ಶಾಲೆ ಕಡೆ ನನ್ನ ನಡೆ ಶಿಕ್ಷಣ ನನ್ನ ಮೂಲಭೂತ ಹಕ್ಕು ಕಾರ್ಯಕ್ರಮಕ್ಕೆ ಏ.23 ರಂದು ಚಾಲನೆ

Update: 2016-04-22 12:57 GMT

ಮಂಗಳೂರು,ಎ.22: ನಗರದ ಪುರಭವನದಲ್ಲಿ ಏ. 23 ರಂದು ಅಪರಾಹ್ನ 3 ಗಂಟೆಗೆ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಶಾಲೆ ಕಡೆ ನನ್ನ ನಡೆ ಶಿಕ್ಷಣ ನನ್ನ ಮೂಲಭೂತ ಹಕ್ಕು ಕಾರ್ಯಕ್ರಮಕ್ಕೆ ಉಸ್ತುವಾರಿ ಸಚಿವರು ಚಾಲನೆಯನ್ನು ನೀಡಲಿದ್ದಾರೆ. ಗ್ರಾಮ/ಪಟ್ಟಣ ಪಂಚಾಯತಿ ಮಟ್ಟದಲ್ಲಿ ಮತ್ತು ಗ್ರಾಮ ವಾರ್ಡ್‌ಗಳಲ್ಲಿ ಏ. 24 ರಂದು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಗುವುದು. ಈ ಮೂಲಕ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರಲು ಕ್ರಮವನ್ನು ಕೈಗೊಳ್ಳಲಾಗುವುದೆಂದು ಪ್ರಕಟಣೆ ತಿಳಿಸಿದೆ.

ಸರ್ವೋಚ್ಛ ನ್ಯಾಯಾಲಯವು 1993 ರಲ್ಲಿ ಎಲ್ಲಾ ಮಕ್ಕಳು ಉಚಿತ ಕಡ್ಡಾಯ ಮತ್ತು ಸಮಾನ ಗುಣಮಟ್ಟದ ಶಿಕ್ಷಣವನ್ನು ಪಡೆಯುವುದನ್ನು ಮೂಲಭೂತ ಹಕ್ಕಾಗಿ ಐತಿಹಾಸಿಕ ತೀರ್ಪು ನೀಡಿರುತ್ತದೆ. ಇದಕ್ಕಾಗಿ ಕೇಂದ್ರ ಸರ್ಕಾರವು 2009 ರಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ 2009 ನ್ನು ಜಾರಿಗೆ ತಂದಿದೆ. ಈ ಕಾಯ್ದೆಯು ಕಲಂ 03 ರಂತೆ 6 ರಿಂದ 14 ವರ್ಷದೊಳಗಿನ ಪ್ರತಿ ಮಗು ತನ್ನ ಸಮೀಪದ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರ್ತಿ ಮಾಡುವವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಪಡೆಯುವ ಹಕ್ಕನ್ನು ಹೊಂದಿದೆ. ಕಲಂ 31 ರನ್ವಯ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಇದರ ಮೇಲು ಉಸ್ತುವಾರಿಯನ್ನು ವಹಿಸಿರುವುದರಿಂದ ಶಾಲೆಗೆ ಹೋಗದ ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪುನಃ ಶಾಲೆಗೆ ಕರೆತರುವ ಶಾಲೆ ಕಡೆ ನನ್ನ ನಡೆ ಶಿಕ್ಷಣ ನನ್ನ ಮೂಲಭೂತ ಹಕ್ಕು ಎಂಬ ನೂತನ ಆಂದೋಲನವನ್ನು ರೂಪಿಸಿದೆ.

ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಮಟ್ಟದ ಜನಾಂದೋಲನ ಸಮಿತಿ, ತಾಲೂಕು ಮಟ್ಟದಲ್ಲಿ ತಾಲೂಕು ಜನಾಂದೋಲನ ಸಮಿತಿ, ಗ್ರಾಮ ಪಂಚಾಯತಿ ಮಟ್ಟದಲ್ಲಿ ಗ್ರಾಮ/ ಪಟ್ಟಣ ಜನಾಂದೋಲನ ಸಮಿತಿ ಹಾಗೂ ಗ್ರಾಮ ವಾರ್ಡ್‌ಗಳಲ್ಲಿ ಗ್ರಾಮ ವಾರ್ಡ್ ಜನಾಂದೋಲ ಸಮಿತಿಯನ್ನು ರಚಿಸಿದ್ದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಯವರ ಕಛೇರಿಯ ಸಭಾಂಗಣದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಕುರಿತು ಪೂರ್ವಭಾವಿ ಸಭೆಯನ್ನು ನಡೆಸಲಾಗಿರುತ್ತದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News