ಎತ್ತಿನಹೊಳೆ ಯೋಜನೆ ನದಿ ತಿರುವು ಅಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2016-04-21 07:41 GMT

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡಕ್ಕೆ ಹೆಚ್ಚುವರಿಯಾಗಿ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಿದರು.

ಮಂಗಳೂರು, ಎ.21: ಎತ್ತಿನಹೊಳೆ ಯೋಜನೆಯು ನದಿ ತಿರುವು ಎಂಬುದು ಸರಿಯಲ್ಲ. ಇದು ಮಳೆಗಾಲದ ಸಂದರ್ಭದ ಪ್ರವಾಹದ ನೀರನ್ನು ಸಂಗ್ರಹಿಸಿ ಉತ್ತರ ಕರ್ನಾಟಕ ಭಾಗದ ಜನರ ನೀರಿನ ಬವಣೆಯನ್ನು ನೀಗಿಸುವ ಯೋಜನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಪೂರ್ಣಗೊಂಡ ಯೋಜನೆಗಳ ಲೋಕಾರ್ಪಣೆಗಾಗಿ ಗುರುವಾರ ದ.ಕ. ಜಿಲ್ಲೆಗೆ ಆಗಮಿಸಿದ ಅವರು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದರು.
ಎತ್ತಿನಹೊಳೆ ಯೋಜನೆಗೂ ನದಿ ತಿರುವಿಗೂ ಸಂಬಂಧವೇ ಇಲ್ಲ. ಇದು ಬೇರೆಯೇ ಯೋಜನೆ ಎಂದು ಮುಖ್ಯಮಂತ್ರಿ ಸ್ಪಷ್ಪಪಡಿಸಿದರು.

ಎತ್ತಿನಹೊಳೆ ಯೋಜನೆಯಲ್ಲಿ ತಿಳಿಸಿರುವಂತೆ 24 ಟಿಎಂಸಿ ನೀರು ಮಳೆ ಇಲ್ಲಿ ಲಭ್ಯವಾಗಲಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ ಮುಖ್ಯಮಂತ್ರಿ, 24 ಟಿಎಂಸಿಗಿಂತಲೂ ಅಧಿಕ ನೀರನ್ನು ಎತ್ತಿನಹೊಳೆ ಯೋಜನೆಯ ಮೂಲಕ ಉತ್ತರ ಕರ್ನಾಟಕ ಭಾಗಕ್ಕೆ ನೀಡಲು ಸಾಧ್ಯ ಎಂದರು. ಒಂದುವೇಳೆ ಎತ್ತಿನಹೊಳೆ ಯೋಜನೆ ಯಶಸ್ವಿಯಾಗದಿದ್ದಲ್ಲಿ ಅದಕ್ಕೆ ಯಾರು ಹೊಣೆಗಾರರು ಎಂಬ ಸುದ್ದಿಗಾರರ ಪ್ರಶ್ನೆಗೆ, ಎತ್ತಿನಹೊಳೆ ಯೋಜನೆಯನ್ನು ಸೂಕ್ತ ತಜ್ಞರ ತಾಂತ್ರಿಕ ಸಲಹೆ, ಅಭಿಪ್ರಾಯಗಳನ್ನು ಸಂಗ್ರಹಿಸಿ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಆದ್ದರಿಂದ ಇದು ವಿಫಲಗೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ವಿಶ್ವಾಸ ವ್ಯಕ್ತಪಡಿಸಿದರು.
ಮಂಗಳೂರು ನಗರದಲ್ಲಿ ಕುಡಿಯುವ ನೀರಿ ತಾತ್ವರ ಉಂಟಾಗಿದ್ದು, ಎರಡು ದಿನಗಳಿಗೊಮ್ಮೆ ಮಾತ್ರ ನೀರು ಸರಬರಾಜಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ಎತ್ತಿನಹೊಳೆ ಯೋಜನೆ ಅಸ್ತಿತ್ವಕ್ಕೆ ಬಂದರೆ ಇಲ್ಲಿನ ನೀರಿನ ಸಮಸ್ಯೆ ಇನ್ನಷ್ಟು ಬಿಗಾಡಾಯಿಸದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಂಗಳೂರಿನ ನೀರಿನ ಸಮಸ್ಯೆಗೆ ಎತ್ತಿನಹೊಳೆ ಯೋಜನೆಯಿಂದ ಯಾವುದೇ ಬಾಧಕವಾಗದು ಎಂದರು.

 ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಆರೋಗ್ಯ ಸಚಿವ ಯು.ಟಿ.ಖಾದರ್, ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ ಜೈನ್, ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ, ಶಾಸಕರಾದ ಬಿ.ಎ.ಮೊಯ್ದಿನ್ ಬಾವ, ಜೆ.ಆರ್.ಲೋಬೊ, ಪ್ರಮೋದ್ ಮಧ್ವರಾಜ್, ಐವನ್ ಡಿಸೋಜ, ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಪಶ್ಚಿಮ ವಲಯ ಐಜಿಪಿ ಅಮೃತ್ ಪಾಲ್, ಮಂಗಳೂರು ನಗರ ಪೊಲೀಸ್ ಕಮಿಷನರ್ ಎಂ.ಚಂದ್ರಶೇಖರ್, ದ.ಕ. ಜಿಲ್ಲಾ ಎಸ್ಪಿ ಡಾ.ಶರಣಪ್ಪ ಎಸ್.ಡಿ. ಮೊದಲಾದವರು ಉಪಸ್ಥಿತರಿದ್ದರು.

ಬಜ್ಪೆಯಲ್ಲಿ ನೂತನ ರಸ್ತೆ ಲೋಕಾರ್ಪಣೆ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಸಂದರ್ಭ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡಕ್ಕೆ ಹೆಚ್ಚುವರಿಯಾಗಿ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಲೋಕಾರ್ಪಣೆಗೊಳಿಸಿದರು.
1.125 ಕಿ.ಮೀ. ಉದ್ದದ ಈ ರಸ್ತೆಯನ್ನು 11.46 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.

ತಡವಾಗಿ ಆಗಮಿಸಿದ ಸಿಎಂ:
ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಉದ್ದೇಶದಿಂದ ಗುರುವ ಬೆಳಗ್ಗೆ 9:20ಕ್ಕೆ ಸುಮಾರಿಗೆ ಮಂಗಳೂರಿಗೆ ಆಗಮಿಸಬೇಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಮಾರು ಒಂದೂವರೆ ಗಂಟೆಗಳಷ್ಟು ತಡವಾಗಿ ತಲುಪಿದರು. 10:45ರ ಸುಮಾರಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮುಖ್ಯಮಂತ್ರಿ ಸುದ್ದಿಗಾರರೊಂದಿಗೆ ಮಾತನಾಡಿ, ಬಜ್ಪೆಯ ಹೊಸ ರಸ್ತೆಯನ್ನು ಉದ್ಘಾಟಿಸಿದರು. ಬಳಿಕ ಬಂಟ್ವಾಳ ತಾಲೂಕಿನ ಸಜಿಪದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ನಿರ್ಮಿಸಿರುವ ಬ್ರಹ್ಮಶ್ರೀ ನಾರಾಯಣ ಗುರು ಜ್ಞಾನಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News