ಮೇ.1 : ಕ್ಯಾಂಪ್ಕೋ ಎಂಪ್ಲಾಯೀಸ್ ಯೂನಿಯನ್‌ನಲ್ಲಿ ಮೇ ದಿನಾಚರಣೆ - ಉಚಿತ ನೇತ್ರ ತಪಾಸಣಾ, ಚಿಕಿತ್ಸೆ, ರಕ್ತದಾನ ಶಿಬಿರ

Update: 2016-04-26 10:45 GMT

ಪುತ್ತೂರು: ಕ್ಯಾಂಪ್ಕೋ ಚಾಕಲೇಟ್ ಕಾರ್ಖಾನೆ ಎಂಪ್ಲಾಯೀಸ್ ಯೂನಿಯನ್(ಹಿಂದುಸ್ತಾನ್ ಮಜ್ದೂರ್ ಸಭಾದ ಸಂಯೋಜಿತ ) ವತಿಯಿಂದ ಮೇ ದಿನಾಚರಣೆ ಮತ್ತು ಉಚಿತ ನೇತ್ರ ತಪಾಸಣೆ- ಚಿಕಿತ್ಸೆ ಶಿಬಿರ ಹಾಗೂ ರಕ್ತದಾನ ಶಿಬಿರ ಮೇ 1ರಂದು ಕ್ಯಾಂಪ್ಕೋ ಚಾಕಲೇಟ್ ಕಾರ್ಖಾನೆ ಆವರಣದಲ್ಲಿ ನಡೆಯಲಿದೆ ಎಂದು ಯೂನಿಯನ್ ಉಪಾಧ್ಯಕ್ಷ ನಿರಂಜನ ಎಂ.ಎಸ್. ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಪ್ರಸಾದ್ ನೇತ್ರಾಲಯ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ- ಉಡುಪಿ, ದಕ್ಷಿಣ ಕನ್ನಡ, ರೋಟರಿ- ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಇವರ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಯೂನಿಯನ್ ವತಿಯಿಂದ ಕಳೆದ ಎರಡು ದಶಕಗಳಿಂದಲೂ ಕಾರ್ಮಿಕ ದಿನಾಚರಣೆ ಪ್ರಯುಕ್ತ ರಕ್ತದಾನ ಶಿಬಿರ ನಡೆಸುತ್ತಾ ಬಂದಿದ್ದು, ಈ ಬಾರಿ ವಿಶೇಷವಾಗಿ ಪ್ರಸಾದ್ ನೇತ್ರಾಲಯ ಅವರ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸೆ ಶಿಬಿರ ಏರ್ಪಡಿಸಲಾಗಿದೆ. ಕಣ್ಣಿನ ಸಂಪೂರ್ಣ ತಪಾಸಣೆ ಮಾಡಿ ಅಗತ್ಯ ಉಳ್ಳವರಿಗೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಮಾಡಲಾಗುವುದು. ಇಂಥವರನ್ನು  ನಿರ್ದಿಷ್ಟ ದಿನದಂದು ಉಡುಪಿಯ ಪ್ರಸಾದ್ ನೇತ್ರಾಲಯಕ್ಕೆ ಕರೆದೊಯ್ದು ಶಸ್ತ್ರ ಚಿಕಿತ್ಸೆ ನಡೆಸಲಾಗುವುದು. ಅಗತ್ಯವುಳ್ಳವರಿಗೆ ರಿಯಾಯಿತಿ ದರದಲ್ಲಿ ಕನ್ನಡಕ ವಿತರಿಸಲಾಗುವುದು. ನಾನಾ ಬಗೆಯ ಆರೋಗ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದರು.  ಬೆಳಗ್ಗೆ ರಕ್ತದಾನ ಶಿಬಿರ ಮತ್ತು ನೇತ್ರ ಶಿಬಿರವನ್ನು ಕಾರ್ಖಾನೆಯ ಎಜಿಎಂ ಫ್ರಾನ್ಸಿಸ್ ಡಿಸೋಜ ಉದ್ಘಾಟಿಸುವರು. ರೋಟರಿ ಬ್ಲಡ್ ಬ್ಯಾಂಕ್ ಪುತ್ತೂರು ಇದರ ಡಾ. ರಾಮಚಂದ್ರ ಭಟ್ ಸಭಾಧ್ಯಕ್ಷತೆ ವಹಿಸುವರು. ಪ್ರಸಾದ್ ನೇತ್ರಾಲಯ ಉಡುಪಿಯ ಡಾ. ಕೆ. ಕೃಷ್ಣ ಪ್ರಸಾದ್, ಚಾಕಲೇಟ್ ಕಾರ್ಖಾನೆಯ ಎಜಿಎಂ ಕರುಣಾಕರ ಶೆಟ್ಟಿಗಾರ್ ಸಭಾಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಕಾರ್ಮಿಕರ ದಿನಾಚರಣೆ ಸಭಾ ಕಾರ್ಯಕ್ರಮದಲ್ಲಿ  ಎಚ್‌ಎಂಎಸ್ ರಾಜ್ಯಾಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, ಕ್ಯಾಂಪ್ಕೋ ಆಡಳಿತ ನಿರ್ದೇಶಕ ಸುರೇಶ್ ಭಂಡಾರಿ, ನಿರ್ದೇಶಕರಾದ ಚನಿಲ ತಿಮ್ಮಪ್ಪ ಶೆಟ್ಟಿ, ಕೃಷ್ಣಪ್ರಸಾದ್ ಮಡ್ತಿಲ, ಉಪನ್ಯಾಸಕ ಆದರ್ಶ ಗೋಖಲೆ, ಯೂನಿಯನ್‌ನ ಕಾನೂನು ಸಲಹೆಗಾರ ಮಹೇಶ್ ಕಜೆ, ಕ್ಯಾಂಪ್ಕೋ ಡಿಜಿಎಂ ಎಚ್.ಎಂ. ಕೃಷ್ಣ ಕುಮಾರ್, ಎಜಿಎಂ ಫ್ರಾನ್ಸಿಸ್ ಡಿಸೋಜಾ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಯೂನಿಯನ್ ಸದಸ್ಯರಿಗಾಗಿ ಕಾರ್ಮಿಕ ದಿನಾಚರಣೆ ಪ್ರಯುಕ್ತ ಎ.24ರಂದು ಏರ್ಪಡಿಸಲಾಗಿದ್ದ ಕ್ರೀಡಾ ಕೂಟದ ಬಹುಮಾನಗಳನ್ನು ಇದೇ ಸಂದರ್ಭ ವಿತರಿಸಲಾಗುವುದು ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಯೂನಿಯನ್ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ಕಾರ್ಯದರ್ಶಿ ಪದ್ಮಶೇಖರ, ಜತೆ ಕಾರ್ಯದರ್ಶಿ ದಿನೇಶ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News