ಪೆರುವಾಜೆಯಲ್ಲಿ ಖಾಲಿ ಕೊಡ ಹಿಡಿದು ಪ್ರತಿಭಟನೆ

Update: 2016-04-26 09:23 GMT

ಸುಳ್ಯ, ಎ. 26: ಪೆರುವಾಜೆ ಗ್ರಾ.ಪಂ ವ್ಯಾಪ್ತಿಯ ಮುರ್ಕೇತಿ ಪರಿಸರದಲ್ಲಿ ವಾರದಿಂದ ನಳ್ಳಿ ನೀರಿಲ್ಲದೆ ಜನರಿಗೆ ತೊಂದರೆ ಆಗಿದೆ ಎಂದು ಸ್ಥಳೀಯ ನಿವಾಸಿಗಳು ಗ್ರಾ.ಪಂ ಮುಂಭಾಗದಲ್ಲಿ ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮುರ್ಕೇತಿ ವಾರ್ಡ್ ನೀರಿನ ಸಮಿತಿ ಅಧ್ಯಕ್ಷ ಯತೀಶ್ ಕುಮಾರ್, ಕಳೆದ ಕೆಲ ದಿನಗಳಿಂದ ಮುರ್ಕೇತಿ ಪರಿಸರದಲ್ಲಿ ನೀರಿನ ಸಮಸ್ಯೆ ಇದೆ. ಇದರಿಂದ ಜನರಿಗೆ ತೊಂದರೆ ಆಗಿದೆ. ಇದಕ್ಕೆ ಸ್ಪಂದನೆ ನೀಡದಿದ್ದರೆ ಪ್ರತಿಭಟನಾ ಸ್ಥಳದಿಂದ ಕದಲುವುದಿಲ್ಲ ಎಂದು ಪಂಚಾಯತ್ ವಿರುದ್ಧ ಘೋಷಣೆ ಕೂಗಿದರಲ್ಲದೆ, ಸ್ಥಳೀಯರ ಜತೆ ಪಂಚಾಯತ್ ಮುಂಭಾಗದಲ್ಲಿ ಧರಣಿ ಕುಳಿತರು.

ಸ್ಥಳಕ್ಕೆ ಆಗಮಿಸಿದ ಪಂಚಾಯತ್ ಅಧ್ಯಕ್ಷೆ ಅನಸೂಯ, ಉಪಾಧ್ಯಕ್ಷ ಸುನಿಲ್ ರೈ, ಸ್ಥಳೀಯ ವಾರ್ಡ್ ಸದಸ್ಯ ಇಬ್ರಾಹಿಂ ಅಂಬೆಟಡ್ಕ ಪ್ರತಿಭಟನ ನಿರತರ ಅಹವಾಲು ಆಲಿಸಿದರು. ಬಳಿಕ ಪ್ರತಿಕ್ರಿಯಿಸಿದ ಅವರು, ಪೆರುವಾಜೆ ಗ್ರಾ.ಪಂ ಹೊಸ ಪಂಚಾಯತ್. ಇದಕ್ಕೆ ಅನುದಾನ ಬಂದಿಲ್ಲ. ಪಂಪ್ ದುರಸ್ತಿ ಹಣ ಪಾವತಿಗೆ ಸಮಸ್ಯೆ ಆಗಿದೆ. ಆದರೂ, ಪಂಚಾಯತ್ ವತಿಯಿಂದ ಜನರ ಸಮಸ್ಯೆಗೆ ಸ್ಪಂದಿಸುವ ಪ್ರಯತ್ನ ನಡೆದಿದೆ. ನಯಾಪೈಸೇ ಅನುದಾನ ಇಲ್ಲದೆ ಆಡಳಿತ ನಡೆಸುವುದು ಎಷ್ಟು ಕಷ್ಟ ಅನ್ನುವ ವಿಚಾರ ಎಲ್ಲರಿಗೂ ಗೊತ್ತಿರಬಹುದು ಎಂದು ಹೇಳಿದರು.

ಇದಕ್ಕೆ ಪ್ರತಿಭಟನಕಾರರು, ನಮಗೆ ಮುರ್ಕೇತಿ ಪರಿಸರದಲ್ಲಿ ನೀರಿನ ವ್ಯವಸ್ಥೆ ಆಗಬೇಕು. ಸಮಸ್ಯೆ ಆದಾಗ ಸ್ಪಂದಿಸುವುದು ಪಂಚಾಯತ್‌ನ ಕರ್ತವ್ಯ ಎಂದು ಮರು ಉತ್ತರಿಸಿದರು. ಕೆಲ ತಾಸುಗಳ ಕಾಲ ಮಾತಿನ ಚಕಮಕಿಯ ಬಳಿಕ, ಎ.26 ರೊಳಗೆ ನೀರಿನ ಪೂರೈಕೆಗೆ ವ್ಯವಸ್ಥೆ ಕಲ್ಪಿಸುವುದಾಗಿ ಪಂಚಾಯತ್ ಭರವಸೆ ನೀಡಿತ್ತು. ಬಳಿಕ ಪ್ರತಿಭಟನೆ ಕೈ ಬಿಡಲಾಯಿತು.
 

ನೀರು ಇಲ್ಲದಾಗ ಜನರು ಪಂಚಾಯತ್ ಮುಂದೆ ಪ್ರತಿಭಟನೆ ಮಾಡುತ್ತಾರೆ. ಆದರೆ ಬಿಲ್ ಬಾಕಿ ಆದರೆ ಯಾರು ಬರುವುದಿಲ್ಲ. ಮುರ್ಕೇತಿ ಪರಿಸರದಲ್ಲಿ 40 ಸಾವಿರಕ್ಕೂ ಅಕ ಬಿಲ್ ಪಾವತಿಗೆ ಬಾಕಿ ಇದೆ. ಎ.26 ರಿಂದಲೇ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಮತ್ತು ಮುರ್ಕೇತಿ ಪರಿಸರದಲ್ಲಿ ವಾಟರ್ ಮೆನ್ ನಜೀರ್ ಮೇಲೆ ಹಲ್ಲೆ ನಡೆಸಿರುವ ವಿರುದ್ಧ ದೂರು ನೀಡಲು ಪಂಚಾಯತ್ ತೀರ್ಮಾನಿಸಿತು.

ಮುರ್ಕೇತಿ ಪರಿಸರದ ನಾಗನಮಜಲಿನಲ್ಲಿ ಮೂರು ವರ್ಷದ ಹಿಂದೆ ಜಿ.ಪಂ ವತಿಯಿಂದ ಜಾಕ್‌ವೆಲ್ ನಿರ್ಮಾಣ ಕಾರ್ಯ ಇನ್ನೂ ಅಪೂರ್ಣ ಸ್ಥಿತಿಯಲ್ಲಿದೆ. ಎ.30 ರೊಳಗೆ ಇದನ್ನು ಪೂರ್ಣಗೊಳಿಸದಿದ್ದರೆ ಪ್ರತಿಭಟನೆ ನಡೆಸುತ್ತೇವೆ ಎಂದು ಪ್ರತಿಭಟನ ನಿರತರು ಆಗ್ರಹಿಸಿದಾಗ, ಅದು ಜಿ.ಪಂ ವ್ಯಾಪ್ತಿಯಲ್ಲಿ ಬಗೆಹರಿಸಬೇಕಾದ ಸಮಸ್ಯೆ. ಜಿಲ್ಲಾ ಪಂಚಾಯತ್ ಮುಂಭಾಗದಲ್ಲಿ ನೀವು ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ಗ್ರಾಮದ ಸದಸ್ಯರ ನೆಲೆಯಲ್ಲಿ ನಾವು ಬೆಂಬಲ ನೀಡುವುದಾಗಿ ಉಪಾಧ್ಯಕ್ಷ ಸುನಿಲ್ ರೈ ಹೇಳಿದರು. ಇದಕ್ಕೆ ಪ್ರತಿಭಟನ ನಿರತರು ಒಪ್ಪಿಗೆ ಸೂಚಿಸಿದರು.

ಪ್ರತಿಭಟನೆಯಲ್ಲಿ ಮೋನಪ್ಪ, ಮಹಮ್ಮದ್, ಸಂಜೀವ ಪೂಜಾರಿ, ರವಿ ಪೂಜಾರಿ, ಶ್ರೀಧರ, ಗಂಗಾಧರ, ದಿನೇಶ, ಮೋನಪ್ಪ, ಕುಸುಮಾ, ಶೀಲಾ, ಗೌತಮಿ, ಜಯಂತಿ, ಅಸ್ಮಾ. ಜಮೀಳಾ ಮೊದಲಾದವರು ಭಾಗವಹಿಸಿದ್ದರು. ಬೆಳ್ಳಾರೆ ಹೊರಠಾಣಾ ಸಿಬಂದಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News