ಧರ್ಮಸ್ಥಳದಲ್ಲಿ 500 ಕೊಠಡಿಗಳಿರುವ ಸಹ್ಯಾದ್ರಿ ವಸತಿ ಗೃಹ ಉದ್ಘಾಟನೆ

Update: 2016-04-24 10:43 GMT

ಧರ್ಮಸ್ಥಳ,ಎ24: ಧರ್ಮಸ್ಥಳದಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಹೊಸದಾಗಿ ನಿರ್ಮಿಸಿರುವ 500 ಕೊಠಡಿಗಳು ಇರುವ ಸಹ್ಯಾದ್ರಿ ವಸತಿ ಗೃಹವನ್ನು ಶೃಂಗೇರಿ ಶಾರದಾ ಪೀಠದ ಭಾರತೀತೀರ್ಥ ಸ್ವಾಮೀಜಿ ಆದಿತ್ಯವಾರ ಉದ್ಘಾಟಿಸಿ ಮಾತನಾಡಿದರು. ವಿಧುಶೇಖರ ಭಾರತೀ ಸ್ವಾಮೀಜಿ, ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ವಸತಿ ಸಚಿವ ಅಂಬರೀಶ್, ಸುಮಲತಾ ಅಂಬರೀಶ್, ಡಿ. ಸುರೇಂದ್ರ ಕುಮಾರ್ ಮತ್ತು ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.

ಧರ್ಮದ ರಕ್ಷಣೆ ಮತ್ತು ಅನುಷ್ಠಾನ ನಮ್ಮ ಜೀವನದ ಪರಮ ಗುರಿಯಾಗಬೇಕು. ದುಷ್ಟರ ನಿಗ್ರಹಕ್ಕಾಗಿ ಮತ್ತು ಸಜ್ಜನರ ರಕ್ಷಣೆಗಾಗಿ ಪರಮಾತ್ಮನೆ ಆಗಾಗ ಅವತರಿಸುತ್ತಾನೆ. ದುರ್ಲಭವಾದ ಮನುಷ್ಯ ಜನ್ಮದಲ್ಲಿ ಧರ್ಮಾಚರಣೆ ಮಾಡಿ ಜೀವನ ಪಾವನ ಮಾಡಬೇಕು ಎಂದು ಶೃಂಗೇರಿ ಶಾರದಾ ಪೀಠದ ಭಾರತೀತೀರ್ಥ ಸ್ವಾಮೀಜಿ ಹೇಳಿದರು.

ಧರ್ಮಸ್ಥಳದಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಹೊಸದಾಗಿ ನಿರ್ಮಿಸಿರುವ 500 ಕೊಠಡಿಗಳು ಇರುವ ಸಹ್ಯಾದ್ರಿ ವಸತಿ ಗೃಹವನ್ನು ಆದಿತ್ಯವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸತ್ಪುರುಷರಿಗೆ ಹಿಂಸೆ ಕೊಡುವವರೆಲ್ಲ ರಾಕ್ಷಸರು. ಭಗವಂತನ ನಾಮ ಸ್ಮರಣೆ ಶ್ರೇಷ್ಠವಾದ ಧರ್ಮವಾಗಿದೆ. ಮೃದು ಮಾತು, ಪರೋಪಕಾರ, ಅಹಿಂಸೆ ಇತ್ಯಾದಿಗಳ ಮೂಲಕ ಇತರರಿಗೆ ಸಂತೋಷವನ್ನುಂಟುಮಾಡುವುದೆ ಧರ್ಮವಾಗಿದೆ. ಪ್ರತಿಯೊಬ್ಬರೂ ಧರ್ಮಾಚರಣೆ ಮಾಡಿ ಧನ್ಯತೆ ಹೊಂದಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.

ವಿಧುಶೇಖರ ಭಾರತೀ ಸ್ವಾಮೀಜಿ ಮಾತನಾಡಿ, ಪವಿತ್ರವಾದ ಸನಾತನ ಧರ್ಮದ ಅನುಷ್ಠಾನದಿಂದ ಜೀವನ ಪವಿತ್ರವಾಗುತ್ತದೆ. ಸರ್ವಜ್ಞ ಹಾಗೂ ಸರ್ವಶಕ್ತನಾದ ಭಗವಂತನು ಸದಾ ಭಕ್ತರ ಪರವಾಗಿದ್ದು, ಶ್ರದ್ಧಾ-ಭಕ್ತಿಯಿಂದ ಆತನ ಆರಾಧನೆ ಮಾಡಿದರೆ ನಾವು ದೇವರ ಅನುಗ್ರಹಕ್ಕೆ ಪಾತ್ರರಾಗುತ್ತೇವೆ ಎಂದು ಅವರು ಹೇಳಿದರು.

ವಸತಿ ಸಚಿವ ಅಂಬರೀಶ್ ಮಾತನಾಡಿ ಸತ್ಯ ಮತ್ತು ಧರ್ಮಕ್ಕೆ ಯಾವಾಗಲೂ ಜಯ ಸಿಗುತ್ತದೆ. ಧರ್ಮಸ್ಥಳ ಅತ್ಯಂತ ಪವಿತ್ರ ಕ್ಷೇತ್ರವಾಗಿದ್ದು ಭಕ್ತರು ಇಲ್ಲಿ ಬಂದು ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆಯುತ್ತಾರೆ. ಧರ್ಮಸ್ಥಳದ ಅನ್ನದಾನ ಪರಂಪರೆ ವಿಶ್ವವಿಖ್ಯಾತವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ಕೆ. ವಸಂತ ಬಂಗೇರ ಶುಭಾಶಂಸನೆ ಮಾಡಿದರು.

ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಭಕ್ತರು ಸ್ವಚ್ಛತೆ ಕಾಪಾಡಿ ಕ್ಷೇತ್ರದ ಪಾವಿತ್ರ್ಯತೆ ರಕ್ಷಣೆಗೆ ಸಹಕರಿಸಬೇಕು. ಸ್ಥಳೀಯರ ಸಹಕಾರದಿಂದ ನೇತ್ರಾವತಿ ನದಿ ಪರಿಸರವನ್ನು ಸ್ವಚ್ಛವಾಗಿಡಲು ಪ್ರಯತ್ನಿಸಲಾಗುತ್ತದೆ. ಭಯ ಮಿಶ್ರಿತ ಗೌರವದಿಂದ ಭಕ್ತರು ಕ್ಷೇತ್ರಕ್ಕೆ ಬರಬೇಕು ಎಂದು ಅವರು ಸಲಹೆ ನೀಡಿದರು.

ಪರಿಸರ ಸ್ನೇಹಿ ಕಟ್ಟಡ: ಸಹ್ಯಾದ್ರಿ ವಸತಿ ಗೃಹವನ್ನು ಮರ ಬಳಸದೆ ಪರಿಸರ ಸ್ನೇಹಿಯಾಗಿ ನಿರ್ಮಿಸಲಾಗಿದೆ. ಮರದ ಬದಲು ಫೈಬರ್‌ನ ಕಿಟಿಕಿ, ಬಾಗಿಲು ಮತ್ತು ಪೀಠೋಪಕರಣಗಳನ್ನು ಬಳಸಲಾಗಿದೆ. ಸೌರಶಕ್ತಿ ಬಳಸಿ ಬಿಸಿ ನೀರು ಒದಗಿಸಲಾಗುತ್ತದೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಬೇಸಿಗೆಯ ಬವಣೆ ನೀಗಿಸಲು ಒಂದು ಕೋಟಿ ರೂ. ವೆಚ್ಚದ ವಿಶೇಷ ಯೋಜನೆ ರೂಪಿಸಲಾಗಿದೆ ಎಂದು ಹೆಗ್ಗಡೆಯವರು ಪ್ರಕಟಿಸಿದರು.

ನೀರಿನ ಬರ ಇರುವ ಜಿಲ್ಲೆ ಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಒದಗಿಸಲು 50 ಲಕ್ಷ ರೂ. ಹಾಗೂ ಗೋವುಗಳ ಸಂರಕ್ಷಣೆಗಾಗಿ 50 ಲಕ್ಷ ರೂ. ವಿನಿಯೋಗಿಸಲಾಗುವುದು ಎಂದು ಅವರು ಹೇಳಿದರು.

ಸುಮಲತಾ ಅಂಬರೀಶ್ ಮತ್ತು ಡಿ. ಸುರೇಂದ್ರ ಕುಮಾರ್ ಉಪಸ್ಥಿತರಿದ್ದರು.

ಡಿ. ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು. ದೇವಸ್ಥಾನದ ಪಾರುಪತ್ಯಗಾರ್ ಲಕ್ಷ್ಮೀನಾರಾಯಣ ರಾವ್ ಧನ್ಯವಾದವಿತ್ತರು. ಡಾ. ಶ್ರೀಧರ ಭಟ್ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News