ಶಾಲೆ ಕಡೆ ನನ್ನ ನಡೆ: ದ.ಕ. ಜಿಲ್ಲಾಮಟ್ಟದ ಜನಾಂದೋಲನಕ್ಕೆ ಚಾಲನೆ

Update: 2016-04-23 18:48 GMT

ಮಂಗಳೂರು, ಎ.23: ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತರುವ 'ಶಾಲೆ ಕಡೆ ನನ್ನ ನಡೆ' ರಾಜ್ಯವ್ಯಾಪಿ ಜನಾಂದೋಲದ ಅಂಗವಾಗಿ ದ.ಕ. ಜಿಲ್ಲಾ ಮಟ್ಟದ ಆಂದೋಲನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಚೆಂಡೆ ಬಾರಿಸುವ ಮೂಲಕ ಚಾಲನೆ ನೀಡಿದರು. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸಹಯೋಗ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ 'ಶಾಲೆ ಕಡೆ ನನ್ನ ನಡೆ' ಕಾರ್ಯಕ್ರಮದ ಜೊತೆಯಲ್ಲೇ ಬೆಂಗಳೂರು ಬಾಲಭವನ ಸೊಸೈಟಿ, ದ.ಕ. ಜಿಲ್ಲಾ ಬಾಲಭವನ ಸಮಿತಿಯ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆ ಗಳ ಸಹಭಾಗಿತ್ವದಲ್ಲಿ ಎ.11ರಿಂದ ಇಂದಿನವರೆಗೆ ನಡೆದ ಮಕ್ಕಳ ಬೇಸಿಗೆ ಶಿಬಿರ 'ರಂಗಧ್ವನಿ' ಸಮಾರೋಪ ಕೂಡಾ ನಡೆಯಿತು. 
ಕಾರ್ಯಕ್ರಮದಲ್ಲಿ 'ಶಾಲೆ ಕಡೆ ನನ್ನ ನಡೆ' ಹಾಗೂ 'ಬಾಲ್ಯವಿವಾಹ ನಿಷೇಧ' ಕುರಿತಾದ ಕರಪತ್ರಗಳನ್ನು ಅನಾವರಣಗೊಳಿಸಲಾಯಿತು. ಈ ಸಂದರ್ಭ ಮಾತನಾಡಿದ ಸಚಿವ ಬಿ.ರಮಾನಾಥ ರೈ, ಅಕ್ಷರ ಜ್ಞಾನದಿಂದ ಮಾತ್ರ ಶೋಷಣೆ ಮುಕ್ತ ಸಮಾಜ ನಿರ್ಮಾಣವಾಗಲಿದೆ. ಶಿಕ್ಷಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಈಗಾಗಲೇ ಮರಳಿ ಬಾ ಶಾಲೆಗೆ, ಸಮುದಾಯದತ್ತ ಶಾಲೆ, ಸರ್ವಶಿಕ್ಷ ಅಭಿಯಾನ ಹಾಗೂ ಇದೀಗ ಶಾಲೆ ಕಡೆ ನನ್ನ ನಡೆಯ ಮೂಲಕ ಮಕ್ಕಳನ್ನು ಶಾಲೆಗೆ ಕರೆತರುವ ಕಾರ್ಯ ನಡೆಯುತ್ತಿರುವುದು ಶಿಕ್ಷಣ ವಂಚಿತ ಮಕ್ಕಳಿಗೊಂದು ಉತ್ತಮ ಅವಕಾಶ ಎಂದವರು ಹೇಳಿದರು. ಶಾಸಕ ಮೊಯ್ದಿನ್ ಬಾವ ಮಾತನಾಡಿದರು.
ವೇದಿಕೆಯಲ್ಲಿ ಮುಡಾ ಅಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಜಿಪಂ ಸಿಇಒ ಪಿ.ಐ.ಶ್ರೀವಿದ್ಯಾ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗಣೇಶ್, ಮಂಗಳೂರು ರೋಟರಿ ಕ್ಲಬ್ನ ಯತೀಶ್ ಬೈಕಂಪಾಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮಕೃಷ್ಣ ರಾವ್, ಡಿಡಿಪಿಐ ವಾಲ್ಟರ್ ಡಿಮೆಲ್ಲೊ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಉಸ್ಮಾನ್, ಪಡಿ ಸಂಸ್ಥೆಯ ನಿರ್ದೇಶಕ ರೆನ್ನಿ ಡಿಸೋಜ ಉಪಸ್ಥಿತರಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ ಸ್ವಾಗತಿಸಿದರು.
ಕಾರ್ಯಕ್ರಮಕ್ಕೆ ಮೊದಲು ರಂಗಧ್ವನಿ ಶಿಬಿರದಲ್ಲಿ ಭಾಗವಹಿಸಿದ್ದ ಮಕ್ಕಳು ಶಿಕ್ಷಣದ ಮಹತ್ವವನ್ನು ಸಾರುವ ಫಲಕಗಳನ್ನು ಹಿಡಿದು ಪುರಭವನದ ಸುತ್ತ ಮೆರವಣಿಗೆ ನಡೆಸಿದರು. ಬಳಿಕ ಪುರಭವನದಲ್ಲಿ ಆಶಯ ಗೀತೆ ಹಾಡಿ ಗಮನಸೆಳೆದರು. ಸಭಾ ಕಾರ್ಯಕ್ರಮದಲ್ಲಿ ರಂಗಧ್ವನಿ ಮಕ್ಕಳ ಬೇಸಿಗೆ ಶಿಬಿರವನ್ನು ನಿರ್ವಹಿಸಿದ ರಂಗ ನಿರ್ದೇಶಕರಾದ ಮುರಹರಿ, ವೌನೇಶ್ ವಿಶ್ವಕರ್ಮ, ಜಗನ್ ಪವಾರ್ ಹಾಗೂ ವಿದ್ದು ಉಚ್ಚಿಲ್‌ರನ್ನು ಅಭಿನಂದಿಸಲಾಯಿತು. ಬಳಿಕ ಬೇಸಿಗೆ ಮಕ್ಕಳಿಂದ ನಾಲ್ಕು ಕಿರು ನಾಟಕಗಳು ಪ್ರದರ್ಶನಗೊಂಡವು. 

ಶಾಲೆಯಿಂದ ಹೊರಗುಳಿದ ಎಲ್ಲ ಮಕ್ಕಳಿಗೆ ಶಿಕ್ಷಣ: ಕೃಪಾ ಆಳ್ವ 
ಮುಂದಿನ 3 ವರ್ಷಗಳೊಳಗೆ ರಾಜ್ಯದಲ್ಲಿ ಯಾವುದೇ ಮಗು ಶಾಲೆಯಿಂದ ಹೊರಗುಳಿಯುವುದು, ಅರ್ಧದಿಂದ ಶಾಲೆ ಬಿಡುವುದನ್ನು ತಪ್ಪಿಸಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ಕನಸು ತನ್ನದಾಗಿದ್ದು, ಅದನ್ನು ಈಡೇರಿಸುವ ಭರವಸೆ ಇದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಡಾ.ಕೃಪಾ ಅಮರ್ ಆಳ್ವ ಹೇಳಿದರು. ಇದೀಗ ಆಯೋಗದಿಂದ ಶಾಲೆ ಕಡೆ ನನ್ನ ನಡೆ ಆಂದೋಲನವನ್ನು ರಾಜ್ಯದ 30 ಜಿಲ್ಲೆಗಳಲ್ಲಿ ಆರಂಭಿ ಸುವ ಮೂಲಕ ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಶಾಲೆಗೆ ಆಕರ್ಷಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಅಂಗನವಾಡಿ ಪರಿಕಲ್ಪನೆ ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದರಿಂದ ದ.ಕ. ಜಿಲ್ಲೆಯಲ್ಲಿ ನಿರ್ಮಾಣವಾಗುವ ಅಂಗನವಾಡಿ ಕೇಂದ್ರಗಳಿಗೆ ತನ್ನ ಶಾಸಕ ನಿಧಿಯಿಂದ ತಲಾ 1 ಲಕ್ಷ ರೂ. ನೀಡುತ್ತೇನೆ.
-ರಮಾನಾಥ ರೈ, ಸಚಿವರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News