ಕರ್ನಾಟಕ ನಿರ್ಮಾಣದಲ್ಲಿ ಕೊಂಕಣಿಗ ಕೊಡುಗೆ ಅನನ್ಯ: ಸಿದ್ಧರಾಮಯ್ಯ

Update: 2016-04-21 14:20 GMT

ಮಂಗಳೂರು, ಎ. 21: ಕರ್ನಾಟಕ ನಿರ್ಮಾಣದಲ್ಲಿ ಕೊಂಕಣಿ ಭಾಷಿಗರ ಕೊಡುಗೆ ಅನನ್ಯವಾಗಿದ್ದು, ರಾಜ್ಯದಲ್ಲಿ ಕೊಂಕಣಿಗರು ಕನ್ನಡಿಗರ ಜತೆ ಬೆರೆತು ಹೋಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅಭಿಪ್ರಾಯಿಸಿದರು. ಶಕ್ತಿನಗರದ ಕಲಾಂಗಣ್‌ನಲ್ಲಿ ಮಾಂಡ್ ಸೊಭಾಣ್ ಸಂಸ್ಥೆ ನೇತೃತ್ವದಲ್ಲಿ ನಿರ್ಮಾಣವಾಗಲಿರುವ 30 ಕೋಟಿ ರೂ. ವೆಚ್ಚದ ಕೊಂಕಣಿ ಮ್ಯೂಸಿಯಂ (ವಸ್ತು ಸಂಗ್ರಹಾಲಯ)ಗೆ ಶಂಕುಸ್ಥಾಪನಾ ಫಲಕ ಅನಾವರಣಗೊಳಿಸಿ ಮಾತನಾಡಿದರು.

ಮ್ಯೂಸಿಯಂಗಾಗಿ ಈಗಾಗಲೇ 2.5 ಕೋಟಿ ರೂ.ಗಳನ್ನು ನೀಡಿದ್ದು, ಮತ್ತೆ ಮುಂದಿನ ವರ್ಷ ಹಣ ನೀಡುವ ಬಗ್ಗೆ ಪರಿಗಣಿಸಲಾಗುವುದು. ಈಗಾಗಲೇ ಪ್ರೊಟೆಸ್ಟೆಂಟ್ ಕ್ಸಿಶ್ಚಿಯನ್ನರ ಸಂಸ್ಥೆಗೆ ಕಿಟೆಲ್‌ರವರ ಗ್ರಂಥಗಳ ಸಂಗ್ರಹ, ಕನ್ನಡ ಸಂಶೋಧನೆಗಾಗಿ 2.5 ಕೋಟಿ ರೂ. ನೀಡಲಾಗಿದೆ. ಕೊಂಕಣಿ ಭಾಷೆ ಸಹೋದರ ಭಾಷೆಯಾಗಿರುವುದರಿಂದ ಅದರ ಅಭಿವೃದ್ದಿಗೆ ಅಗತ್ಯವಾದ ಎಲ್ಲಾ ನೆರವು, ಸಹಕಾರವನ್ನು ಸರಕಾರ ನೀಡಲಿದೆ ಎಂದು ಹೇಳಿದರು.

ಕರಾವಳಿ ಪ್ರದೇಶದ ಕೊಂಕಣಿಗರು ರಾಜ್ಯದ ಅಭಿವೃದ್ದಿಯಲ್ಲರೂ ಕೆಲಸ ನಿರ್ವಹಿಸುತ್ತಿದ್ದು, ಕೊಂಕಣಿ ಸಮುದಾಯದ ಸಂಸ್ಕೃತಿಯನ್ನು ಕಾಪಾಡುವಲ್ಲಿ ಮಾಂಡ್ ಸೊಭಾಣ್ ಉತ್ತಮ ಕಾರ್ಯ ನಿರ್ವಹಿಸುತ್ತಿದೆ. ನೂತನವಾಗಿ ನಿರ್ಮಾಣವಾಗಲಿರುವ ಮ್ಯೂಸಿಯಂನಲ್ಲಿ ಕೊಂಕಣಿಗರ ವೈವಿದ್ಯತೆಯನ್ನು ಸಂಗ್ರಹಿಸುವುದು, ಅದನ್ನು ಜನರಿಗೆ ಮುಟ್ಟಿಸುವುದು ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಲಿ ಎಂದು ಶುಭ ಹಾರೈಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಕೊಂಕಣಿ ಮ್ಯೂಸಿಯಂ ನಿರ್ದೇಶಕರ ಹಾಗೂ ಸದಸ್ಯರ ಹೆಸರಿನ ಫಲಕ ಅನಾವರಣಗೊಳಿಸಿದರು. ಈ ಸಂದರ್ಭ ಕಂಒಕಣಿ ಮ್ಯೂಸಿಯಂ ದಾನಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಪಿಂಟೋ ಸ್ವಾಗತಿಸಿದರು. ದಾನಿ ಹಾಗೂ ಸಮುದಾಯದ ಮುಖಂಡರಾದ ರೊನಾಲ್ಡ್ ಕುಲಾಸೊ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ಕೇಂದ್ರದ ಮಾಜಿ ಸಚಿವ ಆಸ್ಕರ್ ಫೆರ್ನಾಂಡಿಸ್, ಪತ್ನಿ ಬ್ಲೋಸಂ ಫೆರ್ನಾಂಡಿಸ್, ಸಚಿವರಾದ ಅಭಯಚಂದ್ರ ಜೈನ್, ಯು.ಟಿ.ಖಾದರ್, ಶಾಸಕರಾದ ಜೆ.ಆರ್. ಲೋಬೋ, ಐವನ್ ಡಿಸೋಜಾ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ, ಶಾಸಕಿ ಶಕುಂತಳಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ ವಂದಿಸಿದರು. ವಿಕ್ಟರ್ ಮಥಾಯಸ್ ಕಾರ್ಯಕ್ರಮ ನಿರೂಪಿಸಿದರು.

ಪಿಯುಸಿ, ಸ್ನಾತಕೋತ್ತರ ಪದವಿಯಲ್ಲಿ ಕೊಂಕಣಿ ಕಲಿಕೆಗೆ ಕ್ರಮ
ಈಗಾಗಲೇ ಕೊಂಕಣಿ ಭಾಷೆಯಲ್ಲಿ 10ನೆ ತರಗತಿವರೆಗೆ ಹಾಗೂ ಪದವಿ ತರಗತಿಗಳಲ್ಲಿ ಐಚ್ಛಿಕ ಭಾಷೆಯಾಗಿ ಕಲಿಸಲಾಗುತ್ತಿದೆ. ಪಿಯುಸಿ ಹಾಗೂ ಸ್ನಾತಕೋತ್ತರ ಪದವಿಯಲ್ಲೂ ಮುಂದಿನ ವರ್ಷದಿಂದ ಕೊಂಕಣಿ ಭಾಷೆಯನ್ನು ಅಳವಡಿಸುವ ಕುರಿತು ಪರಿಶೀಲಿಸಿ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News