ಕುಂಬಳೆಯಲ್ಲಿ ಭಾಸ್ಕರ ಕುಂಬಳೆ ಹುತಾತ್ಮ ದಿನಾಚರಣೆ

Update: 2016-04-23 13:41 GMT

ಮಂಜೇಶ್ವರ 23-04-2016 ಶನಿವಾರ ಸುದ್ದಿ (01) : ದೇಶದ ಪ್ರಜಾಪ್ರಭುತ್ವ ಮತೇತರ ಮೌಲ್ಯಗಳಿಗೆ ಬೆದರಿಕೆಯಾಗಿರುವ ಬಿಜೆಪಿ ಪಕ್ಷ ದೇಶದಲ್ಲಿ ಭಯವನ್ನು ಹುಟ್ಟು ಹಾಕುತ್ತಿದೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ.ಪಿ. ಸತೀಶ್ಚಂದ್ರನ್ ಅಭಿಪ್ರಾಯಪಟ್ಟರು.
ಇವರು ಕುಂಬಳೆಯಲ್ಲಿ ಶುಕ್ರವಾರ ಸಂಜೆ ನಡೆದ ಭಾಸ್ಕರ ಕುಂಬಳೆ ಹುತಾತ್ಮ ದಇನಾಚರಣೆಯ ಅಂಗವಾಗಿ ಡಿವೈಎಫ್‌ಐ ಆಯೋಜಿಸಿದ್ದ ಯುವಜನ ರ್ಯಾಲಿಯನ್ನು ಉದ್ಘಾಟಿಸಿ ಮಾತನಾಡಿದರು.

ಎರಡು ವರ್ಷಗಳ ಮೋದಿ ಸರಕಾರದ ಸಾಧನೆ ಅಸಹಿಷ್ಣುತೆ ಹಾಗೂ ಅರಾಜಕತ್ವವನ್ನು ಉಂಟುಮಾಡಿದೆ. ಜನರಿಗೆ ಶಾಪವಾದ ರಾಜ್ಯದ ಯುಡಿಎಫ್ ಸರಕಾರವನ್ನು ಮತ್ತು ಬಿಜೆಪಿಯನ್ನು ಕಿತ್ತೊಗೆಯಲು ಮುಂದೆ ನಡೆಯಲಿರುವ ವಿಧಾನ ಸಭಾ ಚುನಾವಣೆಯಲ್ಲಿ ಜನರು ಒಂದಾಗಬೇಕೆಂದು ಅವರು ಕರೆ ನೀಡಿದರು.

ಕುಂಜತ್ತೂರು, ತೂಮಿನಾಡು, ಆರಿಕ್ಕಾಡಿ ಮುಂತಾದೆಡೆಗಳ ಮುಸ್ಲಿಂ ಲೀಗ್,ಬಿಜೆಪಿ, ಕಾರ್ಯಕರ್ತರು ಈ ಸಂದರ್ಭ ಡಿವೈಎಫ್‌ಗೆ ಸೇರ್ಪಡೆಗೊಂಡರು.ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಕೆ.ಮಣಿಕಂಠನ್ ನವಾಗತರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿ, ಕಾರ್ಯಕರ್ತರು ಜನ ಸಾಮಾನ್ಯರು ಮತ್ತು ಯುವ ಜನರನ್ನು  ವಂಚಿಸುವ ಬಿಜೆಪಿ ಮತ್ತು ಯುಡಿಎಫ್,ಮುಸ್ಲಿಂ ಲೀಗ್ ನಿಲುವನ್ನು ಪ್ರತಿಭಟಿಸಿ ಡಿವೈಎಫ್‌ಐ ಸೇರಿರುವುದು ಉತ್ತಮ ಬೆಳವಣಿಗೆಯೆಂದು ತಿಳಿಸಿದರು.
      
ಡಿವೈಎಫ್‌ಐ ಜಿಲ್ಲಾ ಅಧ್ಯಕ್ಷ ಶಿವಾಜಿ ವೆಳ್ಳಿಕೋತ್ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಕ್ಷೇತ್ರದ ಎಡರಂಗದ ಅಭ್ಯರ್ಥಿ ಸಿ.ಎಚ್.ಕುಂಞಂಬು,ಸಿಪಿಎಂ ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯ ವಿ.ಪಿ.ಪಿ ಮುಸ್ತಫಾ, ಕೆ.ಮಣಿಕಂಠನ್, ಸಿ.ಎ.ಸುಬೈರ್ ಉಪಸ್ಥಿತರಿದ್ದರು.  ಕಾರ್ಯಕ್ರಮದ ಆರಂಭದಲ್ಲಿ ಮಾವಿನಕಟ್ಟೆಯಿಂದ ರ್ಯಾಲಿ ಆರಂಭಗೊಂಡು ಕುಂಬಳೆ ಪೇಟೆಯಲ್ಲಿ ರ್ಯಾಲಿ ಸಮಾಪ್ತಿಗೊಂಡಿತು. ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News