ಎ.21 ರಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಮಂಗಳೂರಿಗೆ

Update: 2016-04-20 15:04 GMT

ಸುರತ್ಕಲ್, ಎ.20: ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಎ.21 ರಂದು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಸುರತ್ಕಲ್ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಚಾಲನೆ ನೀಡಲಿದ್ದಾರೆ ಎಂದು ಉತ್ತರ ವಲಯ ಶಾಸಕ ಮೊಯ್ದಿನ್ ಬಾವಾ ಹೇಳಿದರು.

ಬುಧವಾರ ಸುರತ್ಕಲ್ ನ ಶಾಸಕರ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸುಮಾರು 130 ಕೋಟಿ
 ರೂ.ವೆಚ್ಚದಲ್ಲಿ ನಿರ್ಮಾಣ ಗೊಳ್ಳಲಿರುವ ಸುರತ್ಕಲ್ ಮಾರುಕಟ್ಟೆ, ಬಸ್ ತಂಗುದಾಣಗಳು , ಸುಮಾರು 55 ಕೋಟಿ ರೂ. ವೆಚ್ಚದಲ್ಲಿ ಸುರತ್ಕಲ್  ಎಂ.ಆರ್.ಪಿ.ಎಲ್. ರಸ್ತೆ ಷಟ್ಪದ ರಸ್ತೆ ಕಾಮಗಾರಿ, 2.75 ಕೋಟಿ.ರೂ ವೆಚ್ಚದ ಎಲ್ಲಾ ವ್ಯವಸ್ಥೆಗಳನ್ನೊಳಗೊಂಡಂತೆ ಮಂಗಳೂರು ನಗರ ಪಾಲಿಕೆಯ ವಲಯ ಕಚೇರಿ, ಕೋಟಿ ರೂ.ವೆಚ್ಚದಲ್ಲಿ ನನೆಗುದಿಗೆ ಬಿದ್ದಿರುವ ಶ್ರೀನಿವಾಸ ಮಲ್ಯ ಸಭಾದ ಮಹತ್ತರ ಕಾಮಗಾರಿಗಳಿಗೆ ಮುಖ್ಯ ಮಂತ್ರಿಯವರು ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ ಎಂದರು.

ಅಲ್ಲದೆ, ಸುರತ್ಕಲ್ ಪರಿಸರದ ಕೃಷ್ಣಾಪುರದಲ್ಲಿ ಸುಸಜ್ಜಿತ ಕ್ರೀಡಾಂಗಣ ಮತ್ತು ಈಜುಕೊಳದ ಘೋಷಣೆ ಮಾಡಲಿದ್ದಾರೆ ಎಂದರು.
ಪತ್ರಿಕಾ ಗೋಷ್ಟಿಯಲ್ಲಿ ಮಾಜೀ ಉಪಮೇಯರ್ ಪುರುಶೋತ್ತಮ.ಚಿತ್ರಾಪುರ, ಕಾರ್ಪೊರೇಟರ್ಗಳಾದ ಅಶೋಕ್ ಶೆಟ್ಟಿ, ಪ್ರತಿಭಾ ಕುಳಾಯಿ, ಬಶೀರ್ ಅಹ್ಮದ್, ಬಶೀರ್ ಬೈಕಂಪಾಡಿ, ವಿಜಯಾ ಅರಾಹ್ನ, ಆನಂದ್ ಅಮೀನ್, ರಾಜೇಶ್, ಡಾ. ಭಾಸ್ಕರ ಮೊದಲಾದವರು ಉಪಸ್ಥಿತರಿದ್ದರು.
 

ಸಂಚಾರ ಬದಲಾವಣೆ: 
ಮುಖ್ಯ ಮಂತ್ರಗಳು ಸಂಜೆ 4 ಗಂಟೆಗೆ ಸುರತ್ಕಲ್ ನ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿರುವ ಪ್ರಯುಕ್ತ ಅಪಾರ ಜನ ಸಂದಣಿ ಸೇರುವ ನಿರೀಕ್ಷೆ ಇರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗದಂತೆ ಸಂಜೆ 4 ಗಂಟೆಯ ಬಳಿಕ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದ್ದು, ಸುರತ್ಕಲ್ ನಿಂದ  ಚೊಕ್ಕಬೆಟ್ಟು ವರೆಗಿನ ರಸ್ತೆಯನ್ನು ಬಂದ್ ಮಾಡಿ ಕಾನಾ ಹೊನ್ನಕಟ್ಟೆಯಾಗಿ ಸುರತ್ಕಲ್ ತಲುಪುವಂತೆ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News