ಮಂಗಳೂರು : ಯುವಕನಿಗೆ ಸಿಸಿಬಿ ಪೊಲೀಸರಿಂದ ಹಲ್ಲೆ: ಆರೋಪ

Update: 2016-04-24 17:06 GMT

ಮಂಗಳೂರು, ಎ. 24: ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದ ಯುವಕನೋರ್ವನ ಮೇಲೆ ಸಿಸಿಬಿ ಪೊಲೀಸರು ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆರುವುದಾಗಿ ಆರೋಪಿಸಲಾಗಿದೆ.

ಕಾವೂರು ಶಾಂತಿನಗರದ ತವಕ್ಕಲ್ ಹೌಸ್ ನಿವಾಸಿ ಹಸನಬ್ಬ ಎಂಬವರ ಪುತ್ರ ಮುಹಮ್ಮದ್ ಇಕ್ಬಾಲ್ (36) ಎಂವರೇ ಸಿಸಿಬಿ ಪೊಲೀಸರಿಂದ ಹಲ್ಲೆಗೊಳಗಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಇಕ್ಬಾಲ್ ಪತ್ರಿಕೆಯೊಂದಿಗೆ ವಿವರಿಸುತ್ತಾ, ಯಾರ ಕೊಲೆಗೆ ಯಾರು ಸಂಚು ರೂಪಿಸಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ತಿಂಗಳ ಹಿಂದೆ ಪೊಲೀಸರು ನನ್ನ ಮನೆಗೆ ಬಂದು ನನ್ನನ್ನು ಕೇಳಿದಾಗಲೂ ನನಗೆ ವಿಷಯ ಗೊತ್ತಾಗಿದೆ. ಆದರೆ, ಯಾರ ಕೊಲೆಯ ಸಂಚನ್ನು ನಾನು ರೂಪಿಸಿಲ್ಲ ಎಂದು ತಿಳಿಸಿದ್ದಾರೆ.

ಕೊಲೆಗೆ ಸಂಚು ರೂಪಿಸಿದ್ದಾರೆನ್ನುವ ಪೊಲೀಸರು ಪ್ರಕರಣದಲ್ಲಿ ಇಬ್ಬರನ್ನು ಎರಡು ತಿಂಗಳ ಹಿಂದೆಯೇ ಬಂಧಿಸಿದ್ದಾರೆ. ಇದೀಗ ಇದರಲ್ಲಿ ನಾಲ್ವರು ಆರೋಪಿಗಳಿದ್ದಾರೆ ಎಂದು ಹೇಳುವ ಪೊಲೀಸರು ನನ್ನನ್ನೂ ಇದರಲ್ಲಿ ಸಿಲುಕಿಸಿದ್ದು, ಇದರಿಂದಾಗಿ ನಾನು ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನನ್ನು ಪಡೆದುಕೊಂಡಿದ್ದೆ. ಇದೇ ಜಾಮೀನಿನ ಪ್ರತಿಯನ್ನು ಎಪ್ರಿಲ್ 19ರಂದು ಕಾವೂರು ಪೊಲೀಸರಿಗೆ ಸಲ್ಲಿಸಲು ಕಾವೂರು ಪೊಲೀಸ್ ಠಾಣೆಗೆ ಹೋಗಿದ್ದ ಸಂದರ್ಭದಲ್ಲಿ ಪೊಲೀಸರು ಮಧ್ಯಾಹ್ನ ಒಂದು ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಠಾಣೆಯಲ್ಲಿ ಕೂಡಿಹಾಕಿದ್ದಾರೆ. ಇದಾದ ಬಳಿಕ ಸಂಜೆ ಆರು ಗಂಟೆಗೆ ನನ್ನನ್ನು ಮಂಗಳೂರಿನ ಸಿಸಿಬಿ ಪೊಲೀಸರ ಬಳಿಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ನನ್ನ ಜಾಮೀನಿನ ವಿಷಯಕ್ಕೆ ಸಂಬಂಧಿಸಿ ಮಾತನಾಡಿದ್ದಾರೆ. ಅಲ್ಲಿ ನಾನು ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದೇನೆಂದು ಹೇಳಿದ್ದರೂ ನನ್ನನ್ನು ಅರೆನಗ್ನವಾಗಿ ನಿಲ್ಲಿಸಿ ಅವಾಚ್ಯವಾಗಿ ನಿಂದಿಸಿ ಮನಸೋಇಚ್ಛೆ ಹಲ್ಲೆ ನಡೆಸಿದ್ದಾರೆ. ಸಿಸಿಬಿ ಇನ್ಸ್‌ಪೆಕ್ಟರ್ ವೆಲೆಂಟೈನ್ ಡಿಸೋಜ, ಸಿಬ್ಬಂದಿಗಳಾದ ಸುನಿಲ್, ಇಸಾಕ್, ಚಂದ್ರಹಾಸ ಹಾಗೂ ಇತರ 5 ಮಂದಿ ಸಿಸಿಬಿ ಪೊಲೀಸರು ನನ್ನ ಕಾಲಿನ ಮೇಲೆ ನಿಂತು ಕಾಲಿನ ಅಡಿ ಭಾಗ, ಮಂಡಿ, ಕಾಲಿಗೆ ಮನಸೋ ಇಚ್ಛೆ ಥಳಿಸಿದ್ದಾರೆ. ಅಲ್ಲದೆ, ನನ್ನ ಕೈಗಳ ಸಹಿತ ಗುಪ್ತಾಂಗದ ಭಾಗಗಳಿಗೂ ಹೊಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಇಕ್ಬಾಲ್ ಆರೋಪಿಸಿದ್ದಾರೆ.

ಸಿಸಿಬಿ ಪೊಲೀಸರ ಹಲ್ಲೆಯಿಂದಾಗಿ ಇದೀಗ ತನಗೆ ಕುಳಿದುಕೊಳ್ಳಲು ಮತ್ತು ಸರಿಯಾಗಿ ನಡೆದಾಡಲೂ ಸಾಧ್ಯವಾಗುತ್ತಿಲ್ಲ. ಕೈ ಮತ್ತು ಕಾಲುಗಳ ಗಂಟುಗಳಲ್ಲಿ ಸೆಳೆತ ಉಂಟಾಗಿದ್ದು, ತೀವ್ರ ತರದ ನೋವನ್ನು ಅನುಭವಿಸುತ್ತಿದ್ದೇನೆ. ಆದ್ದರಿಂದ ನಿರೀಕ್ಷಣಾ ಜಾಮೀನು ಪಡೆದ ನನ್ನ ಮೇಲೆ ಈ ರೀತಿಯಾಗಿ ಹಲ್ಲೆ ನಡೆಸಿ ಕಾನೂನನ್ನು ಗೌರವಿಸದ ಸಿಸಿಬಿ ಇನ್ಸ್‌ಪೆಕ್ಟರ್ ವೆಲೆಂಟೈನ್ ಡಿಸೋಜ ಮತ್ತು ಸಿಬ್ಬಂದಿಗಳ ಮೇಲೆ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕೆಂದು ಇಕ್ಬಾಲ್ ಸಂಬಂಧಪಟ್ಟವರಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News