ಪರಿಸರ ಸಂಬಂಧಿ ಷರತ್ತು ಪಾಲಿಸಲು ಎಂ.ಆರ್‌.ಪಿ.ಎಲ್‌ ಗೆ ಸೂಚನೆ

Update: 2016-04-20 16:07 GMT

ಮಂಗಳೂರು, ಎ. 20: ಎಂ.ಆರ್‌.ಪಿ.ಎಲ್‌.ನ ವಿಸ್ತರಣಾ ಹಂತದ ಸಲ್ಫರ್ ಮತ್ತು ಕೋಕ್ ಘಟಕಗಳಿಗೆ ಜೋಕಟ್ಟೆ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಸ್ಪಂದಿಸಿರುವ ರಾಜ್ಯ ಸರಕಾರ, ಹಸಿರು ವಲಯ ನಿರ್ಮಾಣಕ್ಕೆ ಅಗತ್ಯವಿರುವ 27 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಲು ಆದೇಶ ನೀಡಿದೆ. ಎಂಆರ್‌ಪಿಎಲ್ ಸಂಸ್ಥೆಯು ಪರಿಸರ ಮಾಲಿನ್ಯ ಕುರಿತಾದ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಬುಧವಾರ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ಹೊರಡಿಸಿರುವ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದ್ದು, ಈ ಮೂಲಕ ಈ ಘಟಕಗಳಿಂದ ಪರಿಸರ, ಆರೋಗ್ಯದ ಮೇಲಾಗುತ್ತಿರುವ ದುಷ್ಪರಿಣಾಮಗಳ ಕುರಿತಂತೆ ಜೋಕಟ್ಟೆ ನಾಗರಿಕರು ಕಳೆದ ಎರಡು ವರ್ಷಗಳಿಂದ ನಡೆಸುತ್ತಿರುವ ಹೋರಾಟಕ್ಕೆ ಕೊನೆಗೂ ಜಯ ದೊರಕಿದಂತಾಗಿದೆ. ಎಂಆರ್‌ಪಿಎಲ್ ಸುತ್ತ ಹಸಿರು ವಲಯವನ್ನು ನಿರ್ಮಿಸಲು ಅಗತ್ಯವಿರುವ 27 ಎಕರೆ ಪ್ರದೇಶವನ್ನು ಎಂಆರ್‌ಪಿಲ್ ಮತ್ತು ತೊಂದರೆಗೊಳಗಾಗುತ್ತಿರುವ ಜೋಕಟ್ಟೆ ಗ್ರಾಮದಿಂದ ಸ್ವಾಧೀನ ಪಡಿಸಬಹುದು ಎಂದೂ ಸರಕಾರ ತನ್ನ ಆದೇಶದಲ್ಲಿ ತಿಳಿಸಿದೆ.

ತೆರೆದ ಪ್ರದೇಶದಲ್ಲಿ ಸಲ್ಫರ್ ಸಂಗ್ರಹವನ್ನು ತಕ್ಷಣದಿಂದ ತಡೆಹಿಡಿಯಬೇಕೆಂದು ಸರಕಾರ ತನ್ನ ಆದೇಶದಲ್ಲಿ ತಿಳಿಸಿರುವುದಲ್ಲದೆ, 2017ರ ಜೂನ್ ತಿಂಗಳೊಳಗೆ ಸಲ್ಫರ್ ಪುಡಿಯನ್ನು ಸಂಗ್ರಹಿಸಲು ಸಂಪೂರ್ಣವಾಗಿ ಬಂದ್ ಆಗಿರುವಂತಹ ಶೆಡ್ ನಿರ್ಮಿಸಬೇಕೆಂದು ತಿಳಿಸಿದೆ.

ಕೋಕ್ ಹುಡಿ ಸುತ್ತಮುತ್ತಲಿನ ಪ್ರದೇಶವನ್ನು ಹರಡುವುದನ್ನು ತಡೆಗಟ್ಟಲು ಇದೇ ಡಿಸೆಂಬರ್ ಅಂತ್ಯದೊಳಗೆ ಕೋಕ್ ಡ್ರಮ್‌ನ ಮೇಲೆ ಮುಚ್ಚಿದ ಓವರ್ ಹೆಡ್ ಡೈವರ್ಟರ್ ವ್ಯವಸ್ಥೆಯನ್ನು ಅಳವಡಿಸಬೇಕು. ಪ್ರಸ್ತುತ ಉತ್ತರ ಭಾಗದಲ್ಲಿರುವ ಪೆಟ್‌ಕೋಕ್ ಸಂಗ್ರಹಾಗಾರವನ್ನು ತಾಂತ್ರಿಕ ಸಮಿತಿ ಸೂಚಿಸುವ ಸ್ಥಳಕ್ಕೆ 2017ರ ಮೇಯೊಳಗೆ ಸ್ಥಳಾಂತರಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ಕಳೆದ ರವಿವಾರ ಎಂಆರ್‌ಪಿಎಲ್‌ಗೆ ಭೇಟಿ ನೀಡಿದ್ದ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಹಸಿರು ವಲಯ ನಿರ್ಮಾಣಕ್ಕೆ ಅಗತ್ಯವಿರುವ ಜಾಗ ಸ್ವಾಧೀನಕ್ಕೆ ಅನುಮತಿ ನೀಡುವುದಾಗಿ ಭರವಸೆ ನೀಡಿದ್ದರು. ಒಟ್ಟು 83 ಎಕರೆ ಪ್ರದೇಶದಲ್ಲಿ ಹಸಿರು ವಲಯ ನಿರ್ಮಾಣವಾಗಲಿದೆ.

   ಎಂಆರ್‌ಪಿಎಲ್‌ನ ಕೋಕ್ ಸಲ್ಫರ್ ಘಟಕದಿಂದ ಜೋಕಟ್ಟೆ ಪ್ರದೇಶದ ನೀರು ಮಲಿನಗೊಂಡು ವಿವಿಧ ರೀತಿಯ ಕಾಯಿಲೆಗಳು, ಕೋಕ್ ಸಲ್ಫರ್ ಹುಡಿ ಪರಿಸರದಲ್ಲಿ ಹರಡುತ್ತಿರುವುದರಿಂದ ಆಗುತ್ತಿರುವ ಪರಿಸರ ಮಾಲಿನ್ಯ, ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಸ್ಥಳೀಯ ನಾಗರಿಕರು ಡಿವೈಎಫ್‌ಐ ನೇತೃತ್ವದಲ್ಲಿ ಸುಮಾರು 2 ವರ್ಷಗಳಿಂದ ನಾನಾ ರೀತಿಯ ಹೋರಾಟದ ಮೂಲಕ ಜಿಲ್ಲಾಡಳಿತದ ಗಮನ ಸೆಳೆದಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿ ಎ. ಬಿ. ಇಬ್ರಾಹಿಂ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರು ಮುಖ್ಯ ಕಾರ್ಯದರ್ಶಿ ಅವರಿಗೆ ವರದಿಯನ್ನು ಸಲ್ಲಿಸಿದ್ದು ಹಸಿರು ವಲಯ ನಿರ್ಮಾಣಕ್ಕೆ ಬೇಕಾಗಿರುವ ಜಮೀನು ಗುರುತಿಸುವಂತೆ ಕೋರಿದ್ದರು. ಅಲ್ಲದೆ ಪೆಟ್ ಕೋಕ್ ಮತ್ತು ಸಲ್ಫರ್ ಘಟಕದಿಂದ ಉಂಟಾಗುತ್ತಿರುವ ಮಾಲಿನ್ಯವನ್ನು ನಿಯಂತ್ರಿಸಲು ಕಂಪೆನಿಗೆ ನೀಡಿರುವ ಸೂಚನೆಗಳನ್ನು ವಿವರಿಸಿದ್ದರು.

2015ರ ಏಪ್ರಿಲ್ 5ರಂದು ಎಂಆರ್‌ಪಿಎಲ್‌ಗೆ ಭೇಟಿ ನೀಡಿದ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ತೈಲ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಪ್ರತಿಭಟನಾ ನಿರತರಾಗಿದ್ದ ಜೋಕಟ್ಟೆ ನಾಗರಿಕರನ್ನು ಭೇಟಿಯಾಗಿ, ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜನಪ್ರತಿನಿಧಿಗಳ ಮತ್ತು ನಾಗರಿಕರ ಸಮಿತಿ ರಚಿಸುವಂತೆ ಸೂಚಿಸಿದ್ದರು. ಆ ಪ್ರಕಾರ ರಚನೆಯಾದ ಸಮಿತಿ ಹಲವು ಸುತ್ತುಗಳ ಮಾತುಕತೆಗಳನ್ನು ನಡೆಸಿತ್ತು. ಅದೇ ವೇಳೆಗೆ ರಾಜ್ಯ ಮಾಲಿನ್ಯನಿಯಂತ್ರಣ ಮಂಡಳಿಯು ತಾಂತ್ರಿಕ ಸಮಿತಿಯನ್ನು ಕಳೆದ ಆಗಸ್ಟ್ ತಿಂಗಳಲ್ಲಿ ಎನ್‌ಐಟಿಕೆ ಪ್ರೊ. ಜಿ. ಶ್ರೀನಿಕೇತನ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News