ಮಂಗಳೂರು: ಅತ್ಯಾಚಾರ ಎಸಗಿ ಕೊಲೆ:ಆರೋಪಿಗೆ ಜೀವಾವಧಿ ಶಿಕ್ಷೆ

Update: 2016-04-28 17:33 GMT

ಮಂಗಳೂರು, ಎ.28: ಮೂಡಬಿದಿರೆಯ ಪಡು ಕೊಣಾಜೆ ಸಮೀಪದ ಹೌದಾಲ್ ಗುಡ್ಡದಲ್ಲಿ ಯುವತಿಯ ಅತ್ಯಾಚಾರಗೈದು ಕೊಲೆ ನಡೆಸಿದ ಪ್ರಕರಣದ ಆರೋಪಿ ಮೂಡಬಿದಿರೆ ಪಡುಕೋಣಾಜೆ ಗ್ರಾಮದ ಕಟ್ಟದಬೈಲಿನ ಹರೀಶ್ ಕುಲಾಲ್ (24)ಗೆ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳೂರಿನ 6ನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನ್ಯಾಯಾಧೀಶ ಡಿ.ಟಿ. ಪುಟ್ಟರಂಗಸ್ವಾಮಿ ಇಂದು ತೀರ್ಪು ನೀಡಿದ್ದಾರೆ.

    ಆರೋಪಿಗೆ ಕೊಲೆ ಆರೋಪಕ್ಕೆ (ಐಪಿಸಿ ಸೆಕ್ಷನ್ 302) ಜೀವಾವಧಿ ಸಜೆ ಮತ್ತು 5000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದಲ್ಲಿ ಮತ್ತೆ 2 ತಿಂಗಳ ಹೆಚ್ಚುವರಿ ಸಜೆ, ಅತ್ಯಾಚಾರ ಆರೋಪಕ್ಕೆ (ಸೆಕ್ಷನ್ 376) 7 ವರ್ಷಗಳ ಕಠಿಣ ಶಿಕ್ಷೆ ಮತ್ತು 5000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ ಹೆಚ್ಚುವರಿಯಾಗಿ 2 ತಿಂಗಳ ಸಾದಾ ಸಜೆ ಅನುಭವಿಸಬೇಕೆಂದು ತೀರ್ಪು ನೀಡಿದರು. ದಂಡದ ಮೊತ್ತದಲ್ಲಿ 8000 ರೂ. ಗಳನ್ನು ಕೊಲೆಯಾದ ಯುವತಿಯ ತಂದೆಗೆ ನೀಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ. ಅಲ್ಲದೆ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಸರಕಾರದಿಂದ ಸಿಗುವ ಪರಿಹಾರವನ್ನು ಪಡೆಯುವಂತೆ ಸೂಚಿಸಿದ್ದಾರೆ.

ಘಟನೆ ಹಿನ್ನೆಲೆ:ಬನ್ನಡ್ಕದ ್ಯಾಕ್ಟರಿಯೊಂದರಲ್ಲಿ ಸ್ಟೋರ್ ಕೀಪರ್ ಆಗಿ ಕೆಲಸ ಮಾಡುತ್ತಿದ್ದ 22 ವರ್ಷ ಪ್ರಾಯದ ಯುವತಿ 2011ರ ಮೇ 16 ರಂದು ಕೆಲಸ ಮುಗಿಸಿಸಂಜೆ 6 ಗಂಟೆ ವೇಳೆಗೆ ಬಸ್ಸಿನಲ್ಲಿ ಬಂದಿಳಿದು ಮನೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಅದೇ ಬಸ್ಸಿನಲ್ಲಿ ಬಂದಿಳಿದಿದ್ದ ಹರೀಶ್ ಕುಲಾಲ್ ಆಕೆಯನ್ನು
ಹಿಂಬಾಲಿಸಿದ್ದನು. ಯುವತಿ ಹೌದಾಲು ಗುಡ್ಡ ಪ್ರದೇಶಕ್ಕೆ ತಲುಪಿದಾಗ ಆತ ಆಕೆಯನ್ನು ಸಮೀಪದ ಅರಣ್ಯಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿ ಬಳಿಕ ಬೊಬ್ಬೆ ಹಾಕದಂತೆ ಬಾಯಿಗೆ ಕರವಸ ತುರುಕಿ, ಕುತ್ತಿಗೆಯನ್ನು ಕೈಯಿಂದ ಹಿಸುಕಿ ಕೊಲೆ ಮಾಡಿದ್ದನು ಎಂದು ಆರೋಪಿಸಲಾಗಿತ್ತು.

ಮೂಡಬಿದಿರೆ ಪಿಎಸ್‌ಐ ರಮೇಶ್ ಕುಮಾರ್ ಕೇಸು ದಾಖಲಿಸಿದ್ದು, ಇನ್ಸ್‌ಪೆಕ್ಟರ್ ಎ.ಕೆ. ತಿಮ್ಮಯ್ಯ ತನಿಖೆ ನಡೆಸಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಒಟ್ಟು 22 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಪ್ರಾರಂಭಿಕ ವಿಚಾರಣೆಯನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ಶಿವ ಪ್ರಸಾದ್ ಆಳ್ವ ಅವರು ನಡೆಸಿದ್ದು, ಆ ಬಳಿಕ ಪ್ರಸ್ತುತ ಪಬ್ಲಿಕ್ ಪ್ರಾಸಿಕ್ಯೂಟರ್ ಜುಡಿತ್ ಓಲ್ಗಾ ಮಾರ್ಗರೆಟ್ ಕ್ರಾಸ್ತಾ ಅವರು ನಡೆಸಿ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News