ಸುಳ್ಯ ನಗರಕ್ಕೂ ತಟ್ಟಿತು ನೀರಿನ ಬಿಸಿ: ಎರಡು ದಿನಗಳಿಗೊಮ್ಮೆ ನೀರು ಪೂರೈಸಲು ನ.ಪಂ.ನಿರ್ಧಾರ

Update: 2016-04-26 09:18 GMT

ಸುಳ್ಯ, ಎ. 26: ಮಳೆ ಬಾರದೆ ಬಿಸಿಲಿನ ತಾಪದಿಂದ ತತ್ತರಿಸುತ್ತಿರುವ ಸುಳ್ಯ ನಗರದ ಜನತೆಗೆ ನೀರಿನ ಬಿಸಿ ತಟ್ಟಿದೆ. ನೀರಿನ ಕೊರತೆಯಿಂದಾಗಿ ಎರಡು ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲು ನಗರ ಪಂಚಾಯತ್ ನಿರ್ಧರಿಸಿದೆ.

 ನೀರಿನ ಕೊರತೆಯ ಹಿನ್ನೆಲೆಯಲ್ಲಿ ನಗರ ಪಂಚಾಯತ್‌ನಲ್ಲಿ ನಡೆದ ತುರ್ತು ಸಭೆಯ ಬಳಿಕ ಅಧ್ಯಕ್ಷ ಪ್ರಕಾಶ್ ಹೆಗ್ಡೆಯವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ನಗರದಲ್ಲಿ ನೀರಿನ ಅಭಾವ ಇದ್ದರೂ ಇನ್ನೂ 10 ದಿನಗಳಿಗೆ ಸಮಸ್ಯೆ ಆಗಲಾದು ಎಂದು ಭಾವಿಸಿದ್ದೆವು. ಆದರೆ ಜಾಕ್ ವೆಲ್‌ಗಳಲ್ಲಿ ನೀರು ಗಣನೀಯ ಪ್ರಮಾಣದಲ್ಲಿ ತಗ್ಗಿ ಚಿಂತಾಜನಕ ಪರಿಸ್ಥಿತಿ ತಲೆದೋರಿದೆ. ಈ ನಿಟ್ಟಿನಲ್ಲಿ ಸುಳ್ಯ ನಗರದಲ್ಲಿ ಪಂಚಾಯತ್‌ನಿಂದ ಸರಬರಾಜು ಮಾಡುವ ನೀರನ್ನು ದಿನ ಬಿಟ್ಟು ದಿನ ಪೂರೈಸಲು ನಿರ್ಧರಿಸಲಾಗಿದೆ ಎಂದರು.

ಇದಲ್ಲದೆ ಜಾಕ್‌ವೆಲ್‌ಗಳ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಪಂಪುಶೆಡ್ಡುಗಳ ಸಂರ್ಕ ಕಡಿತ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ತಹಸೀಲ್ದಾರ್ ಅವರಿಗೆ ಮನವಿ ಮಾಡಿದ್ದೇವೆ. ಟ್ಯಾಂಕರ್‌ಗಳನ್ನು ಬಾಡಿಗೆಗೆ ಪಡೆದು ಹಾಗೂ ನಮ್ಮಲಿರುವ ಟ್ಯಾಂಕರ್ ಮುಖಾಂತರವೂ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು. ಕುರುಂಜಿಗುಡ್ಡೆ, ನಾವೂರು, ದುಗ್ಗಲಡ್ಕ ಹಾಗೂ ಜಟ್ಟಿಪಳ್ಳಗಳಲ್ಲಿ ಬೋರ್ ವೆಲ್ ಕೊರೆಸಲೂ ನಿರ್ಧರಿಸಲಾಗಿದೆ ಎಂದು ಪ್ರಕಾಶ್ ಹೆಗ್ಡೆ ಹೇಳಿದರು.
 

ನಗರದಲ್ಲಿ ಪ್ಲಾಸ್ಟಿಕ್‌ಗಳನ್ನು ಸಂಪೂರ್ಣ ನಿಷೇಧಿಸಿ ಸರಕಾದಿಂದ ಸುತ್ತೋಲೆ ಬಂದಿದೆ. ಈ ಹಿನ್ನೆಲೆಯಲ್ಲಿ ಸುಳ್ಯದಲ್ಲೂ ಈಗಾಗಲೇ ದಾಳಿ ಆರಂಭಿಸಿದ್ದೇವೆ. ಯಾವುದೇ ಬಗೆಯ ಪ್ಲಾಸ್ಟಿಕ್‌ಗಳಿಗೂ ಅವಕಾಶವಿಲ್ಲ. ಮೊದಲ ಹಂತದಲ್ಲಿ ವಶಪಡಿಸಿ ಎಚ್ಚರಿಕೆ ನೀಡಲಾಗುವುದು. ಎರಡನೆಯ ಹಂತದಲ್ಲಿ ದಂಡ ವಿಧಿಸಲಾಗುವುದು ಎಂದು ಪ್ರಕಾಶ್ ಹೆಗ್ಡೆ ಹಾಗೂ ಮುಖ್ಯಾಧಿಕಾರಿ ಎಂ. ಆರ್. ಸ್ವಾಮಿ ಹೇಳಿದರು. ನಗರ ವ್ಯಾಪ್ತಿಯಲ್ಲಿ ಮರಳುಗಾರಿಕೆ ಮಾಡದಂತೆಯೂ ಸೂಚನೆ ನೀಡಲಾಗಿದೆ ಎಂದವರು ಹೇಳಿದರು.

ನಗರ ಪಂಚಾಯತ್ ಉಪಾಧ್ಯಕ್ಷೆ ಮೀನಾಕ್ಷಿ, ಸ್ಥಾಯಿ ಸಮತಿಯ ಅಧ್ಯಕ್ಷೆ  ಮೋಹಿನಿ ನಾಗರಾಜ್, ಸದಸ್ಯರಾದ ಶಿವಕುಮಾರ್, ಹರಿಣಾಕ್ಷಿ ನಾರಾಯಣ, ಜಾನಕಿ ನಾರಾಯಣ, ಇಂಜಿನಿಯರ್ ಶ್ರೀದೇವಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News