ಬಂಟ್ವ್ವಾಳ: ವಾರದಲ್ಲಿ 2 ದಿನ ಕೃಷಿಗೆ ನೀರು ಬಳಸಲು ಅವಕಾಶ

Update: 2016-04-27 18:16 GMT


ಬಂಟ್ವಾಳ, ಎ. 27: ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿರುವ ಹಿನ್ನೆಲೆಯಲ್ಲಿ ತಾಲೂಕಿನ ನೇತ್ರಾವತಿ ನದಿತಟದಲ್ಲಿ ಕೃಷಿಗೆ ನೀರು ಬಳಸದಂತೆ ರೈತರ ಮನವೊಲಿಸುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆಯಲ್ಲಿ ಬುಧವಾರ ಸಂಜೆ ಬಂಟ್ವಾಳದ ನಿರೀಕ್ಷಣಾ ಮಂದಿರದಲ್ಲಿ ವಿಷೇಶ ಸಭೆ ನಡೆಯಿತು.
ವಿಷಯ ಪ್ರಸ್ತಾಪಿಸಿದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಮಂಗಳವಾರದಿಂದ ಮಂಗಳೂರಿನಲ್ಲಿರುವ ಎಲ್ಲ ಕೈಗಾರಿಕಾ ಸಂಸ್ಥೆಗಳಿಗೆ ನೀರು ಪೂರೈಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಿ ಆದೇಶಿಸಲಾಗಿದೆ. ಆದರೂ ಮಂಗಳೂರಿನ ಕುಡಿಯುವ ನೀರಿನ ಸಮಸ್ಯೆ ನೀಗದ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನ ನೇತ್ರಾವತಿ ನದಿತಟದ ಕೃಷಿಕರು ನದಿ ನೀರನ್ನು ಕೃಷಿಗೆ ಬಳಸದೆ ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ ಹೆಚ್ಚಾಗಲು ಸಹಕರಿಸಬೇಕು. ಏಕಾಏಕಿ ವಿದ್ಯುತ್ ಕಡಿತಗೊಳಿಸಿ ಪಂಪ್‌ಗಳನ್ನು ನಿಷ್ಕ್ರಿಯಗೊಳಿಸುವ ಬದಲು ರೈತರೊಂದಿಗೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಈ ಸಭೆ ಕರೆಯಾಗಿದೆ ಎಂದರು.
ವಾರಕ್ಕೆ ಎರಡು ದಿನ ಕೃಷಿಗೆ ನೀರು: ರೈತರೊಂದಿಗೆ ಸುದೀರ್ಘ ಚರ್ಚೆ ನಡೆಸಿ ರೈತರ ಅಹವಾಲುಗಳನ್ನು ಆಲಿಸಿ ವಾರದ ಎರಡು ದಿನಗಳಲ್ಲಿ (ಬುಧವಾರ, ಶನಿವಾರ) ಮಾತ್ರ ರೈತರಿಗೆ ಕೃಷಿಗೆ ನೀರು ಬಳಸುವಂತೆ ಅವಕಾಶ ನೀಡುವುದು. ಆ ಮೂಲಕ ಡ್ಯಾಂನಲ್ಲಿ ನೀರಿನ ಮಟ್ಟ ಹೆಚ್ಚಿಸಿ ಮಂಗಳೂರಿಗೆ ನೀರು ಒದಗಿಸಲು ಸಹಕಾರ ನೀಡಲು ಸಭೆ ತೀರ್ಮಾನಿಸಿತು. ಈ ತೀರ್ಮಾನಕ್ಕೆ ರೈತರು ಒಪ್ಪಿಗೆ ನೀಡಿದರು.
ಜಿಲ್ಲಾ ಕೇಂದ್ರ ಮಂಗಳೂರಿಗೆ ನೀರಿನ ಸಮಸ್ಯೆಯಾದರೆ ಅದರ ಪರಿಣಾಮ ಜಿಲ್ಲೆಗೆ ತಟ್ಟುತ್ತದೆ. ಈಗ ಎದುರಾಗಿರುವ ನೀರಿನ ಸಮಸ್ಯೆ ಎಲ್ಲರ ಸಮಸ್ಯೆಯಾಗಿದೆ. ಈ ಸಮಸ್ಯೆ ಬಗೆಹರಿಸುವಲ್ಲಿ ನಮ್ಮ ಪಾಲು ಇದೆ ಎಂದು ಭಾವಿಸಿ ರೈತರು ಮಾನವೀಯತೆಯೊಂದಿಗೆ ಸಹಕಾರ ನೀಡಬೇಕು. ಇದು ರೈತರಿಗೆ ಹಾಕುವ ಬರೆಯಲ್ಲ. ಬರೆ ಹಾಕದಂತೆ ನಿಮ್ಮ ಜೊತೆ ನಾನಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ತಾಲೂಕಿನ ರೈತರಿಗೆ ಭರವಸೆ ನೀಡಿದರು. ಮಂಗಳೂರಿಗೆ ನೀರಿನ ತೀವ್ರ ಸಮಸ್ಯೆ ಇದೆ. ವಾರದಲ್ಲಿ ಎರಡು ದಿನ ವಿದ್ಯುತ್ ಕಡಿತಗೊಳಿಸಿ ವಾರದ ಐದು ದಿನ ಮಂಗಳೂರಿಗೆ ನೀರು ಕೊಡಿಸಲು ನೀವು ಸಹಕಾರ ನೀಡಿ ಎಂದು ಮೇಯರ್ ಹರಿನಾಥ್ ರೈತರಲ್ಲಿ ಮನವಿ ಮಾಡಿಕೊಂಡರು.
ಅಧಿಕಾರಿಗಳು ತರಾಟೆಗೆ
ಮಂಗಳೂರಿಗೆ ಕುಡಿಯುವ ನೀರು ಇಲ್ಲದೆ ಹೋದಾಗ ಇಲ್ಲಿ ಬಂದು ಸಭೆ ಮಾಡುತ್ತಿರಿ. ತುಂಬೆ ಹೊಸ ವೆಂಟೆಡ್ ಡ್ಯಾಂ ಸಂತ್ರಸ್ತ ರೈತರ ಸಭೆ ನಡೆಸಿ ಹೋದವರು ಈವರೆಗೆ ಬಂದಿಲ್ಲ. ಸಂತ್ರಸ್ತರಿಗೆ ನ್ಯಾಯ ಕೊಡುವ ಕೆಲಸವನ್ನು ಯಾರು ಮಾಡುತ್ತಾರೆ ಎಂದು ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಮನಪಾ ಅಧಿಕಾರಿಗಳನ್ನು ಈ ಸಂದರ್ಭ ತರಾಟೆಗೆ ತೆಗೆದುಕೊಂಡರು. ಕಳ್ಳಿಗೆ ಹಾಗೂ ತುಂಬೆ ಗ್ರಾಮಕ್ಕೆ ಇದೇ ವೆಂಟೆಡ್ ಡ್ಯಾಂನಿಂದ ನೀರು ಪೂರೈಕೆಗೆ ಆಗ್ರಹ ಕೇಳಿ ಬಂತು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರೈ ಮನಪಾ ಅಧೀನದಲ್ಲಿರುವ 2 ಎಂಜಿಡಿ ಘಟಕ ಜಿಪಂಗೆ ಹಸ್ತಾಂತರಗೊಂಡ ಬಳಿಕ ಈ ಸಮಸ್ಯೆ ಪರಿಹಾರವಾಗುವುದು. ಈ ನಿಟ್ಟಿನಲ್ಲಿ ಜಿಪಂ ಸಿಇಒ ಶ್ರೀವಿದ್ಯಾ ಮುತುವರ್ಜಿಯಿಂದ ಕಾರ್ಯನಿವರ್ರ್ಹಿಸುತ್ತಿದ್ದಾರೆ ಎಂದು ತಿಳಿಸಿದರು.
ಎಂಆರ್‌ಪಿಎಲ್ ವಿದ್ಯುತ್ ಸಂಪರ್ಕ ಕಡಿತಗೊಳಿಸಿ
ಮಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ ಹಿನ್ನೆಲೆಯಲ್ಲಿ ಕೈಗಾರಿಕೆಗಳಿಗೆ ನೀರು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಸರಪಾಡಿ ಡ್ಯಾಂನಿಂದ ರಾತ್ರಿ ಹೊತ್ತು ಎಂಆರ್‌ಪಿಎಲ್‌ಗೆ ನೀರು ಪೂರೈಕೆಯಾಗುತ್ತಿದೆ. ಕೃಷಿ ಪಂಪ್‌ಗಳ ವಿದ್ಯುತ್ ಸಂಪರ್ಕ ಕಡಿತ ಮಾಡಲು ಬಂದ ಅಧಿಕಾರಿಗಳು ಮೊದಲು ಎಂಆರ್‌ಪಿಎ

್ಗೆ ನೀರು ಸರಬರಾಜಾಗುತ್ತಿರುವ ಪಂಪ್‌ನ ವಿದ್ಯುತ್ ಸಂಪರ್ಕ ಕಡಿತಗೊಳಿಸಿ. ಆ ಬಳಿಕ ಕೃಷಿ ಪಂಪ್‌ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಎಂದು ಅಧಿಕಾರಿಗಳನ್ನು ರೈತರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರೈ ಕುಡಿಯುವ ನೀರಿನ ಸಮಸ್ಯೆ ಇರುವಾಗ ಕೈಗಾರಿಕೆಗಳಿಗೆ ನೀರು ಹೋಗದಂತೆ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News