ವೇಣೂರು: ವ್ಯಕ್ತಿಯ ಅನುಮಾನಾಸ್ಪದ ಸಾವು

Update: 2016-04-23 18:41 GMT

 ಬೆಳ್ತಂಗಡಿ, ಎ.23: ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ವೇಣೂರು ಸಮೀಪದ ಪೆರಾಡಿ ಕುಂಬೆಟ್ಟು ಎಂಬಲ್ಲಿ ನಡೆದಿದ್ದು, ಜಾಗದ ತಕರಾರಿಗೆ ಸಂಬಂಧಿಸಿ ನಡೆದಿರುವ ಕೊಲೆ ಎಂದು ಶಂಕೆ ವ್ಯಕ್ತಪಡಿಸಿ ಮೃತರ ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

 ಸ್ಥಳೀಯ ನಿವಾಸಿ ಸುಂದರ ಮೂಲ್ಯ (55) ಅನುಮಾನಾಸ್ಪದವಾಗಿ ಸಾವನ್ನಪ್ಪಿದ ವ್ಯಕ್ತಿ.

 ವೇಣೂರು ಠಾಣಾ ಪೊಲೀಸರಿಗೆ ದೂರು ನೀಡಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  ಸುಂದರ ಮೂಲ್ಯರ ಪತ್ನಿ ಮತ್ತು ಮಕ್ಕಳು ಶುಕ್ರವಾರ ತವರುಮನೆಗೆ ತೆರಳಿದ್ದ ಕಾರಣ ಮನೆಯಲ್ಲಿ ಸುಂದರ ಒಬ್ಬರೇ ಇದ್ದರು. ರಾತ್ರಿಯ ವೇಳೆ ಸುಂದರ ಮೂಲ್ಯರ ಅಣ್ಣ ಅಣ್ಣು ಮೂಲ್ಯ ಎಂಬವರ ಮಕ್ಕಳು ದೂರ ವಾಣಿ ಕರೆ ಮಾಡಿ ಸುಂದರ ಮೂಲ್ಯ ಅವರು ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ಸ್ಥಳೀಯರಿಗೆ ಹಾಗೂ ಅವರ ಪತ್ನಿಗೆ ಮಾಹಿತಿ ನೀಡಿದ್ದರು. ಆದರೆ ಪತ್ನಿ ಹಾಗೂ ಇತರ ಸಂಬಂಧಿಕರು ಬಂದು ನೋಡಿದಾಗ ಸಾವಿನ ಬಗ್ಗೆ ಸಂಶಯ ಮೂಡಿದೆ. ಮೃತದೇಹದ ಕಿವಿ ಯಲ್ಲಿ ಹಾಗೂ ಮೈಮೇಲೆ ರಕ್ತದ ಕಲೆ ಇರುವುದನ್ನು ಗಮನಿಸಿದ ಸ್ಥಳೀಯರು ಇದು ಆಕಸ್ಮಿಕ ಸಾವಲ್ಲ, ಕೊಲೆ ಪ್ರಕರಣ ಎಂದು ನಿರ್ಧರಿಸಿದ್ದು, ತಡ ರಾತ್ರಿ ವೇಣೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

 ಸ್ಥಳಕ್ಕಾಗಮಿಸಿದ ವೇಣೂರು ಪೊಲೀಸರು ಪರಿಶೀಲನೆ ನಡೆಸಿದಾಗ ಇದೊಂದು ಕೊಲೆ ಪ್ರಕರಣ ಎಂಬುದು ಖಚಿತವಾಗಿದೆ. ಮೃತರ ಪತ್ನಿ ಸುಜಾತ ನೀಡಿರುವ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ಪೊಲೀಸರು ತನಿಖೆ ಮುಂದುವರಿಸುತ್ತಿದ್ದಾರೆ.

 ಸುಂದರ ಮೂಲ್ಯ ಹಾಗೂ ಅವರ ಅಣ್ಣಂದಿರ ನಡುವೆ ಬಹಳ ಹಿಂದಿ ನಿಂದಲೂ ಜಾಗದ ವಿಚಾರಕ್ಕೆ ಸಂಬಂ ಧಿಸಿದಂತೆ ವಿವಾದವಿತ್ತು ಎನ್ನಲಾಗಿದೆ. ಇದೇ ವಿವಾದಕ್ಕೆ ಸಂಬಂಧಿಸಿದಂತೆ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದ್ದು, ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸುಂದರ ಮೂಲ್ಯರು ಬಿದ್ದು ಮೃತಪಟ್ಟಿರುವುದಾಗಿ ಮೊದಲು ಮಾಹಿತಿ ನೀಡಿದ್ದ ಅವರ ಅಣ್ಣನ ಮಕ್ಕಳಾದ ದಯಾನಂದ ಹಾಗೂ ಸತೀಶ ಎಂಬವರಿಬ್ಬರೂ ಪೊಲೀಸರು ಬರುವ ವೇಳೆ ನಾಪತ್ತೆಯಾಗಿದ್ದು, ಅವರೇ ಕೊಲೆ ಪ್ರಕರಣದ ಹಿಂದಿರಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News