೇತ್ರಕ್ಕೆ ಕೊಡಮಾಡಿದ್ದಾರೆ.ಅದರ ಬಗ್ಗೆ ನಾನು ಹೆಚ್ಚಾಗಿ ಹೇಳಬೇಕಾಗಿಲ್ಲ, ಕ್ಷೇತ್ರದ ಅಭಿವೃದ್ದಿಗೆ ಹೊಸ ಭಾಷ್ಯ ಬರೆದ ಅಭ್ಯರ್ಥಿಯನ್ನು ಬಹುಮತದೊಂದಿಗೆ ಗೆಲ್ಲಿಸಬೇಕೆಂದು ವಿನಂತಿಸಿದರು.

  ಸಂಸದ ಕೆ.ಕರುಣಾಕರನ್ ಮಾತನಾಡಿ ಜಿಲ್ಲೆಯ ಸಮಗ್ರ ಪೂರಕ ಅಭಿವೃದ್ದಿಗೆ ಎಡರಂಗದ ಗೆಲುವು ಅತ್ಯವಶ್ಯಕ, ಕಳೆದ ಐದು ವರ್ಷ ರಾಜ್ಯವಾಳಿದ ಯುಡಿಎಫ್ ಸರಕಾರ ಅಭಿವೃದ್ದಿ ಪರ ಮಾತುಗಳಾಡಿದ್ದು ಬಿಟ್ಟರೆ ವಸ್ತುಷ ಏನನ್ನೂ ಮಾಡಲಿಲ್ಲ. ಬಿಜೆಪಿ ಪಕ್ಷವನ್ನು ಟೀಕಿಸಿದ ಸಂಸದರು ಜಾತ್ಯಾತೀತ ನೆಲೆಗಟ್ಟಿನ ಜಿಲ್ಲೆಯಲ್ಲಿ ಬಿಜೆಪಿ ಗೆಲುವು ಅಸಾಧ್ಯ ಹಾಗೂ ಹಾಸ್ಯಾಸ್ಪದ. ಈಗಾಗಲೇ ಬಿಜೆಪಿ ಪಕ್ಷವು ಬಿಹಾರ, ಉತ್ತರ ಪ್ರದೇಶ ಹಾಗೆಯೇ ಇತರ ರಾಜ್ಯಗಳಲ್ಲಿ ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿದ್ದು ಮೋದಿ ಅಲೆ ಕಡಿಮೆಯಾಗುತ್ತಿದೆ ಎಂದರು.ಈ ಹಿಂದೆ ಶಾಸಕರಾಗಿದ್ದ ಕುಞಂಬು ತುಳು ಅಕಾಡೆಮಿ, ತುಳುಭವನದಂತಹ ಕಾರ್ಯವನ್ನು ಮುನ್ನಡೆಸಿ ಸಾಂಸ್ಕೃತಿಕ ಕಲೆ ಸಾಹಿತ್ಯ ಸಹಿತ ಮೂಲಭೂತ ಸೌಕರ್ಯವನ್ನು ಕೊಡಮಾಡಿದ್ದಾರೆ, ಎಡರಂಗದಅಭ್ಯರ್ಥಿ ಮಂಜೇಶ್ವರ ಕ್ಷೇತ್ರದಲ್ಲಿ ಗೆಲ್ಲುವುದು ಖಚಿತ ಎಂದರು.

  ಸಮಾವೇಶದಲ್ಲಿ ಮಾತನಾಡಿದ ಕ್ಷೇತ್ರದ ಎಡರಂಗ ಅಭ್ಯರ್ಥಿ ಸಿ.ಎಚ್ ಕುಞಂಬು 2006 ರಲ್ಲಿತಾವುಗೆದ್ದ ಸಂದರ್ಭ ಪ್ರಾರಂಭಿಸಿದ ಹಲವು ಯೋಜನೆಗಳು ಕಳೆದ ಐದು ವರ್ಷಗಳಲ್ಲಿ ಯಾವುದೇ ಪ್ರಗತಿ ಕಾಣದೆ ಮೂಲೆಗುಂಪಾಗಿವೆ. ತಾವುಗೆದ್ದಲ್ಲಿ ತುಳುಭವನದ ನಿರ್ಮಾಣ, ತುಳು ಅಕಾಡೆಮಿ ಕಾರ್ಯಗಳು ಸಹಿತ ಎಲ್ಲಅಗತ್ಯ ಮೂಲಸೌಕರ್ಯಗಳನ್ನು ಕ್ಷೇತ್ರಕ್ಕೆ ಕೊಡಮಾಡುವುದಾಗಿ ಹೇಳಿದರು.

  ಸಮಾವೇಶದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ವಿಪಿಪಿ ಮುಸ್ತಫಾ, ಸಿಪಿಐ ನಾಯಕ ಬಿ.ವಿರಾಜನ್, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ.ಪಿ ಸತೀಶ್ಚಂದ್ರನ್, ಶಂಕರ್‌ರೈ ಮಾಸ್ತರ್, ಚಂದ್ರ ನಾಕ್, ಟಿಂಬರ್ ಅಬ್ದುಲ್ಲಾ, ಪಿ.ಬಿ ಮುಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News