ಹಾಸ್ಯದಲ್ಲಿ ಅರ್ಥಪೂರ್ಣ ಒಳನೋಟ ಮುಖ್ಯ: ವಾಸುದೇವ ಭಟ್

Update: 2016-04-24 18:39 GMT

ಉಡುಪಿ, ಎ.24: ಹಾಸ್ಯ ಅಂದರೆ ಕೇವಲ ನಗಿಸುವುದು ಮಾತ್ರ ಅಲ್ಲ. ಅದರಲ್ಲಿ ಅರ್ಥಪೂರ್ಣ ಒಳನೋಟ ಇರಬೇಕು ಮತ್ತು ಅದು ಚಿಂತನೆಗೆ ಹಚ್ಚಬೇಕು. ಜೀವನದಲ್ಲಿ ಹಾಸ್ಯಪ್ರಜ್ಞೆ ಅತಿ ಮುಖ್ಯ ಎಂದು ಹಿರಿಯ ಸಂಗೀತ ನಿರ್ದೇಶಕ ನಾದವೈಭವಂ ಉಡುಪಿ ವಾಸುದೇವ ಭಟ್ ಹೇಳಿದ್ದಾರೆ.

ಉಡುಪಿ ಸುಹಾಸಂ ವತಿಯಿಂದ ರವಿವಾರ ನಡೆದ ಸುಹಾಸಂ ವಿಶಂತಿ ಸರಣಿ ಕಾರ್ಯಕ್ರಮದಲ್ಲಿ ಪ್ರೊ.ಎಸ್.ಎಸ್.ಪಡಶೆಟ್ಟಿಯವರ ‘ಹಾಸ್ಯ ದರ್ಶನ’ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.

‘ಉತ್ತಮ ಹವ್ಯಾಸಗಳು’ ಕುರಿತು ಉಪನ್ಯಾಸ ನೀಡಿದ ಶ್ರದ್ಧಾ ಪೈವಳಿಕೆ, ಕೇವಲ ಪಠ್ಯ ಮತ್ತು ಅಂಕಗಳಿಂದ ಜೀವನ ಉಜ್ವಲ ಆಗಲು ಸಾಧ್ಯವಿಲ್ಲ. ನಾವು ಬೆಳೆಸಿಕೊಳ್ಳುವ ಉತ್ತಮ ಹವ್ಯಾಸಗಳಿಂದ ಮಾತ್ರ ಜೀವನ ಅರ್ಥಪೂರ್ಣವಾಗಿರುತ್ತದೆ. ಉತ್ತಮ ಹವ್ಯಾಸ ಹೊಂದಿರುವ ವ್ಯಕ್ತಿಯು ಜೀವನಲ್ಲಿ ವಿಜಯಿಯಾಗುತ್ತಾನೆ ಎಂದು ತಿಳಿಸಿದರು.

ತೇಜಸ್ವಿನಿ ಕಾಸರಗೋಡು ಅವರಿಂದ ಮ್ಯಾಜಿಕ್ ನೃತ್ಯ ಹಾಗೂ ಬೆಳಗಾವಿ ನಾದ ಸುಧಾ ಯುವ ತಂಡದಿಂದ ‘ಮಧುರ ಮಧುರವೀ’ ಮಕ್ಕಳ ಗಾನ ಪ್ರದರ್ಶನಗೊಂಡಿತು. ಅಧ್ಯಕ್ಷತೆಯನ್ನು ಸುಹಾಸಂ ಅಧ್ಯಕ್ಷ ಎಚ್. ಶಾಂತರಾಜ ಐತಾಳ್ ವಹಿಸಿದ್ದರು.

ವೇದಿಕೆಯಲ್ಲಿ ಉಷಾ ಚಡಗ, ನಾದ ಸುಧಾ ತಂಡದ ಸತ್ಯನಾರಾಯಣ ಉಪಸ್ಥಿತರಿದ್ದರು. ಸುಹಾಸಂ ಕಾರ್ಯದರ್ಶಿ ಎಚ್. ಗೋಪಾಲ ಭಟ್ ಸ್ವಾಗತಿಸಿದರು. ಶ್ರೀನಿವಾಸ ಉಪಾಧ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News