ರಾಜಧಾನಿ ಜ್ಯುವೆಲ್ಲರ್ಸ್ ಶೂಟೌಟ್ ಪ್ರಕರಣ ಶೂಟರ್‌ಗೆ ಮಾರ್ಗದರ್ಶನ ನೀಡಿದ್ದ ಯುವಕನ ಬಂಧನ

Update: 2016-04-26 10:42 GMT

ಪುತ್ತೂರು: ಪುತ್ತೂರು ಮುಖ್ಯರಸ್ತೆಯಲ್ಲಿರುವ ಸಿ.ಪಿ.ಸಿ ಪ್ಲಾಝಾದ ಪ್ರಥಮ ಮಹಡಿಯಲ್ಲಿರುವ ರಾಜಧಾನಿ ಜ್ಯುವೆಲ್ಲರ‍್ಸ್‌ಗೆ 2015ರ ಅಕ್ಟೋಬರ್ 6ರಂದು ರಾತ್ರಿ 7.15ರ ವೇಳೆಗೆ ಮೂರು ಬಾರಿ ಗುಂಡು ಹಾರಿಸಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿರುವ ಕಾಸರಗೋಡು ಮೊಗ್ರಾಲ್‌ನ ಅಬ್ದುಲ್ ಆಸಿರ್ ತಂಡಕ್ಕೆ ಮಾರ್ಗದರ್ಶನ ನೀಡಿದ್ದ ಮಿತ್ತನಡ್ಕದ ಬಾಯರು ಮುಗುಳಿ ನಿವಾಸಿ ಮಹಮ್ಮದ್ ಅನ್ವರ್ ಕರೋಪಾಡಿ(20ವ) ಎಂಬವನನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.

ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿ ಎಲ್ಲಿ, ಹೇಗೆ ಶೂಟೌಟ್ ಮಾಡಬೇಕು ಎಂದು ಕಾಲಿಯಾ ರಫೀಕ್‌ನ ಸಹಚರರು ನೀಡಿದ ಮಾಹಿತಿಯಂತೆ ಮಹಮ್ಮದ್ ಅನ್ವರ್ ಮಾರ್ಗದರ್ಶನ ನೀಡಿರುವುದಾಗಿ ವಿಚಾರಣೆ ವೇಳೆ ಪೊಲೀಸ್ ಕಸ್ಟಡಿಯಲ್ಲಿದ್ದ ವೇಳೆ ಅಬ್ದುಲ್ ನಾಸಿರ್ ಬಾಯಿಬಿಟ್ಟಿದ್ದ. ಈ ಕುರಿತು ಪೊಲೀಸರು ಮಹಮ್ಮದ್ ಅನ್ವರ್‌ನ ಪತ್ತೆಗಾಗಿ ಬಲೆ ಬೀಸಿದ್ದರು. ಕನ್ಯಾನದ ಪೇಟೆಯಲ್ಲಿ ಮಹಮ್ಮದ್ ಅನ್ವರ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ವೃತ್ತನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಎಸ್.ಐ ಅಬ್ದುಲ್ ಖಾದರ್, ಎ.ಎಸ್.ಐ ಪಾಂಡುರಂಗ, ಕೃಷ್ಣಪ್ಪ ಮತ್ತು ಪ್ರಶಾಂತ್ ರೈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಉಪ್ಪಳದಲ್ಲಿರುವ ರಾಜಧಾನಿ ಜುವೆಲ್ಲರ್ಸ್‌ನ ವಿವಾದಕ್ಕೆ ಸಂಬಂಧಿಸಿ ಜುವೆಲ್ಲರ್ಸ್ ಮಾಲಕ ಜ್ಯುವೆಲ್ಲರ‍್ಸ್ ಮಾಲಕ ತಾನಾಜಿ ಶೇಟ್ ಜತೆ ಮನಸ್ತಾಪ ಹೊಂದಿದ್ದ ಭೂಗತ ಪಾತಕಿ ಕಲಿ ಯೋಗೀಶ ಯಾನೆ ಯೋಗೀಶ ಬಂಗೇರನು ತನ್ನ ಸಹಚರನಾಗಿರುವ ಕೇರಳದ ಭೂಗತ ಪಾತಕಿ ಕಾಲಿಯಾ ರಫೀಕ್‌ನ ಮೂಲಕ ಪುತ್ತೂರಿನ ರಾಜಧಾನಿ ಜುವೆಲ್ಲರ್ಸ್‌ಗೆ ಗುಂಡಿನ ದಾಳಿ ನಡೆಸಿದ್ದ. ಕಾಲಿಯಾ ರಫೀಕ್ ತನ್ನ ಸಹಚರರ ಮೂಲಕ ಈ ಕೃತ್ಯ ಎಸಗಿದ್ದ. ಈ ಪೈಕಿ ಎ.1ರಂದು ಮೊಗ್ರಾಲ್‌ನ ಅಬ್ದುಲ್ ಆಸೀರ್‌ನನ್ನು ಪುತ್ತೂರು ಕೊಂಬೆಟ್ಟು ಬಳಿ ಪೊಲೀಸರು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವೇಳೆ ವಿಚಾರಣೆ ನಡೆಸಿದಾಗ ಆತ ತಾನು ರಾಜಧಾನಿ ಜುವೆಲ್ಲರ್ಸ್ ಮೇಲಿನ ಗುಂಡಿನ ದಾಳಿಯಲ್ಲಿ ಪಾಲ್ಗೊಂಡಿದ್ದನ್ನು ತಿಳಿಸಿದ್ದನಲ್ಲದೆ ಕಲಿ ಯೋಗೀಶನ ಸೂಚನೆಯಂತೆ ಕಾಲಿಯಾ ರಝಾಕ್ ಜುವೆಲ್ಲರ‍್ಸ್‌ಗೆ ಗುಂಡಿನ ದಾಳಿ ನಡೆಸಲು ತನಗೆ ಹೇಳಿದ್ದರು. ಇದಕ್ಕಾಗಿ ತಾನು ೫೦ ಸಾವಿರ ರೂ ಅವರಿಂದ ಪಡೆದುಕೊಂಡಿದ್ದೆ ಎಂದು ಮಾಹಿತಿ ನೀಡಿದ್ದ. ಬಳಿಕ ಆತ ಅನುಮತಿ ರಹಿತವಾಗಿ ರಿವಾಲ್ವರ್ ಹೊಂದಿರುವುದನ್ನು ಪತ್ತೆ ಹಚ್ಚಿದ್ದ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದ ಪೊಲೀಸರ ತಂಡ ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿತ್ತು. ಈ ವೇಳೆ ನ್ಯಾಯಾಲಯ ಆಸೀರ್‌ಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಇದೀಗ ಆತನ ಜೊತೆಗಿದ್ದ ಈರ್ವರು ವಿದೇಶದಲ್ಲಿದ್ದು ಅವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿ ಸಹಕರಿಸಿದ ವ್ಯಕ್ತಿಗಳು ಒಬ್ಬೊಬ್ಬರಾಗಿ ಪೊಲೀಸರ ಅತಿಥಿಯಾಗುತ್ತಿದ್ದಾರೆ.

ಕಾಲಿಯಾ ರಫೀಕ್‌ಗೆ ಬಾಡಿ ವಾರಂಟ್ ಸಾಧ್ಯತೆ

ಅಪಹರಣ ಮತ್ತು ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿ ಈಗಾಗಲೇ ಕೇರಳದ ತ್ರಿಶೂರ್‌ನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕಾಲಿಯಾ ರಫೀಕ್‌ನನ್ನು ಪುತ್ತೂರಿನ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿ ಶೂಟೌಟ್‌ಗೆ ಬಳಸಿದ ಪಿಸ್ತೂಲ್ ಮತ್ತು ಹೆಚ್ಚಿನ ವಿಚಾರಣೆಗಾಗಿ ಪುತ್ತೂರು ಪೊಲೀಸರು ಬಾಡಿವಾರಂಟ್ ಕೇಳುವ ಸಾಧ್ಯತೆ ಇದೆ. ಎ.29ರಂದು ಕೇರಳ ನ್ಯಾಯಾಲಯಕ್ಕೆ ಕಾಲಿಯಾ ರಫೀಕ್‌ನನ್ನು ಹಾಜರು ಪಡಿಸುವ ವೇಳೆ ಪುತ್ತೂರು ಪೊಲೀಸರು ಬಾಡಿವಾರಂಟ್‌ಗೆ ಅರ್ಜಿ ಹಾಕಲಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News