ಶಿಕ್ಷಣ ಸಂವಿಧಾನ ನೀಡಿರುವ ಮೂಲಭೂತ ಹಕ್ಕು-ಹಿರಿಯ ನ್ಯಾಯಾಧೀಶ ಸಿ.ಕೆ. ಬಸವರಾಜ್

Update: 2016-04-23 12:23 GMT

 ಪುತ್ತೂರು: ಸಂವಿಧಾನದ ಮೂಲಭೂತ ಹಕ್ಕುಗಳಲ್ಲಿ ಕಡ್ಡಾಯ ಶಿಕ್ಷಣವೂ ಒಳಗೊಂಡಿದೆ. ಈ ಹಕ್ಕು ಸಮರ್ಪಕವಾಗಿ ಬಳಕೆಯಾಗುವಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ಪುತ್ತೂರು ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಸಿ.ಕೆ. ಬಸವರಾಜ್ ಹೇಳಿದರು.

ಅವರು ಶನಿವಾರ ಅಪರಾಹ್ನ ಪುತ್ತೂರು ಪುರಭವನದಲ್ಲಿ ನಡೆದ ‘ಶಾಲೆ ಕಡೆ ನನ್ನ ನಡೆ’ ತಾಲೂಕು ಜನಾಂದೋಲನ ಸಮಿತಿಯನ್ನು ಉದ್ಘಾಟಿಸಿ ಮಾತನಾಡಿದರು. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಶಿಕ್ಷಣ ವಂಚಿತರ ಸಂಖ್ಯೆ ಕಡಿಮೆಯಿದೆ. ಆದರೆ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಶಾಲೆಯಿಂದ ಮಕ್ಕಳು ಹೊರಗುಳಿಯುತ್ತಿದ್ದಾರೆ. ಶಿಕ್ಷಣ ವಂಚಿತ ಮಕ್ಕಳನ್ನು ಮರು ಸೇರ್ಪಡೆಗೊಳಿಸುವಲ್ಲಿ ಎಲ್ಲರ ಸಹಕಾರ ಅಗತ್ಯ ಎಂದರು.

ನ್ಯಾಯಾಧೀಶರಾದ ಇಬ್ರಾಹಿಂ ಮುಜಾವರ್ ಮಾತನಾಡಿ ಪ್ರತಿಯೊಂದು ಮಗುವಿಗೂ ಶಿಕ್ಷಣ ನೀಡುವುದು ಸರ್ಕಾರದ ಮತ್ತು ಪೋಷಕರ ಕರ್ತವ್ಯವಾಗಿದೆ. ನಮ್ಮಲ್ಲಿ ಶಾಲೆಯೊಳಗಿರುವ ಮಕ್ಕಳು ಮತ್ತು ಶಾಲೆಯಿಂದ ಹೊರಗುಳಿದಿರುವ ಮಕ್ಕಳು ಎಂಬ ಎರಡು ವರ್ಗಗಳಿದ್ದು, ನಮ್ಮ ಮಕ್ಕಳು ಶಾಲೆಯೊಳಗಿದ್ದರೆ ನಮ್ಮ ಅಗತ್ಯತೆಯನ್ನು ಪೂರೈಸುವ ವರ್ಗದ ಮಕ್ಕಳು ಶಾಲೆಯಿಂದ ಹೊರಗುಳಿದು ಶಿಕ್ಷಣ ವಂಚಿತರಾಗುತ್ತಿದ್ದಾರೆ. ಅವರಿಗೆ ಶಿಕ್ಷಣ ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ಶಶಿಧರ್ ಮಾಹಿತಿ ನೀಡುತ್ತಾ ಪುತ್ತೂರು ತಾಲೂಕಿನಲ್ಲಿ 16 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು, ಈ ಪೈಕಿ 5 ಮಕ್ಕಳನ್ನು ಮರುಸೇರ್ಪಡೆಗೊಳಿಸಲಾಗಿದೆ. ಮಕ್ಕಳ ಅನಾರೋಗ್ಯ, ತಂದೆ ತಾಯಿಗಳ ಜಗಳ ಸಮಸ್ಯೆಗಳಿಂದ ಮಕ್ಕಳು ಶಾಲೆಯಿಂದ ಹೊರಗುಳಿಯುವಂತಾಗಿದೆ ಎಂದು ತಿಳಿಸಿದರು.

ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್ ಮಾತನಾಡಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾಂತಿ ಟಿ ಹೆಗಡೆ ಸ್ವಾಗತಿಸಿ ವಂದಿಸಿದರು. ಅಂಗನವಾಡಿ ಮೇಲ್ವಿಚಾರಕಿ ಭವಾನಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News