ಅಪ್ನಾದೇಶ್ ಸ್ವಯಂಸೇವಕರ ಸಮಾವೇಶ

Update: 2016-04-20 19:00 GMT

ಕೊಣಾಜೆ, ಎ.20: ಮಾದರಿ ಗ್ರಾಮಾ ಭಿವೃದ್ಧಿ ಆಂದೋಲನ, ಅಪ್ನಾದೇಶ್ ಬಳಗ ದ.ಕ.ಜಿಲ್ಲೆ, ಚಿತ್ತಾರ ಬಳಗ ಮಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜನಶಿಕ್ಷಣ ಟ್ರಸ್ಟ್, ಸುಗ್ರಾಮ ಸಂಘ, ಗ್ರಾಮ ವಿಕಾಸ ಕೇಂದ್ರಗಳ ಸಹಭಾಗಿತ್ವದಲ್ಲಿ ಅಪ್ನಾದೇಶ್ ಸ್ವಯಂ ಸೇವಕರ ಸಮಾವೇಶವು ಮುಡಿಪು ಜನಶಿಕ್ಷಣ ಟ್ರಸ್ಟ್ ಆವರಣದಲ್ಲಿ ಬುಧವಾರ ಜರಗಿತು. ಅಪ್ನಾದೇಶ್ ಸಂಸ್ಥಾಪಕ ಹಾಗೂ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಭರತ್‌ಲಾಲ್ ಮೀನಾ ಸೋಲಾರ್ ದೀಪಕ್ಕೆ ಚಾಲನೆ ನೀಡುವ ಮೂಲಕ ಸಮಾವೇಶವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಒಳ್ಳೆಯ ವಿಚಾರಗಳು, ಒಳ್ಳೆಯ ಸಂಘಟನೆಗಳು ಬಹಳಷ್ಟಿವೆ. ಆದರೆ ಅದನ್ನು ಹೊರತುಪಡಿಸಿ ನಕಾರಾತ್ಮಕ ವಿಚಾರಗಳು ಮಾತ್ರ ಇಂದು ಪ್ರಚಾರವನ್ನು ಪಡೆಯುತ್ತಿವೆ. ಮೌಲ್ಯಯುತ ವಿಷಯಗಳು ಪ್ರಚಾರ ಪಡೆದುಕೊಂಡಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.

ಈ ಸಂದರ್ಭ ಮಂಚಿ ಕೊಳ್ನಾಡು ಶಾಲಾ ವಿದ್ಯಾರ್ಥಿಗಳಿಂದ ‘ನೀಲಿ ಕುದುರೆ’ ರಂಗನಾಟಕ ಪ್ರದರ್ಶನ ನಡೆಯಿತು. ಸಾಧಕರಿಗೆ ಗೌರವ ಹಾಗೂ ಸ್ವಚ್ಛ-ಸ್ವಾವಲಂಬಿ ಮಾದರಿ ಗ್ರಾಮ ನಿರ್ಮಾಣದ ಸಂವಾದ-ಸಂಕಲ್ಪಕಾರ್ಯಕ್ರಮಗಳು ನಡೆಯಿತು. ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಗಣೇಶ್ ಬಿ., ವಿಕಾಸ್ ಕಾಲೇಜಿನ ಆಡಳಿತಾಧಿಕಾರಿ ಅನಂತ ಪ್ರಭು, ಮಾಜಿ ಒಂಬಡ್ಸ್ ಮೆನ್ ಶೀನ ಶೆಟ್ಟಿ, ಚಿತ್ತಾರ ಬಳಗದ ಸಂಚಾಲಕ ಹಾಗೂ ಪತ್ರಿಕಾ ಛಾಯಾಗ್ರಾಹಕ ಸತೀಶ್ ಇರಾ, ಸೆಲ್ಕೋ ಫೌಂಡೇಶನ್‌ನ ಹಿರಿಯ ಪ್ರಬಂಧಕ ಕೃಷ್ಣರಾಜ್, ಚಿತ್ತಾರ ಬಳಗದ ವೆಂಕಟೇಶ್ ಮುಡಿಪು, ಅಪ್ನಾದೇಶ್ ಪತ್ರಿಕೆ ಸಂಪಾದಕ ಜಾಹೀದ್ ಜವಳಿ ಮೊದಲಾದವರು ಉಪಸ್ಥಿತರಿದ್ದರು. ಚಿತ್ತಾರ ಬಳಗದ ಚಂದ್ರಶೇಖರ್ ಪಾತೂರು ಸ್ವಾಗತಿಸಿದರು. ಜನಶಿಕ್ಷಣ ಟ್ರಸ್ಟಿನ ನಿರ್ದೇಶಕ ಕೃಷ್ಣ ಮೂಲ್ಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News