ಮೇ 14: ಬಾಳಿಲ ಪರಮೇಶ್ವರ್ ಭಟ್ ಪ್ರಶಸ್ತಿ ಪ್ರದಾನ

Update: 2016-04-26 18:39 GMT

ಸುಳ್ಯ, ಎ.26: ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ವತಿಯಿಂದ ವಿಷು ವಿಶೇಷ ಸ್ಪರ್ಧೆಯ ಬಹುಮಾನ ವಿತರಣೆ, ಬಾಳಿಲ ಪರಮೇಶ್ವರ ಭಟ್ ಸ್ಮಾರಕ ಪ್ರಶಸ್ತಿ ಪ್ರದಾನ ಹಾಗೂ ಕುರುಕ್ಷೇತ್ರಕ್ಕೊಂದು ಆಯೋಗ ಎಂಬ ವಿಶಿಷ್ಟ ಸಾಂಸ್ಕೃತಿಕ ಕಾರ್ಯಕ್ರಮ ಮೇ 14ರಂದು ಅಪರಾಹ್ನ ಸುಳ್ಯದ ಶಿವಕೃಪಾ ಕಲಾ ಮಂದಿರದಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನದ ಖಜಾಂಚಿ ಸುಬ್ರಹ್ಮಣ್ಯ ಭಟ್ ಗಬ್ಬಲಡ್ಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹವ್ಯಕ ಭಾಷಾ ಸಾಹಿತ್ಯ ಬೆಳವಣಿಗೆಗಾಗಿ ಕಥೆ, ಪ್ರಬಂಧ, ಕವನ, ನಗೆಬರಹ ಹಾಗೂ ವ್ಯಂಗ್ಯಚಿತ್ರ ವಿಭಾಗಗಳಲ್ಲಿ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸುವುದರ ಜೊತೆಗೆ ಹವ್ಯಕ ಭಾಷೆಯಲ್ಲಿ ‘ಧರ್ಮ ವಿಜಯ’ ಎಂಬ ಮಹಾಕಾವ್ಯವನ್ನು ರಚಿಸಿದ ದಿ.ಬಾಳಿಲ ಪರಮೇಶ್ವರ ಭಟ್ ಸ್ಮರಣಾರ್ಥ ಸ್ಥಾಪಿಸಲಾಗಿರುವ ಬಾಳಿಲ ಪ್ರಶಸ್ತಿಯನ್ನು ಡಾ.ಹರಿಕೃಷ್ಣ ಭರಣ್ಯರಿಗೆ ಪ್ರದಾನ ಮಾಡಲಾಗುವುದು ಎಂದರು.
ಹಿರಿಯ ಸಾಮಾಜಿಕ-ಧಾರ್ಮಿಕ ಧುರೀಣ ಆನೆಕಾರ ಗಣಪಯ್ಯರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ತೂಗು ಸೇತುವೆಗಳ ಸರದಾರ ಗಿರೀಶ್ ಭಾರಧ್ವಾಜ್ ಹಾಗೂ ಮಡಿಕೇರಿ ಆಕಾಶವಾಣಿಯ ಸುಬ್ರಾಯ ಸಂಪಾಜೆ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಗೌರವಾಧ್ಯಕ್ಷ ಈಶ್ವರ ಭಟ್ ಎಳ್ಳಡ್ಕ ಹಾಗೂ ಅಧ್ಯಕ್ಷ ಕೃಷ್ಣಶರ್ಮ ಹಳೆಮನೆ ವೇದಿಕೆಯಲ್ಲಿ ಉಪಸ್ಥಿತರಿರುವರು. ಸಂಜೆ 4:30ಕ್ಕೆ ಕದ್ರಿ ನವನೀತ ಶೆಟ್ಟಿ ಮತ್ತು ಬಳಗದವರಿಂದ ‘ಕುರುಕ್ಷೇತ್ರಕ್ಕೊಂದು ಆಯೋಗ’ ಎಂಬ ಯಕ್ಷಗಾನ-ನಾಟಕಗಳ ಸಮ್ಮಿಲನ ರೂಪವಾಗಿ ವಿಭಿನ್ನ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟಿ ಕುಮಾರಸ್ವಾಮಿ ತೆಕ್ಕುಂಜ, ಸದಸ್ಯ ಎಂ.ಎನ್.ವೆಂಕಟಕೃಷ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News