ಎ.30: ಐದು ಜಿಲ್ಲೆಗಳ ಪ್ರಾಂತೀಯ ವಕೀಲರ ಸಮ್ಮೇಳನ

Update: 2016-04-20 18:43 GMT

ಮಂಗಳೂರು, ಎ.20: ನಗರದ ವಕೀಲರ ಸಂಘದ ಆಶ್ರಯದಲ್ಲಿ ಎ.30ರಂದು ಪುರಭವನದಲ್ಲಿ ಐದು ಜಿಲ್ಲೆಗಳ ಪ್ರಾಂತೀಯ ವಕೀಲರ ಸಮ್ಮೇಳನ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎಸ್.ಪಿ.ಚಂಗಪ್ಪ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ಸುಮಾರು 2,000ಕ್ಕೂ ಅಧಿಕ ಮಂದಿ ವಕೀಲರು ಭಾಗವಹಿಸಲಿರುವ ಸಮ್ಮೇಳನವನ್ನು ಕಾನೂನು ಸಚಿವ ಟಿ.ಬಿ. ಜಯಚಂದ್ರ ಉದ್ಘಾಟಿಸುವರು. ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ದ.ಕ.ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿ ಎ.ಎನ್. ವೇಣುಗೋಪಾಲ ಗೌಡ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ರಾಜ್ಯ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಹಾಗೂ ಪ್ರಸ್ತುತ ಆಂಧ್ರ ಪ್ರದೇಶದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್, ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಸ್.ಅಬ್ದುಲ್ ನಝೀರ್ ಮತ್ತು ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್ ಅಲ್ಲದೆ ರಾಜ್ಯದ ಅಡ್ವಕೇಟ್ ಜನರಲ್ ಮಧುಸೂದನ್ ಆರ್. ನಾಯಕ್, ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ಎ.ಆರ್.ಪಾಟೀಲ್ ಭಾಗವಹಿಸಲಿದ್ದಾರೆ.

ಸಂಜೆ 5 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಸಮಾರೋಪ ಭಾಷಣ ಮಾಡಲಿರುವರು. ಈ ಸಂದರ್ಭ ಅವರನ್ನು ಸನ್ಮಾನಿಸಲಾಗುವುದು ಎಂದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷ ಯಶೋಧರ ಕರ್ಕೇರಾ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಎಚ್.ವಿ., ಕೋಶಾಧಿಕಾರಿ ಯತೀಶ್, ಸದಸ್ಯೆ ಕವಿತಾ ಮುರುಗೇಶ್ ಉಪಸ್ಥಿತರಿದ್ದರು. ಕೋರ್ಟ್ ಆವರಣದಲ್ಲಿ

ವಿಶೇಷ ಭದ್ರತೆಗೆ ಒತ್ತಾಯ
ಕೋರ್ಟ್ ಆವರಣದಲ್ಲಿ ಕಳ್ಳತನ, ಆತ್ಮಹತ್ಯೆ ಮೊದಲಾದ ಪ್ರಕರಣಗಳ ಜೊತೆಗೆ ವಿಚಾರಣೆಯ ವೇಳೆ ಕೈದಿಗಳಿಂದ ನಡೆಯುವ ಅನಿರೀಕ್ಷಿತ ಘಟನೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೋರ್ಟ್‌ನಲ್ಲಿ ಸಿಸಿ ಕ್ಯಾಮರಾ ಹಾಗೂ ಮೆಟಲ್ ಡಿಟೆಕ್ಟರ್‌ಗಳನ್ನು ಅಳವಡಿಸುವ ಮೂಲಕ ವಿಶೇಷ ಭದ್ರತೆ ಒದಗಿಸುವಂತೆ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಗುವುದು ಎಂದು ಎಸ್.ಪಿ. ಚಂಗಪ್ಪ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News