ತಿದ್ದುಪಡಿಯೊಂದಿಗೆ ವ್ಯಾಪಾರ ಪರವಾನಿಗೆ ಶುಲ್ಕ ಜಾರಿ: ಉಡುಪಿ ನಗರಸಭೆ ಸಾಮಾನ್ಯಸಭೆಯಲ್ಲಿ ನಿರ್ಣಯ

Update: 2016-04-23 18:52 GMT

ಉಡುಪಿ, ಎ.23: ಉಡುಪಿ ನಗರಸಭೆ ಪರಿಷ್ಕರಿಸಲು ಉದ್ದೇಶಿಸಿರುವ ವ್ಯಾಪಾರ ಪರವಾನಿಗೆ ಶುಲ್ಕದ ಬಗ್ಗೆ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೆಲವು ತಿದ್ದುಪಡಿಯೊಂದಿಗೆ ಜಾರಿಗೊಳಿಸಲು ಇಂದು ನಡೆದ ಸಾಮಾನ್ಯಸಭೆಯಲ್ಲಿ ನಿರ್ಣಯಿಸಲಾಯಿತು.

ಎರಡನೆ ಅವಧಿಗೆ ನೂತನ ಅಧ್ಯಕ್ಷ ರಾಗಿ ಆಯ್ಕೆಯಾದ ಮೀನಾಕ್ಷಿ ಮಾಧವ ಬನ್ನಂಜೆ ಅಧ್ಯಕ್ಷತೆಯಲ್ಲಿ ನಡೆದ ಪ್ರಥಮ ಸಾಮಾನ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ನಿಕಟಪೂರ್ವ ಉಪಾಧ್ಯಕ್ಷೆ ಅಮೃತಾ ಕೃಷ್ಣಮೂರ್ತಿ, ವ್ಯಾಪಾರ ಪರವಾನಿಗೆ ಶುಲ್ಕ ಏರಿಕೆಗೆ ಆಕ್ಷೇಪಿಸಿ ದರು. ಇದು ವ್ಯಾಪಾರಸ್ಥರಲ್ಲಿ ತೀರಾ ಗೊಂದಲಕ್ಕೆ ಕಾರಣವಾಗಿದ್ದು, ಏಕಾಏಕಿ ಇಷ್ಟು ಪ್ರಮಾಣದಲ್ಲಿ ಶುಲ್ಕ ಏರಿಕೆ ಮಾಡಿರುವುದು ಸರಿಯಲ್ಲ ಎಂದರು.

ಇದಕ್ಕೆ ಉತ್ತರಿಸಿದ ಪೌರಾಯುಕ್ತ ಡಿ.ಮಂಜುನಾಥಯ್ಯ, 27 ವರ್ಷಗಳ ನಂತರ ಮೊದಲ ಬಾರಿಗೆ ವ್ಯಾಪಾರ ಪರವಾನಿಗೆ ಶುಲ್ಕವನ್ನು ಏರಿಸಲಾಗುತ್ತಿದೆ. ಇದು ಯಾರಿಗೂ ಹೊರೆಯಾಗುವುದಿಲ್ಲ. ಕುಂದಾಪುರ, ಕಾರ್ಕಳ, ಸಾಲಿ ಗ್ರಾಮ ಪಟ್ಟಣ ಪಂಚಾಯತ್‌ಗಳಲ್ಲಿ ಈಗಾ ಗಲೇ ಈ ಶುಲ್ಕವನ್ನು ಏರಿಕೆ ಮಾಡ ಲಾಗಿದೆ. ಜಿಲ್ಲಾ ಕೇಂದ್ರದಲ್ಲಿರುವ ಉಡುಪಿಯಲ್ಲೂ ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು. ಜಿಲ್ಲಾಡಳಿತ ಈ ಸಂಬಂಧ ಆನ್‌ಲೈನ್ ಮೂಲಕ ನೂತನ ತಂತ್ರಾಶ ಅಳವಡಿಸಲು ಉದ್ದೇಶಿಸಲಾಗಿದ್ದು, ಈ ನಿಟ್ಟಿನಲ್ಲಿ ಎಲ್ಲ ಸ್ಥಳೀಯಾಡಳಿತಗಳಲ್ಲಿ ಒಂದೇ ರೀತಿ ಶುಲ್ಕ ಇರಬೇಕಾಗಿರುವುದು ಅಗತ್ಯವಾಗಿದೆ.

ಈಗಾಗಲೇ ಇದಕ್ಕೆ ರಾಜ್ಯ ಸರಕಾರ ಅನುಮೋದನೆ ನೀಡಿದ್ದು, ಗೆಜೆಟ್ ನೋಟಿಫಿಕೇಶನ್ ಆಗಿದೆ ಎಂದರು. ಗೆಜೆಟ್ ನೋಟಿಫಿಕೇಶನ್‌ನ್ನು ಕೇವಲ ನಗರಸಭೆಯ ನೋಟಿಸ್ ಬೋರ್ಡ್‌ನಲ್ಲಿ ಹಾಕಿದರೆ ಸಾಲದು, ಪತ್ರಿಕಾ ಹೇಳಿಕೆಯ ಮೂಲಕ ಜನತೆಗೆ ಮಾಹಿತಿ ನೀಡಬೇಕು ಎಂದು ನವೀನ್ ಭಂಡಾರಿ ಒತ್ತಾಯಿಸಿದರು.
ಶುಲ್ಕ ಏರಿಕೆಗೆ ವಿಪಕ್ಷ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಅದನ್ನು ಕೈ ಬಿಡುವಂತೆ ಒತ್ತಾಯಿಸಿದರು. ಯಾವುದೇ ಕಾರಣಕ್ಕೂ ಇದನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಇದರ ವಿರುದ್ಧ ಹೈಕೋರ್ಟ್‌ಗೆ ಹೋದರೂ ನಾವು ಉತ್ತರ ಕೊಡುತ್ತೇವೆ ಎಂದು ಪೌರಾಯುಕ್ತರು ತಿಳಿಸಿದರು.

ಅಧ್ಯಕ್ಷೆ ಮೀನಾಕ್ಷಿ ಮಾತನಾಡಿ, 2013ರಲ್ಲಿ ನಗರಸಭೆಯ ಆಡಳಿತಾಧಿಕಾರಿ ಯಾಗಿದ್ದ ಆಗಿನ ಜಿಲ್ಲಾಧಿಕಾರಿ ಡಾ.ರೇಜು ಈ ಪರಿಷ್ಕರಣೆಯನ್ನು ಮಾಡಿದ್ದು, ಎಲ್ಲ ಕಡೆಗಳಲ್ಲಿ ಈಗಾಗಲೇ ಶುಲ್ಕ ಏರಿಕೆ ಮಾಡಲಾಗಿದೆ. ಆದು ದರಿಂದ ಎಲ್ಲ ಸದಸ್ಯರು ಇದಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಇದರಲ್ಲಿರುವ ಕೆಲವೊಂದು ಅಂಶ ಗಳನ್ನು ಕೈಬಿಟ್ಟು ತಿದ್ದುಪಡಿಯೊಂದಿಗೆ ಪರಿಷ್ಕರಣೆ ಮಾಡಬೇಕು ಎಂದು ಮಾಜಿ ಅಧ್ಯಕ್ಷ ಯುವರಾಜ್ ತಿಳಿಸಿದರು. ಅದಕ್ಕೆ ಅಧ್ಯಕ್ಷರು ಹಾಗೂ ಪೌರಾಯುಕ್ತರು ಒಪ್ಪಿಗೆ ಸೂಚಿಸಿದರು. ತಿದ್ದುಪಡಿ ಬಳಿಕ ಮತ್ತೆ ಸದನದಲ್ಲಿ ಇದನ್ನು ಮಂಡಿಸಬೇಕೆಂಬ ವಿಪಕ್ಷ ಸದಸ್ಯರ ಬೇಡಿಕೆಯನ್ನು ಪೌರಾಯುಕ್ತರು ನಿರಾಕರಿಸಿದರು. ಕಸ ವಿಲೇವಾರಿಗೆ ಹೊಸ ಕ್ರಮ: ಉಡುಪಿ ಎಂಜಿಎಂ ಕಾಲೇಜಿನ ಬಳಿ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದು, ಇದರ ವಿರುದ್ಧ ಸೂಕ್ತ ಕ್ರಮ ಜರಗಿಸಬೇಕು ಎಂದು ಸದಸ್ಯೆ ಲತಾ ಆನಂದ ಶೇರಿಗಾರ್ ಸಭೆಯಲ್ಲಿ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನಗರಸಭೆ ಪರಿಸರ ಇಂಜಿನಿಯರ್, ಕಸ ವಿಲೇವಾರಿ ಕುರಿತು ಜಾರಿಗೆ ತರಲು ಉದ್ದೇಶಿಸಿರುವ ಹೊಸ ನಿಯಮದ ಕುರಿತು ಸಭೆಗೆ ಮಾಹಿತಿ ನೀಡಿದರು.

ಈಗಾಗಲೇ ಪ್ರತಿ ವಾರ್ಡ್‌ಗಳಲ್ಲಿರುವ ಮನೆ, ಅಂಗಡಿ, ಫ್ಲಾಟ್‌ಗಳ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ. ನಗರದಲ್ಲಿ ಒಟ್ಟು 394 ವಸತಿ ಸಮುಚ್ಚಯಗಳಿದ್ದು ಅದರಲ್ಲಿ 8,500 ಫ್ಲಾಟ್‌ಗಳಿವೆ. 590 ವಾಣಿಜ್ಯ ಕಟ್ಟಡ ಹಾಗೂ ಹೋಟೆಲ್‌ಗಳು, 6,500 ಸಣ್ಣ ಅಂಗಡಿಗಳು, 20,900 ಮನೆಗಳಿವೆ. ಈ ಬಗ್ಗೆ ಡಾಟಾ ಸಂಗ್ರಹಿಸಲಾಗಿದೆ. ಈ ಹೊಸ ಯೋಜನೆಯನ್ನು ಈಗಾ ಗಲೇ ಐದು ವಾರ್ಡ್‌ಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಇಲ್ಲಿನ 60 ವಸತಿ ಸಮುಚ್ಚಯಗಳಲ್ಲಿ ಸುಮಾರು 50 ಫ್ಲಾಟ್‌ಗಳಲ್ಲಿ ಮೂರು ಪ್ರತ್ಯೇಕ ಕಸದ ತೊಟ್ಟಿಗಳನ್ನು ಇರಿಸ ಲಾಗಿದೆ. ಇಲ್ಲಿಂದ ನಮ್ಮ ವಾಹನದಲ್ಲಿ ಕಸ ಸಂಗ್ರಹಿಸುವ ಕಾರ್ಯ ಮಾಡಲಾಗುತ್ತದೆ. ಇದಕ್ಕೆ ಇನ್ನೂ ಹೆಚ್ಚಿನ ನೌಕರರು ಹಾಗೂ 52 ವಾಹನಗಳು ಅಗತ್ಯವಾಗಿ ಬೇಕಾಗಿದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಸಂಧ್ಯಾ ಕುಮಾರಿ ಉಪಸ್ಥಿತರಿದ್ದರು.


ನೀರಿನ ಸಮಸ್ಯೆ ಬಗೆಹರಿಸಿ
ಬಿಸಿಲ ತಾಪದಿಂದ ಬಜೆ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಅದೇ ರೀತಿ ಸ್ವರ್ಣ ನದಿಯಲ್ಲಿ ಸಾಕಷ್ಟು ಹೂಳು ತುಂಬಿದೆ. ಆದ್ದರಿಂದ ನೀರಿನ ಕೊರತೆ ತಪ್ಪಿಸಲು ಈಗಾಗಲೇ ವ್ಯವಸ್ಥೆ ಮಾಡಬೇಕಾಗಿದೆ. ನಗರದಲ್ಲಿರುವ ಸರಕಾರಿ ಬಾವಿಗಳನ್ನು ಗುರುತಿಸಿ ನೀರಿನ ವ್ಯವಸ್ಥೆ ಮಾಡಬೇಕಾಗಿದೆ ಎಂದು ಯುವರಾಜ್ ಹೇಳಿದರು. ಕೆಲವು ತಗ್ಗು ಪ್ರದೇಶದ ಜನತೆ ನೀರನ್ನು ಗಿಡ, ಕಾಮಗಾರಿಗಳಿಗೆ ಬಳಸುತ್ತಿದ್ದಾರೆ. ಅಂತಹವರ ವಿರುದ್ಧ ಸೂಕ್ತ ಕ್ರಮ ಜರಗಿಸಬೇಕು ಎಂದು ಜನಾರ್ದನ ಭಂಡಾರ್ಕರ್ ಒತ್ತಾಯಿಸಿದರು. ಮುಂದಿನ ದಿನಗಳಲ್ಲಿ ಹೊಸದಾಗಿ ನಿರ್ಮಾಣವಾಗುವ ಕಟ್ಟಡಗಳಲ್ಲಿ ಮಳೆ ನೀರಿನ ಕೊಯ್ಲು ಕಡ್ಡಾಯ ಮಾಡಬೇಕು ಎಂದು ಶ್ಯಾಮ್‌ಪ್ರಸಾದ್ ಕುಡ್ವ ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News