ಸರ್ವೇ ಅರ್ಜಿಗಳ ಇತ್ಯರ್ಥದಲ್ಲಿ ಉಡುಪಿ ಪ್ರಥಮ: ಪ್ರಮೋದ್

Update: 2016-04-26 18:26 GMT


ಉಡುಪಿ, ಎ.26: ಉಡುಪಿ ತಾಲೂಕಿನಲ್ಲಿ ಕಳೆದ ವರ್ಷ 11,130 ಸರ್ವೇ ಅರ್ಜಿಗಳಲ್ಲಿ 9,700 ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗಿದೆ. ತಾಲೂಕಿನ ಪ್ರತಿ ಸರ್ವೇಯರ್‌ಗಳಿಗೆ ತಿಂಗಳಿಗೆ ತಲಾ 23 ಕಡತಗಳನ್ನು ಇತ್ಯರ್ಥಗೊಳಿಸುವ ಗುರಿಯನ್ನು ನೀಡಲಾಗುತ್ತಿದ್ದು, ಅವರು ಸರಾಸರಿ 32 ಅರ್ಜಿಗಳನ್ನು ಇತ್ಯರ್ಥಗೊಳಿಸುವ ಮೂಲಕ ಉಡುಪಿ ಜಿಲ್ಲೆಯು ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆಯುವಂತಾಗಿದೆ ಎಂದು ಶಾಸಕ ಹಾಗೂ ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಉಡುಪಿ ತಾಪಂ ಸಭಾಂಗಣದಲ್ಲಿ ತಾಲೂಕಿನ ಸರ್ವೇಯರ್‌ಗಳ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಉಡುಪಿಯು ಲೈಸನ್ಸ್ ಸರ್ವೇಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನಗಳಿಸಿದರೆ, ಸರಕಾರಿ ಸರ್ವೇಯಲ್ಲಿ ಪ್ರಥಮ ಸ್ಥಾನಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯೊಂದಿಗೆ ಪೈಪೋಟಿ ಯಲ್ಲಿದೆ. ಮುಂದೆ ಇದರಲ್ಲಿಯೂ ಉಡುಪಿ ಪ್ರಥಮ ಸ್ಥಾನಕ್ಕೆ ಏರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪೋಡಿ ಮುಕ್ತ ಅಭಿಯಾನವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವ ಉದ್ದೇಶದಿಂದ ಆ ಕಾರ್ಯದಲ್ಲಿ ಲೈಸನ್ಸ್ ಸರ್ವೇಯರ್‌ಗಳನ್ನೂ ಸೇರಿಸಿಕೊಳ್ಳಲು ರಾಜ್ಯ ಸರಕಾರ ಸೂಚನೆ ನೀಡಿದೆ. ಅವರಿಗೆ ಭೂಮಿ ಯೋಜನೆಯಲ್ಲಿ ಸಂಗ್ರಹಿಸಲಾದ 120 ಕೋಟಿ ರೂ.ನಲ್ಲಿ ವೇತನ ಪಾವತಿಸಲು ನಿರ್ಧರಿಸಲಾಗಿದೆ ಎಂದರು.
ಪ್ರಸ್ತುತ ಉಡುಪಿ ತಾಲೂಕಿನಲ್ಲಿ 37 ಲೈಸನ್ಸ್ ಸರ್ವೇಯರ್‌ಗಳಿದ್ದು, ಹೊಸದಾಗಿ ಉಡುಪಿ ಜಿಲ್ಲೆಗೆ 68 ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. ಅದೇ ರೀತಿ 31 ಮಂದಿ ಸರಕಾರಿ ಸರ್ವೇಯರ್‌ಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಏಕವ್ಯಕ್ತಿ ಸರ್ವೇ ಮಾಡಲು ಪರವಾನಿಗೆ ನೀಡುವಂತೆ ರಾಜ್ಯದ ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು.
 ಅರ್ಜಿ ಹಾಕಿದ ಒಂದು ತಿಂಗಳಲ್ಲಿ ದೊರೆಯುತ್ತಿದ್ದ 11 ಇ ನಕ್ಷೆಯು ಪೋಡಿ ಮುಕ್ತ ಅಭಿಯಾನದಿಂದಾಗಿ 15 ದಿನ ವಿಳಂಬವಾಗಿ ದೊರೆಯುತ್ತಿದೆ. ಮತ್ತೆ ಅದು ಒಂದು ತಿಂಗಳೊಳಗೆ ಸಿಗುವಂತೆ ಮಾಡಲು ಸರ್ವೇಯರ್‌ಗಳಿಗೆ ಶಾಸಕರು ಸೂಚನೆ ನೀಡಿದರು. ಕಳೆದ ನಾಲ್ಕು ವರ್ಷಗಳಿಂದ ಲೈಸನ್ಸ್ ಸರ್ವೇಯರ್‌ಗಳಿಗೆ ತಾತ್ಕಲ್ ಪೋಡಿ ಅರ್ಜಿಯ ಹಣ ಬರಲು ಬಾಕಿ ಇರುವ ಬಗ್ಗೆ ಸಭೆಯಲ್ಲಿ ಶಾಸಕರ ಗಮನಕ್ಕೆ ತರಲಾಯಿತು. ಈ ವಿಚಾರವನ್ನು ಕಂದಾಯ ಇಲಾಖೆಯ ಕಾರ್ಯದರ್ಶಿಗಳ ಗಮನಕ್ಕೆ ತಂದು ಹಣ ಬಿಡುಗಡೆಗೆ ಪ್ರಯತ್ನ ಮಾಡಲಾಗುವುದು ಎಂದು ಪ್ರಮೋದ್ ಮಧ್ವರಾಜ್ ಭರವಸೆ ನೀಡಿದರು. ಸಭೆಯಲ್ಲಿ ಭೂದಾಖಲೆಗಳ ಸಹಾಯಕ ನಿರ್ದೇಶಕ ರವೀಂದ್ರ, ಸರ್ವೇ ಶಾಖೆಯ ಮೇಲ್ವಿಚಾರಕ ಆರ್.ಕೃಷ್ಣಪ್ಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News