ತುಂಬೆಯಲ್ಲಿ ದಿನದಿಂದ ದಿನಕ್ಕೆ ಕುಸಿಯುತ್ತಿದೆ ನೀರಿನ ಮಟ್ಟ!

Update: 2016-04-23 09:33 GMT

ಮಂಗಳೂರು, ಎ. 23: ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್‌ಗಳಿಗೆ ನೀರು ಪೂರೈಕೆಯಾಗುತ್ತಿರುವ ತುಂಬೆ ವೆಂಟೆಡ್ ಡ್ಯಾಮ್‌ಗೆ ನೀರಿನ ಒಳ ಹರಿವು ಕ್ಷೀಣಿಸುತ್ತಿರುವ ಕಾರಣ, ದಿನದಿಂದ ದಿನಕ್ಕೆ ನೀರಿನ ಮಟ್ಟ ಕುಸಿಯುತ್ತಿದೆ. ಮುಂದಿನ ಐದಾರು ದಿನಗಳೊಳಗೆ ಮುಂಗಾರು ಪೂರ್ವ ಮಳೆಯಾಗದಿದ್ದಲ್ಲಿ ನಗರದ ಜನತೆ ಕುಡಿಯವ ನೀರಿನ ಗಂಭೀರ ಪರಿಸ್ಥಿತಿಯನ್ನು ಎದುರಿಸುವ ಲಕ್ಷಣಗಳು ಗೋಚರಿಸುತ್ತಿವೆ.
 

ಪ್ರಸ್ತುತ ಇರುವ 13 ಅಡಿ ಎತ್ತರದ ತುಂಬೆ ವೆಂಟೆಡ್ ಡ್ಯಾಂನಲ್ಲಿ ಎಪ್ರಿಲ್ 23ರಂದು ನೀರಿನ ಮಟ್ಟ 7.9 ಅಡಿಗಳಿಗೆ ತಲುಪಿದೆ. ಕಳೆದ ವರ್ಷ ಇದೇ ದಿನ ನೀರಿನ ಮಟ್ಟ 12.9 ಅಡಿಗಳಿತ್ತು. ಮಾತ್ರವಲ್ಲದೆ, ಕಳೆದ ವರ್ಷ ಎ. 23ರಂದು ಮಳೆಯಾದ ಕಾರಣ, ಮರುದಿನ ಅಂದರೆ ಎ. 24ರಿಂದ ಎ. 26ರವರೆಗೆ ನೀರಿನ ಮಟ್ಟ 13 ಅಡಿಗಳಿಗೆ ಏರಿಕೆಯಾಗಿ ನೀರು ತುಂಬಿ ಹರಿಯುತ್ತಿತ್ತು. ಆದರೆ ಈ ಬಾರಿ ಎಪ್ರಿಲ್ 22ರಂದು 8 ಅಡಿಯಿದ್ದ ನೀರಿನ ಮಟ್ಟ, ಇಂದು ಮಧ್ಯಾಹ್ನದ ವೇಳೆಗೆ 7.9 ಅಡಿಗೆ ತಲುಪಿದೆ. ಪ್ರಸ್ತುತ ಎರಡು ದಿನಗಳಿಗೊಮ್ಮೆ ನಗರದಲ್ಲಿ ನೀರು ಪೂರೈಕೆಯಾಗುತ್ತಿದ್ದು, ತುಂಬೆ ವೆಂಟೆಡ್ ಡ್ಯಾಮ್‌ನಿಂದ ಮೇಲೆ ಇರುವ ಎಎಂಆರ್ ಡ್ಯಾಮ್‌ನಲ್ಲಿ ನೀರಿನ ಮಟ್ಟ ಪ್ರಸ್ತುತ 12.9 ಮೀಟರ್ ಆಗಿದೆ. ಎಎಂಆರ್ ಡ್ಯಾಂನಿಂದ ತುಂಬೆ ಡ್ಯಾಂಗ್‌ಗೆ ಪ್ರತಿನಿತ್ಯ ಸ್ವಲ್ಪ ಸ್ವಲ್ಪವಾಗಿ ನೀರನ್ನು ಬಿಡುವ ಮೂಲಕ ಪ್ರಸ್ತುತ ಇರುವ ಒಟ್ಟು ನೀರಿನ ಪ್ರಮಾಣದಲ್ಲಿ ಎರಡು ದಿನಗಳಿಗೊಮ್ಮೆ ನೀರು ಪೂರೈಕೆಯಂತೆ ಮುಂದಿನ ಸುಮಾರು 20ರಿಂದ 23 ದಿನಗಳವರೆಗೆ ನಗರಕ್ಕೆ ನೀರು ಪೂರೈಕೆ ಮಾಡಬಹುದಾಗಿದೆ.

ಆದರೆ ಪ್ರತಿನಿತ್ಯ ನೀರಿನ ಒಳ ಹರಿವು ಕ್ಷೀಣಿಸುತ್ತಿರುವ ಜತೆಗೆ ಬಿಸಿಲ ತಾಪಮಾನಕ್ಕೆ ನೀರು ಆವಿಯಾಗುತ್ತಿರುವುದರಿಂದಲೂ ನೀರಿನ ಮಟ್ಟ ಮತ್ತಷ್ಟು ಕುಸಿಯಲಿದೆ. ತುಂಬೆ ಡ್ಯಾಂನಲ್ಲಿ ಸುಮಾರು 3 ಅಡಿವರೆಗೆ ಮಾತ್ರ ನೀರನ್ನು ಪಂಪ್ ಮಾಡಿ ಪೂರೈಕೆ ಮಾಡಲು ಸಾಧ್ಯವಾಗುತ್ತದೆ.

ದಿನವೊಂದಕ್ಕೆ ಒಂದು ಇಂಚಿನಂತೆ ನೀರು ಖಾಲಿಯಾಗುತ್ತಿರುವುದರಿಂದ ಮಳೆ ಬಾರದಿದ್ದಲ್ಲಿ ನಗರದಲ್ಲಿ ಈಗಾಗಲೇ ಬಿಗಡಾಯಿಸಿರುವ ಕುಡಿಯುವ ನೀರಿನ ಪರಿಸ್ಥಿತಿ ತಾರಕ್ಕೇರುವ ಸಂಭವ ಇದೆ.

ಪ್ರತಿ ವರ್ಷ ವಾಡಿಕೆಯಂತೆ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆಯಾಗುತ್ತದೆ. 2011ರಲ್ಲಿ ಎಪ್ರಿಲ್ 14ರಂದು ಉತ್ತಮ ಮಳೆಯಾಗಿದ್ದರೆ, 12ರಲ್ಲಿ ಎಪ್ರಿಲ್ 19ರಂದು ಉತ್ತಮ ಮಳೆಯಾಗಿತ್ತು. ಆದ ಕಾರಣ ಡ್ಯಾಮ್‌ನಲ್ಲಿ ಆ ಅವಧಿಯಲ್ಲಿ ಮಳೆ ನೀರಿನ ಮಟ್ಟ ಸುಮಾರು 12ರಿಂದ 13 ಅಡಿಗಳಿಷ್ಟಿತ್ತು. 2013ರಲ್ಲಿ ಎಪ್ರಿಲ್ ತಿಂಗಳಲ್ಲಿ ಮಳೆಯಾಗಿರಲಿಲ್ಲ. 2014ರಲ್ಲಿ ಎಪ್ರಿಲ್ 8ರಂದು ಮಳೆಯಾಗಿದ್ದರೆ, 2015ರಲ್ಲಿ ಎಪ್ರಿಲ್ 23ರಂದು ಉತ್ತಮ ಮಳೆಯಾಗುವ ಮೂಲಕ ನಗರದಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದರೂ ಪರಿಸ್ಥಿತಿ ಬಿಗಡಾಯಿಸಿರಲಿಲ್ಲ. ಆದರೆ ಪ್ರಸಕ್ತ ವಾತಾವರಣ ಹಾಗೂ ತುಂಬೆಯಲ್ಲಿ ನೀರಿನ ಮಟ್ಟವನ್ನು ವೀಕ್ಷಿಸುವಾಗ ನಗರದ ಜನತೆ ಕುಡಿಯುವ ನೀರಿಗಾಗಿ ಕೇವಲ ಮಳೆಗಾಗಿ ನಿರೀಕ್ಷಿಸುವುದು ಮಾತ್ರವೇ ಉಳಿದಿರುವ ಮಾರ್ಗ. 

ಇಂದು ಮೇಯರ್ ಹರಿನಾಥ್, ಉಪ ಮೇಯರ್ ಸುಮಿತ್ರ ಕರಿಯಾ ಸೇರಿದಂತೆ ಮನಪಾದ ಹಲವು ಹಿರಿಯ ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳು ತುಂಬೆ ವೆಂಟೆಡ್ ಡ್ಯಾಂಗೆ ಭೇಟಿ ನೀಡಿ ಅಲ್ಲಿನ ನೀರಿನ ಮಟ್ಟ ಹಾಗೂ ನೀರು ಪೂರೈಕೆಗೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚಿಸಿದರು.

ಕೈಗಾರಿಕೆಗಳಿಗೆ ಸುಮಾರು 18 ಎಂಜಿಡಿ ನೀರು ಪೂರೈಕೆ!

ಮಂಗಳೂರು ನಗರಕ್ಕೆ 160 ಎಂಎಲ್‌ಡಿ (ದಿನವೊಂದಕ್ಕೆ ಮಿಲಿಯನ್ ಲೀಟರ್ ) ನೀರು ಪೂರೈಕೆಯಾಗುತ್ತಿದೆ. ಎಂಜಿಡಿ (ಮಿಲಿಯನ್ ಗ್ಯಾಲನ್ಸ್) ಲೆಕ್ಕಾಚಾರದಲ್ಲಿ 160 ಎಂಎಲ್‌ಡಿ ಅಂದರೆ ಸುಮಾರು 35 ಎಂಜಿಡಿ. ಪ್ರಸ್ತುತ ತುಂಬೆ ವೆಂಟೆಡ್ ಡ್ಯಾಂನಿಂದ ಎಂಸಿಎಫ್‌ಗೆ 2 ಎಂಜಿಡಿ ಹಾಗೂ ಎನ್‌ಎಂಪಿಟಿಗೆ 0.5 ಎಂಜಿಡಿ ಹಾಗೂ ಇತರ ಕೈಗಾರಿಕೆಗಳಿಗೆ 1 ಎಂಜಿಡಿ ನೀರು ಪೂರೈಕೆಯಾಗುತ್ತಿದೆ.

ಎಎಂಆರ್ ಡ್ಯಾಂನಿಂದ ಎಂಆರ್‌ಪಿಎಲ್‌ಗೆ 6 ಎಂಜಿಡಿ ಹಾಗೂ ವಿಶೇಷ ಆರ್ಥಿಕ ವಲಯ (ಎಸ್‌ಇಝೆಡ್)ಕ್ಕೆ 8 ಎಂಜಿಡಿ ನೀರು ಪೂರೈಕೆಯಾಗುತ್ತಿದೆ. ಒಟ್ಟು ಸುಮಾರು 18 ಎಂಜಿಡಿಯಷ್ಟು ನೀರು ವಿವಿಧ ಕೈಗಾರಿಕೆಗಳಿಗೆ ತುಂಬೆ ಮತ್ತು ಎಎಂಆರ್ ಡ್ಯಾಂನಿಂದ ಪೂರೈಕೆಯಾಗುತ್ತಿದೆ. ನಗರದಲ್ಲಿ ಕುಡಿಯುವ ನೀರಿನ ಕೊರತೆ ಹಿನ್ನೆಲೆಯಲ್ಲಿ ಕೈಗಾರಿಕೆಗಳಿಗೆ ಪ್ರಸ್ತುತ ನೀರನ್ನು ಎರಡು ದಿನಗಳಿಗೊಮ್ಮೆ ಪೂರೈಕೆ ಮಾಡಲಾಗುತ್ತಿದೆ.

ನೀರಿನ ಕೊರತೆ ಉಂಟಾಗದಂತೆ ಕ್ರಮ: ಮೇಯರ್

ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಒಳಹರಿವು ಕ್ಷೀಣಿಸುತ್ತಿರುವುದರಿಂದ ನಗರದಲ್ಲಿ ಸಾರ್ವಜನಿಕರಿಗೆ ನೀರಿನ ಕೊರತೆ ಉಂಟಾಗದಂತೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜತೆಯಲ್ಲಿ ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಿಕೊಳ್ಳಬೇಕು ಎಂದು ಮೇಯರ್ ಹರಿನಾಥ್ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ತುಂಬೆ ವೆಂಟೆಡ್ ಡ್ಯಾಂನಲ್ಲಿ ಮನಪಾ ಸದಸ್ಯರು ಹಾಗೂ ಅಧಿಕಾರಿಗಳ ಜತೆ ನೀರಿನ ಮಟ್ಟ ವೀಕ್ಷಿಸಿ, ಅಧಿಕಾರಿಗಳಿಗೆ ನೀರು ಪೂರೈಕೆಯಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚಿಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

ನೀರು ಪೂರೈಕೆಯಾಗದ ಸ್ಥಳಗಳಿಗೆ ಟ್ಯಾಂಕರ್‌ಗಳಿಗೆ ನೀರು ಪೂರೈಸುವ ನಿಟ್ಟಿನಲ್ಲಿ ಈಗಾಗಲೇ 5 ಟ್ಯಾಂಕರ್‌ಗಳ ಮೂಲಕ ಕ್ರಮ ಕೈಗೊಳ್ಳಲಾಗುತ್ತಿದೆ. ಶಾಸಕ ಮೊಯ್ದಿನ್ ಬಾವಾ ಅವರು ಖುದ್ದಾಗಿ ತಮ್ಮ ಕ್ಷೇತ್ರದಲ್ಲಿ ಹೆಚ್ಚುವರಿ ಟ್ಯಾಂಕರ್ ವ್ಯವಸ್ಥೆಯನ್ನು ಮಾಡಿದ್ದಾರೆ. ಟ್ಯಾಂಕರ್‌ಗಳು ಹೋಗಲು ಸಾಧ್ಯವಿಲ್ಲದ ಎತ್ತರ ಹಾಗೂ ಕಿರಿದಾದ ಪ್ರದೇಶಗಳಿಗೆ ಪಿಕ್‌ಅಪ್ ವಾಹನಗಳಲ್ಲಿ ಸಣ್ಣ ಟ್ಯಾಂಕ್‌ಗಳ ಮೂಲಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು. ತುರ್ತು ಸಂದರ್ಭದಲ್ಲಿ ಖಾಸಗಿ ನೀರಿನ ಮೂಲಗಳನ್ನು ಮನಪಾ ಆಯುಕ್ತರು ಹಾಗೂ ಜಿಲ್ಲಾಧಿಕಾರಿ ಮೂಲಕ ಸ್ವಾಧೀನಪಡಿಸಿ ಕುಡಿಯುವ ನೀರಿನ ಅಗತ್ಯವಿರುವಲ್ಲಿ ಪೂರೈಕೆ ಮಾಡಲಾಗುವುದು. ಜನರು ಗಲಿಬಿಲಿಗೊಳ್ಳದೆ ಕುಡಿಯುವ ನೀರನ್ನು ಕೇವಲ ಕುಡಿಯುವುದಕ್ಕಾಗಿಯೇ ಮಿತವಾಗಿವಾಗಿ ಬಳಸುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದರು.

6 ಕಡೆ ಬೋರ್‌ವೆಲ್‌ಗಳು

ನಗರದಲ್ಲಿ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ವಾಮಂಜೂರು ಹಾಗೂ ಪಚ್ಚನಾಡಿ ಎರಡು ಕಡೆ ಬೋರ್‌ವೆಲ್‌ಗಳನ್ನು ಕೊರೆಯಿಸಲಾಗಿದ್ದು, ಉಳಿದಂತೆ ಇತರ ನಾಲ್ಕು ಕಡೆಗಳಲ್ಲಿ ಬೋರ್‌ವೆಲ್‌ಗಳನ್ನು ಒಂದೆರಡು ದಿನಗಳಲ್ಲಿ ಕೊರೆಯಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಲ್ಯಾನ್ಸಿ ಲೋಟ್ ಪಿಂಟೋ ತಿಳಿಸಿದರು.

ವಾರ್ಡ್‌ಗಳಿಗೆ ಟ್ಯಾಂಕರ್ ಮೂಲಕ ಉಚಿತ ನೀರು ಪೂರೈಕೆ

ವಾರ್ಡ್‌ಗಳಿಗೆ ಜನರಿಗೆ ಕುಡಿಯುವ ನೀರನ್ನು ಟ್ಯಾಂಕರ್‌ಗಳ ಮೂಲಕ ಉಚಿತವಾಗಿ ಪೂರೈಕೆ ಮಾಡಲಾಗುತ್ತದೆ. ಅಗತ್ಯವಿರುವಲ್ಲಿ ಸಂಬಂಧಪಟ್ಟ ದೂರವಾಣಿ ಸಂಖ್ಯೆಗೆ ಕರೆ ಮಾಡಿದ್ದಲ್ಲಿ ನೀರು ಪೂರೈಕೆ ಮಾಡಲಾಗುವುದು. ಜನರು ಯಾವುದೇ ಹಣವನ್ನು ತೆರಬೇಕಾಗಿಲ್ಲ ಎಂದು ಮೇಯರ್ ಹರಿನಾಥ್ ಸ್ಪಷ್ಟಪಡಿಸಿದರು.

ನೀರನ್ನು ಸಮರ್ಪಕವಾಗಿ ವಿತರಣೆ ಮಾಡುವ ನಿಟ್ಟಿನಲ್ಲಿ ಇಂಜಿನಿಯರ್ ಕಾರ್ಯವ್ಯಾಪ್ತಿಯನ್ನು ಮರು ಹಂಚಿಕೆ ಮಾಡಲಾಗಿದೆ. ಸಾರ್ವಜನಿಕರು ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ ಮತ್ತು ನೀರು ಪೋಲಾಗುತ್ತಿರುವುದು ಕಂಡಲ್ಲಿ ಕಾರ್ಯಪಾಲಕ ಇಂಜನಿಯರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅಥವಾ ಕಿರಿಯ ಇಂಜನಿಯರ್‌ರವರ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು. ಕಟ್ಟಡ ನಿರ್ಮಾಣಕ್ಕೆ ನೀರನ್ನು ಮನಪಾದಿಂದ ಕಡಿತಗೊಳಿಸಲಾಗುತ್ತಿದ್ದು, ಸಾರ್ವಜನಿಕರು ಕಟ್ಟಡ ನಿರ್ಮಾಣ ಹಾಗೂ ರಸ್ತೆಗೆ ಕುಡಿಯುವ ನೀರನ್ನು ಸಿಂಪಡಿಸಬಾರದು ಎಂದು ಮೇಯರ್ ಹರಿನಾಥ್ ಸೂಚನೆ ನೀಡಿದರು.

ತುಂಬೆಯಲ್ಲಿರುವ ಪ್ರಸ್ತುತ ನೀರಿನ ಮಟ್ಟದ ಪ್ರಕಾರ ಮುಂದಿನ 18 ದಿನಗಳಿಗೆ ನೀರು ಪೂರೈಕೆ ಮಾಡಬಹುದು. ಉಳಿದಂತೆ ಎಎಂಆರ್ ಡ್ಯಾಂನಿಂದ ನೀರು ಹಾಯಿಸುವ ಮೂಲಕ ಸೇರಿದಂತೆ ಮತ್ತೆ 5 ದಿನಗಳಿಗೆ ಅಂದರೆ ಒಟ್ಟು 22ರಿಂದ 23 ದಿನಗಳವರೆಗೆ ನೀರನ್ನು ಪೂರೈಕೆ ಮಾಡಬಹುದು ಎಂದು ಮೇಯರ್ ಹರಿನಾಥ್ ತಿಳಿಸಿದರು.

ಈ ಸಂದರ್ಭ ಉಪ ಮೇಯರ್ ಸುಮಿತ್ರಾ ಕರಿಯ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಲ್ಯಾನ್ಸಿ ಲೋಟ್ ಪಿಂಟೋ, ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಅಪ್ಪಿ, ಸದಸ್ಯರಾದ ಸುಧೀರ್ ಶೆಟ್ಟಿ, ವಿಜಯ ಕುಮಾರ್ ಶೆಟ್ಟಿ, ಮುಹಮ್ಮದ್, ಪ್ರೇಮಾನಂದ ಶೆಟ್ಟಿ, ಮನಪಾ ಆಯುಕ್ತ ಡಾ.ಎಚ್.ಎನ್. ಗೋಪಾಲಕೃಷ್ಣ, ಹಿರಿಯ ಅಧಿಕಾರಿಗಳಾದ ಲಿಂಗೇ ಗೌಡ ಹಾಗೂ ಇತರರು ಉಪಸ್ಥಿತರಿದ್ದರು.

ಜೂನ್‌ನಿಂದ ಹೊಸ ಡ್ಯಾಂ ಕಾರ್ಯಾಚರಣೆ

ಪ್ರಸ್ತುತ ನಿರ್ಮಾಣ ಹಂತದಲ್ಲಿರು ತುಂಬೆಯ 13 ಮೀಟರ್ ಎತ್ತರದ ನೂತನ ವೆಂಟೆಂಡ್ ಕಾಮಗಾರಿ ಪೂರ್ಣಗೊಂಡಿದ್ದಲ್ಲಿ ಈ ಬಾರಿ ಕುಡಿಯುವ ನೀರಿನ ಕೊರತೆ ನೀಗಿಸುವಲ್ಲಿ ಸ್ವಲ್ಪ ಮಟ್ಟಿನ ಸಹಕಾರ ಆಗುತ್ತಿತ್ತು. ಪ್ರಸ್ತುತ ಕಾಮಗಾರಿ ಕ್ಷಿಪ್ರಗತಿಯಲ್ಲಿ ನಡೆಯುತ್ತಿದ್ದು, ಮುಂದಿನ ಜೂನ್‌ನಲ್ಲಿ ನೂತನ ಡ್ಯಾಂ ಕಾರ್ಯಾಚರಣೆ ಮಾಡಲಿದೆ ಎಂದು ಮೇಯರ್ ಹರಿನಾಥ್ ವಿಶ್ವಾಸ ವ್ಯಕ್ತಪಡಿಸಿದರು.

ಎತ್ತಿನಹೊಳೆ ಯೋಜನೆಯಿಂದ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆಯಲ್ಲಾ? ಮಾತ್ರವಲ್ಲದೆ ಮನಪಾ ಸಾಮಾನ್ಯ ಸಭೆಯಲ್ಲಿ ಯೋಜನೆಯನ್ನು ವಿರೋಧಿಸಿ ನಿರ್ಣಯ ಕೈಗೊಳ್ಳಲಾಗಿದೆಯಲ್ಲಾ ಎಂಬ ಪ್ರಶ್ನೆಗೆ, ಆ ಬಗ್ಗೆ ಸದ್ಯ ನಾವೇನೂ ಹೇಳುವುದಿಲ್ಲ. ಆದರೆ ಕುಡಿಯುವ ನೀರಿನ ಸಮಸ್ಯೆ ಆ ಯೋಜನೆಯಿಂದ ಆಗುವುದು ಎಂದಾದಲ್ಲಿ ಹೋರಾಟಕ್ಕೆ ಸಿದ್ಧ ಎಂದು ಮೇಯರ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News