ಮಣಿಪಾಲ ಸರಣಿ ಕಳವು: ನಾಲ್ವರು ಆರೋಪಿಗಳ ಸೆರೆ

Update: 2016-04-28 18:26 GMT

ಉಡುಪಿ, ಎ.28: ನಾಲ್ಕು ದಿನಗಳ ಹಿಂದೆ ಮಣಿಪಾಲದಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಮಣಿಪಾಲ ಪೊಲೀಸರು ಯಶಸ್ವಿಯಾಗಿದ್ದಾರೆ.

ಚಿಕ್ಕಬಳ್ಳಾಪುರದ ಮೋಹನ ಯಾನೆ ಮಧು, ನಾರಾಯಣ ಸ್ವಾಮಿ, ಶ್ರೀನಿವಾಸ ಯಾನೆ ಶೀನ, ದೊಡ್ಡಬಳ್ಳಾಪುರದ ಗಂಗಾಧರ ಎಂಬವರು ಬಂಧಿತ ಆರೋಪಿಗಳು. ಇವರಿಂದ ಎ.24ರಂದು ರಾತ್ರಿ ವೇಳೆ ಮಣಿಪಾಲದ 4 ಅಂಗಡಿಗಳಿಂದ ಕಳವುಗೈದ ನಗದು ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಎ.26ರಂದು ಹಯಗ್ರೀವ ನಗರದ ಬಳಿ ಪೊಲೀಸರು ವಾಹನ ತಪಾಸಣೆ ಮಾಡುವಾಗ ಕೆಎ 05 ಎಎಫ್ 3412 ನಂಬರಿನ ಕಾರನ್ನು ನಿಲ್ಲಿಸಲು ಸೂಚನೆ ನೀಡಿದರೂ, ನಿಲ್ಲಿಸದೆ ಪರಾ ರಿಯಾಯಿತು. ಕೂಡಲೇ ಪೊಲೀಸರು ಕಾರನ್ನು ಬೆನ್ನಟ್ಟಿ ಲಕ್ಷ್ಮೀಂದ್ರ ನಗರದ ಬಳಿ ತಡೆದು ನಿಲ್ಲಿಸಿ ಅದರಲ್ಲಿದ್ದವರನ್ನು ವಿಚಾರಣೆಗೆ ಒಳಪಡಿಸಿದಾಗ ಕಳವು ಕೃತ್ಯ ಬೆಳಕಿಗೆ ಬಂತು.

ಬಂಧಿತರು ಕುಖ್ಯಾತ ಚೋರರಾಗಿದ್ದು ಇವರಲ್ಲಿ ಮೋಹನ ಯಾನೆ ಮಧು ಎಂಬಾತನ ವಿರುದ್ಧ ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯದ ಬೇರೆ ಬೇರೆ ಠಾಣೆಗಳಲ್ಲಿ ಈಗಾಗಲೇ 9 ಪ್ರಕರಣಗಳು ದಾಖಲಾಗಿದ್ದು, ನ್ಯಾಯಾಲಯದ ವಿಚಾರಣೆಯಲ್ಲಿದೆ. ಗಂಗಾಧರ ಎಂಬಾತನ ವಿರುದ್ಧ 4 ಕಳವು ಪ್ರಕರಣಗಳು ಕರ್ನಾಟಕ ರಾಜ್ಯದ ಬೇರೆ ಬೇರೆ ಠಾಣೆಗಳಲ್ಲಿ ದಾಖಲಾಗಿ ನ್ಯಾಯಾಲಯದ ವಿಚಾರಣೆಯಲ್ಲಿದೆ. ನಾರಾಯಣ ಸ್ವಾಮಿ ವಿರುದ್ಧ ಒಂದು ಕೊಲೆ ಪ್ರಕರಣವು ಚಿಕ್ಕಬಳ್ಳಾಪುರ ಜಿಲ್ಲೆಯ ಪಂಚನಹಳ್ಳಿ ಠಾಣೆಯಲ್ಲಿ ದಾಖಲಾಗಿದೆ.

  ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಣ್ಣಾಮಲೈ ನಿರ್ದೇಶನದಲ್ಲಿ, ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ಮಣಿಪಾಲ ಪೊಲೀಸ್ ಠಾಣಾ ನಿರೀಕ್ಷಕ ಎಸ್.ವಿ. ಗಿರೀಶ್, ಬ್ರಹ್ಮಾವರ ವೃತ್ತ ನಿರೀಕ್ಷಕ ಅರುಣ್ ನಾಯ್ಕ, ಉಪ ನಿರೀಕ್ಷಕ ಗೋಪಾಲಕೃಷ್ಣ, ಎಎಸ್ಸೈಗಳಾದ ಆನಂದ, ಸತೀಶ್ ಬಲ್ಲಾಳ್, ಸಿಬ್ಬಂ ದಿಯಾದ ಉಮೇಶ್, ಶೈಲೇಶ್ ಕುಮಾರ್, ನಾಗೇಶ್, ಕೃಷ್ಣ ಪ್ರಸಾದ್, ರಮೇಶ್, ಸಂತೋಷ್ ಶೆಟ್ಟಿ, ಶಿವಪ್ಪ, ಅಣ್ಣಯ್ಯ, ಲಕ್ಷಣ, ಮಂಜುನಾಥ, ಬಿ.ಕೆ.ರಾಘವೇಂದ್ರ, ಚಂದ್ರೇಗೌಡ, ಅಶೋಕ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News