ಹಿಂದುತ್ವವೇ ನಿಜವಾದ ಜಾತ್ಯಾತೀತತೆ: ತೇಜಸ್ವಿನಿ ರಮೇಶ್

Update: 2016-04-20 12:17 GMT

ಸುಳ್ಯ: ಸುಳ್ಯದ ಶ್ರೀಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ವತಿಯಿಂದ 16ನೇ ವರ್ಷದ ಕೇಶವಕೃಪಾ ವೇದ-ಯೋಗ-ಕಲಾ ಶಿಬಿರ ಆರಂಭಗೊಂಡಿದೆ.

ಹಳೆಗೇಟಿನ ಶ್ರೀಕೇಶವಕೃಪಾ ಸಭಾಂಗಣದಲ್ಲಿ ಶಿಬಿರ ಆರಂಭಗೊಂಡಿದ್ದು, ಆಸ್ಟ್ರೇಲಿಯಾದ ಟೆಲೆಸ್ಟ್ರ ಕಂಪೆನಿಯ ತಾಂತ್ರಿಕ ಸಲಹೆಗಾರ ಶ್ರೀಕೃಷ್ಣ ಶರ್ಮ ಕರುವಜೆ ಉದ್ಘಾಟಿಸಿದರು. ಸಂಸ್ಕೃತಿ, ಸಂಸ್ಕಾರವನ್ನು ಮಕ್ಕಳಿಗೆ ಮನೆಯಲ್ಲಿಯೇ ಕಲಿಸಬೇಕು ಹೊರತು ಶಾಲೆಗಳಲ್ಲಿ ಅಲ್ಲ. ಹಾಗಾಗಿ ಪಠ್ಯಪುಸ್ತಗಳ ರಚನೆಯಲ್ಲಿ ಅದನ್ನು ಕೈಬಿಡಲಾಗಿದೆ. ಹಿಂದೆ ಕೂಡುಕುಟುಂಬಗಳು ಇದ್ದಾಗ ಮನೆಯಲ್ಲಿಯೇ ಸಂಸ್ಕಾರ ಸಿಗುತ್ತಿತ್ತು. ಈಗ ವೇದಪಾಠ ಶಾಲೆಗಳು ಆ ಕೆಲಸ ಮಾಡುತ್ತಿವೆ ಎಂದ ಅವರು, ವಿದೇಶಗಳಲ್ಲಿ ಸ್ವಚ್ಛತೆ ಕುರಿತು ಪ್ರಾಥಮಿಕ ಶಿಕ್ಷಣದಲ್ಲಿ ಕಲಿಸಲಾಗುತ್ತದೆ. ಸ್ವಚ್ಛತೆ, ಸಮಯ ಪಾಲನೆ ಅವರಿಗೆ ರಕ್ತಗತವಾಗಿದೆ ಎಂದರು.

ಮಾಜಿ ಸಂಸದೆ ತೇಜಸ್ವಿನಿ ಶ್ರೀರಮೇಶ್ ದಿಕ್ಸೂಚಿ ಭಾಷಣ ಮಾಡಿದರು. ಜಗತ್ತಿನ ಇರುವಿಕೆಗೆ ಅಪಾಯ ಒಡ್ಡಿರುವ ಐಸಿಸ್, ಅಲ್‌ಖೈದಾಗಳಿಗೆ ಉತ್ತರ ಈ ಸಣ್ಣ ಶಿಬಿರಗಳಲ್ಲಿದೆ. ಸಂಸ್ಕೃತಿ, ಪರಂಪರೆ, ಸಂಸ್ಕಾರ ಮುಂದುವರಿಸುತ್ತ ಅಲ್ಲಿನ ಪ್ರಕೃತಿ, ಭೌಗೋಳಿಕತೆ, ಭಾಷೆ, ಜೀವನಪದ್ಧತಿಗೆ ಹೊಂದಿಕೊಳ್ಳುವುದು, ಗುರು ಹಿರಿಯರನ್ನು ಗೌರವಿಸುವುದು, ಪ್ರೀತಿಯನ್ನು ಹಂಚುವುದು ನಿಜವಾದ ಭಾರತೀಯತೆ, ಹಿಂದುತ್ವವೇ ನಿಜವಾದ ಜಾತ್ಯಾತೀತತೆ ಎಂದರು. ಓದಿದ ಮಹಿಳೆ ಅದನ್ನು ಸಮಾಜಕ್ಕೆ ನೀಡುವುದು ತಪ್ಪಲ್ಲ. ಆದರೆ ಅನಿವಾರ್ಯತೆಗಾಗಿ, ಹೊಟ್ಟೆಪಾಡಿಗಾಗಿ ದುಡಿಯವುದನ್ನು ಭವ್ಯ ಭಾರತ ಎನ್ನಲಾಗದು ಎಂದವರು ಹೇಳಿದರು.

ತೂಗು ಸೇತುವೆಗಳ ಸರದಾರ ಗಿರೀಶ್ ಭಾರದ್ವಾಜ್ ಅಧ್ಯಕ್ಷತೆ ವಹಿಸಿದ್ದರು. ಉಚಿತವಾಗಿ ನೀಡುವ ಪಠ್ಯಪುಸ್ತಕ, ವ್ಯಾಸಪೀಠ, ವಸ್ತ್ರ-ಉತ್ತರೀಯಗಳನ್ನು ವಿತರಿಸಲಾಯಿತು. ಪ್ರತಿಷ್ಠಾನದ ಗೌರವಾಧ್ಯಕ್ಷ ಗೋಪಾಲಕೃಷ್ಣ ಭಟ್ ವೇದಿಕೆಯಲ್ಲಿದ್ದರು. ಎಂ.ಎಸ್.ನಾಗರಾಜ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರೋಹಿತ ನಾಗರಾಜ ಭಟ್ ಸ್ವಾಗತಿಸಿ, ಗಣೇಶ ಶರ್ಮ ವಂದಿಸಿದರು. ಶ್ರೀದೇವಿ ನಾಗರಾಜ ಭಟ್, ಸುದರ್ಶನ ಭಟ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News