ಉಡುಪಿಗೆ ಇಂದು ‘ಶೂನ್ಯ ನೆರಳಿನ ದಿನ’
ಉಡುಪಿ, ಎ.25: ಕರ್ಕಾಟಕ ಸಂಕ್ರಾಂತಿ ವೃತ್ತ ಮತ್ತು ಮಕರ ಸಂಕ್ರಾಂತಿ ವೃತ್ತಗಳ ನಡುವಿನ ಪ್ರದೇಶಗಳಲ್ಲಿ ವರ್ಷದಲ್ಲಿ ಎರಡು ಬಾರಿ ಸೂರ್ಯ ನೆತ್ತಿ ಮೇಲೆ ಹಾದು ಹೋಗಲಿದೆ. ಅಂದು ಮಾತ್ರ ಮಧ್ಯಾಹ್ನದ ನೆರಳು ಕಾಣಿಸುವುದಿಲ್ಲ- ಶೂನ್ಯವಾಗಲಿದೆ.
ಎ.26ರಂದು ಉಡುಪಿ ಹಾಗೂ ಆಸುಪಾಸಿನವರಿಗೆ ಶೂನ್ಯ ನೆರಳಿನ ಮಧ್ಯಾಹ್ನ. ಇದನ್ನು ಪ್ರಾತ್ಯಕ್ಷಿಕೆಗಳ ಮೂಲಕ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರಿಂದ ಮಧ್ಯಾಹ್ನ 12:30ಕ್ಕೆ ನಿರೂಪಿಸಲಾಗುತ್ತದೆ. ನಾಳೆ ಮಧ್ಯಾಹ್ನ ಯಾವುದೇ ಕಂಬದ ನೆರಳು ಇಲ್ಲದಂತಾಗುವುದನ್ನು ವೀಕ್ಷಿಸಬಹುದು. ಯಾವುದೇ ವಿಶೇಷ ಉಪಕರಣಗಳು ಬೇಕಿಲ್ಲ. ಗಾಜಿನ ಲೋಟ ವನ್ನು ಬಿಸಿಲಿನಲ್ಲಿಟ್ಟು ಶೂನ್ಯ ನೆರಳಿನ ಸಮಯವನ್ನು ಕಂಡುಹಿಡಿಯ ಬಹುದು. ಡಿ.21ರಿಂದ ಜೂನ್ 21 ರವರೆಗೆ ಸೂರ್ಯ ದಕ್ಷಿಣದಿಂದ ಉತ್ತರಕ್ಕೆ ಹೋಗುತ್ತಿದ್ದು, ಅದೇ ಉತ್ತರಾಯಣ. ಜೂನ್ 22ರಿಂದ ಡಿ.21ರವರೆಗೆ ದಕ್ಷಿಣಾಯಣ. ದಕ್ಷಿಣಾಯಣ ಸಂದರ್ಭ ಮುಂದಿನ ಆ.18ರಂದು ಉಡುಪಿಯಲ್ಲಿ ಶೂನ್ಯ ನೆರಳಿನ ದಿನವಾಗಿದೆ.