ಜೆಬಿಎಫ್ ಸಂಸ್ಥೆಯ 58 ಮಂದಿಯಿಂದ ಪ್ರತಿಭಟನೆ

Update: 2016-04-29 09:56 GMT

ಮಂಗಳೂರು,ಎ.29: ಎಂಎಸ್‌ಇಝೆಡ್ (ಮಂಗಳೂರು ವಿಶೇಷ ಆರ್ಥಿಕ ವಲಯ)ನ ನಿರ್ಮಾಣ ಹಂತದಲ್ಲಿರುವ ಜೆಬಿಎಫ್ ಪೆಟ್ರೋಕೆಮಿಕಲ್ಸ್‌ನಲ್ಲಿ ಹುದ್ದೆ ಹಾಗೂ ವೇತನದಲ್ಲಿ ತಾರತಮ್ಯ, ಕಾರ್ಮಿಕ ಸೌಲಭ್ಯಗಳನ್ನು ಒದಗಿಸದೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿ 58 ಮಂದಿ ನಿರ್ವಸಿತ ಉದ್ಯೋಗಿಗಳು ಕಳೆದ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ಜೋಕಟ್ಟೆ ಸಮೀಪದ ಎಂಎಸ್‌ಇಝೆಡ್‌ನ ಜೆಬಿಎಫ್ ಕಂಪನಿಯ ಮಾರ್ಚ್ 28ರಿಂದ ತಮ್ಮ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆಗಿಳಿದ ನಿರ್ವಸಿತ ಉದ್ಯೋಗಿಗಳ ಬೇಡಿಕೆಗೆ ಸ್ಪಂದಿಸದೆ, ಕಂಪನಿಯು ನ್ಯಾಯಾಲಯದಿಂದ ಪ್ರತಿಬಂಧಕಾಜ್ಞೆ ತಂದ ಹಿನ್ನೆಲೆಯಲ್ಲಿ ಕಳೆದ 13 ದಿನಗಳಿಂದ ಕಂಪನಿಯ ಗೇಟ್ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಕಂಪನಿಯು ಇನ್ನೂ ಉತ್ಪಾದನೆ ಆರಂಭಿಸಿಲ್ಲ, ನಷ್ಟದಲ್ಲಿದೆ ಎಂಬ ಸಬೂಬು ನೀಡುವ ಕಂಪನಿಯಲ್ಲಿ ನೇರವಾಗಿ ಉದ್ಯೋಗಕ್ಕೆ ಸೇರ್ಪಡೆಗೊಂಡಿರುವವರಿಗೆ ಉತ್ತಮ ವೇತನ, ಸೌಲಭ್ಯಗಳನ್ನು ನೀಡಲಾಗುತ್ತಿದೆ. ಕಂಪನಿಗಾಗಿ ತಮ್ಮ ನೆಲೆಯನ್ನು ಕಳೆದುಕೊಂಡು, ಈ ಹಿಂದೆ ಇದ್ದಂತಹ ನೌಕರಿಯನ್ನೂ ಬಿಟ್ಟು ನಮ್ಮದೇ ಭೂಮಿಯಲ್ಲಿರುವ ಕಂಪನಿಯಲ್ಲಿ ನಮಗೆ ಉತ್ತಮ ವೇತನದ ಭದ್ರತೆಯ ಉದ್ಯೋಗ ದೊರೆಯುವ ನಿರೀಕ್ಷೆಯೊಂದಿಗೆ ತರಬೇತು ಪಡೆದು ಸೇರಿದವರಿಗೆ ಮಾತ್ರ ವೇತನದಲ್ಲಿ ತಾರತಮ್ಯ, ಸೌಲಭ್ಯದಲ್ಲಿ ವಂಚನೆ ಯಾಕೆ ಎಂಬುದು ಪ್ರತಿಭಟನಾಕಾರರ ಪ್ರಶ್ನೆ.

‘‘ಎಂಎಸ್‌ಇಝೆಡ್‌ಗಾಗಿ 2006ರಲ್ಲಿ ಭೂಸ್ವಾಧೀನಕ್ಕೊಳಗಾದ ಸಂತ್ರಸ್ತರಿಗೆ ಮನೆಗೆ ಒಂದರಂತೆ ಉದ್ಯೋಗ ನೀಡುವ ಭರವಸೆಯನ್ನು ಒದಗಿಸಲಾಗಿತ್ತು. ಸುಮಾರು 3 ವರ್ಷಗಳ ಕಾಲ ಅಂದರೆ 2007ರಿಂದ 2013ರವರೆಗೆ ನಿರ್ವಸಿತ ಕುಟುಂಬದ ಸದಸ್ಯರಿಗೆ ಕೆಪಿಟಿಯಲ್ಲಿ ತಾಂತ್ರಿಕ ತರಬೇತಿಯನ್ನೂ ಒದಗಿಸಿ ಆ ಸಂದರ್ಭ ಬಸ್ಸಿನ ಶುಲ್ಕವನ್ನು ಮಾತ್ರ ಒದಗಿಸಿದ್ದರು. ಬಳಿಕ 2013ರಲ್ಲಿ 6 ಮಂದಿ ನಿರ್ವಸಿತರನ್ನು ಕೆಲಸಕ್ಕೆ ತೆಗೆದುಕೊಂಡು 2014ರಲ್ಲಿ 30 ಹಾಗೂ 2015ರಲ್ಲಿ 31 ಮಂದಿಯನ್ನು ಕೆಲಸಕ್ಕೆ ಸೇರಿಸಿದ್ದರು. ಹೊರಗಿನ ಪ್ರಪಂಚಕ್ಕೆ ನಮಗೆ 24000 ರೂ. ಸಂಬಳ ನೀಡಲಾಗುತ್ತದೆ ಎಂದು ಬಿಂಬಿಸಲಾಗುತ್ತಿದೆ. ಆದರೆ ಅವೆಲ್ಲವೂ ಸುಳ್ಳು. ಇನ್ನೂ ಖಾಯಮಾತಿ ಇಲ್ಲದೆ ಕೇವಲ 10000 ರೂ. ವೇತನದಲ್ಲಿ ಇಲ್ಲಿ ದುಡಿಯುವಂತಾಗಿದೆ’’ ಎಂದು ಪ್ರತಿಭಟನಾ ನಿರತ ದಿನೇಶ್ ಆರೋಪಿಸುತ್ತಾರೆ.

‘‘ಜೀವನ ಪೂರ್ತಿ ನಾವು ತರಬೇತಿಯಲ್ಲೇ ಕಳೆಯುವ ಪರಿಸ್ಥಿತಿ ನಮ್ಮದು. ನಮಗೆ ತರಬೇತಿ ಸಮಯದಲ್ಲಿ ಕೈಗಾರಿಕಾ ತರಬೇತಿ ಎಂದು ಹೇಳಿ ಎಂಎಸ್‌ಇಝೆಡ್‌ನ ಪ್ರಮಾಣ ಪತ್ರ ನೀಡಿದ್ದಾರೆ. ಆ ಪ್ರಮಾಣಪತ್ರ ಹಿಡಿದು ಬೇರೆ ಕಂಪನಿಗಳಲ್ಲಿ ನಾವು ಉದ್ಯೋಗ ಪಡೆಯುವಂತಿಲ್ಲ. ಒಟ್ಟಿನಲ್ಲಿ ಈ ಕಂಪನಿಯಲ್ಲಿ ನಾವು ಜೀತದಾಳುಗಳಾಗಿ ಬದುಕುವಾಗಿದೆ. ಕಂಪನಿ ಉತ್ಪಾದನೆ ಆರಂಭಿಸಿಲ್ಲ ಎಂಬ ಹಾರಿಕೆಯ ಉತ್ತರ ನೀಡುತ್ತದೆಯಾದರೂ ಯಾವಾಗಿನಿಂದ ಉತ್ಪಾದನೆ ಆರಂಭವಾಗುತ್ತದೆ ಎಂಬುದಕ್ಕೆ ಉತ್ತರವಿಲ್ಲ’’ ಎಂದು ಮನೋಜ್ ಹೇಳುತ್ತಾರೆ. 

ಜೆಬಿಎಫ್ ನಿರ್ವಸಿತರ ಹೋರಾಟ ಸಮಿತಿ ಅಸ್ತಿತ್ವಕ್ಕೆ
ಎಪ್ರಿಲ್ 3ರಿಂದ ಜೆಬಿಎಫ್ ನಿರ್ವಸಿತರ ಹೋರಾಟ ಸಮಿತಿಯನ್ನು ರಚಿಸಿಕೊಂಡು ಪ್ರತಿಭಟಿಸುತ್ತಿರುವ ನಿರ್ವಸಿತ ಉದ್ಯೋಗಿಗಳು, ಡಿಪ್ಲೊಮಾ ಪದವೀಧರರು, ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಆದವರಿಗೆ ಒಂದೇ ವರ್ಷದಲ್ಲಿ ಉದ್ಯೋಗ ಖಾಯಂಗೊಳಿಸಬೇಕು. ಡಿಪ್ಲೊಮಾ ಹಾಗೂ ಪದವೀಧರರಿಗೆ ಹಾಗೂ ತರಬೇತಿ ಹೊಂದಿ ಉದ್ಯೋಗ ಸೇರಿದವರಿಗೆ ಒಂದು ವರ್ಷ ಪೂರ್ಣಗೊಂಡ ತಕ್ಷಣ ವಾರ್ಷಿಕ ಕನಿಷ್ಠ 4.25 ಲಕ್ಷ ರೂ. ವೇತನ ನೀಡಬೇಕು.

ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಆದವರಿಗೆ ಒದು ವರ್ಷ ಪೂರ್ಣಗೊಂಡ ಕೂಡಲೇ ವಾರ್ಷಿಕ ಕನಿಷ್ಠ 3.75 ಲಕ್ಷ ರೂ. ವೇತನ ನೀಡಬೇಕು. ಉದ್ಯೋಗ ಕ್ಷೇತ್ರದಲ್ಲಿ ದುಡಿಯುತ್ತಿರುವ ಸಮಯ ಉದ್ಯೋಗಿಯ ಆರೋಗ್ಯ ವಿಮೆ, ವೈಯಕ್ತಿಕ ವಿಮೆ, ಅಪಘಾತ ವಿಮೆ, ಇತ್ಯಾದಿ ಸೌಲಭ್ಯಗಳನ್ನು ಕಡ್ಡಾಯವಾಗಿ ನೇಮಕಗೊಂಡ ದಿನದಿಂದಲೇ ನೀಡುವ ವ್ಯವಸ್ಥೆಯಾಗಬೇಕು ವಾರ್ಷಿಕ ವೇತನ ಹಾಗೂ ಸೌಲಭ್ಯಗಳ ಪರಿಷ್ಕರಣೆ, ಕಾರ್ಮಿಕ ಪರಿಹಾರ ನಿಧಿ ಮೊತ್ತವನ್ನ 20 ಲಕ್ಷದಿಂದ 30 ಲಕ್ಷ ರೂ.ಗಳಿಗೆ ಏರಿಕೆ ಮಾಡಬೇಕು ಎಂಬ ಹಲವಾರು ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟಿಸುತ್ತಿದ್ದಾರೆ.

ಸ್ಥಳೀಯ ಸಾರ್ವಜನಿಕರೂ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದು, ದ.ಕ. ಜಿಲ್ಲಾ ಡಿವೈಎಫ್‌ಐ ಕೂಡಾ ಹೋರಾಟಕ್ಕೆ ಬೆಂಬಲವನ್ನು ಸೂಚಿಸಿದೆ.
ಕಾರ್ಮಿಕ ಕಾನೂನುಗಳ ಉಲ್ಲಂಘನೆ

ಎಂಎಸ್‌ಇಝೆಡ್‌ಗಾಗಿ ಭೂಮಿ ಕಳೆದುಕೊಂಡವರಿಗೆ ವಿದ್ಯಾರ್ಹತೆಯ ಆಧಾರದಲ್ಲಿ ಸಮಾನ ವೇತನದ ಆಶ್ವಾಸನೆಯೊಂದಿಗೆ 2014ರೊಳಗೆ ಎಲ್ಲರಿಗೂ ಉದ್ಯೋಗವ್ನ ಒದಗಿಸಬೇಕಾಗಿತ್ತು. ಆದರೆ ಇನ್ನೂ 200ರಷ್ಟು ಮಂದಿಗೆ ಉದ್ಯೋಗ ದೊರಕಿಲ್ಲ. ಅದಲ್ಲದೆ, ಎಂಆರ್‌ಪಿಎಲ್ ಹಾಗೂ ಒಎಂಪಿಎಲ್‌ಗಳಲ್ಲಿ ಉದ್ಯೋಗ ಪಡೆದಿರುವ ನಿರ್ವಸಿತ ಉದ್ಯೋಗಿಗಳಿಗೆ ಒಂದು ರೀತಿಯ ವೇತನ ಜೆಬಿಎಫ್ ಕಂಪನಿಯಲ್ಲಿ ಒಂದು ರೀತಿಯ ವೇತನ. ಜೊತಗೆ ವೈದ್ಯಕೀಯ ಹಾಗೂ ವಿಮಾ ಸೌಲಭ್ಯವನ್ನು ಒದಗಿಸದೆ ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ನಿರ್ವಸಿತ ಉದ್ಯೋಗಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿರುವ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅಭಿಪ್ರಾಯಿಸಿದ್ದಾರೆ.

ಆಶ್ವಾಸನೆ ನೀಡಿದ್ದ ಸಂಸದ ನಳಿನ್ ವೌನ

ಕಳೆದ ಅಕ್ಟೋಬರ್ ತಿಂಗಳಲ್ಲಿಯೇ ನಾವು ನಮ್ಮ ಬೇಡಿಕೆಗಳನ್ನು ಪ್ರಸ್ತಾಪಿಸಿದ್ದೆವು. ಆಸಂದರ್ಭ ಸಂಸದ ನಳಿನ್ ನೇತೃತ್ವದಲ್ಲಿ ಸಭೆ ನಡೆದು 24,000 ರೂ. ಮಾಸಿಕ ವೇತನದಂತೆ 4.25 ಲಕ್ಷ ರೂ.ಗಳ ವಾರ್ಷಿಕ ಪ್ಯಾಕೇಜನ್ನು ಪ್ರಕಟಿಸಲಾಗಿತ್ತು. ಆ ಪ್ಯಾಕೇಜಿಗೆ ನಾವ್ಯಾರೂ ಒಪ್ಪಿಕೊಂಡಿರಲಿಲ್ಲ. ಆಗ ಸಂಸ ನಳಿನ್ ಕುಮಾರ್ ಕಟೀಲ್‌ರವರು, ಮಾರ್ಚ್ ಒಳಗೆ ಎಲ್ಲವೂ ಸರಿಯಾಗಲಿದೆ. 2016ರ ಮಾರ್ಚ್ 17ರಿಂದ ಕಂಪನಿ ಉತ್ಪಾದನೆ ಆರಂಭಿಸಿ ನಿಮ್ಮ ಎಲ್ಲಾ ಸಮಸ್ಯೆಗಳೂ ಬಗೆಹರಿಯಲಿವೆ. ಬಗೆ ಹರಿಯದಿದ್ದರೆ ನಾನೇ ನಿಮ್ಮ ಜತೆ ಕುಳಿತು ಪ್ರತಿಭಟಿಸುತ್ತೇನೆ ಎಂದು ಆಶ್ವಾಸನೆ ನೀಡಿದ್ದರಿಂದ ನಾವು ಹೋರಾಟ ಕೈಬಿಟ್ಟು ಉದ್ಯೋಗದಲ್ಲಿ ಮುಂದುವರಿದಿದ್ದೆವು. ಆದರೆ ಇದೀಗ ಅವರು ನೀಡಿದ ಅವಧಿ ಮುಗಿದು ಒಂದೂವರೆ ತಿಂಗಳು ಕಳೆದಿದ್ದು, ಈ ಬಗ್ಗೆ ಸಂಸದರು ವೌನವಾಗಿದ್ದಾರೆ ಎಂದು ನಿರ್ವಸಿತ ಹೋರಾಟಗಾರ ದಿನೇಶ್ ಪ್ರತಿಕ್ರಿಯಿಸಿದ್ದಾರೆ.

ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟ

‘‘ನಮ್ಮ ಮಕ್ಕಳಿಗೆ ಉದ್ಯೋಗ ಭರವಸೆ ನೀಡಿ ಭೂಮಿ ಸ್ವಾಧೀನ ಪಡಿಸಿ, ಇದೀಗ ಉದ್ಯೋಗದಲ್ಲಿ ಖಾಯಂಗೊಳಿಸದೆ, ಸಮಾನ ವೇತನ ನೀಡದೆ ಕಿರುಕುಳ ನೀಡಲಾಗುತ್ತಿದೆ. ಕೆಲವರು ಉತ್ತಮ ಉದ್ಯೋಗವನ್ನು ಬಿಟ್ಟು ಇಲ್ಲಿ ಕೆಲಸಕ್ಕೆ ಸೇರಿದ್ದಾರೆ. ಕಂಪನಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದೆ ಉಗ್ರ ಪ್ರತಿಭಟನೆ ಅನಿರ್ವಾಯವಾಗಲಿದೆ’’ ಎಂದು ಜೆಬಿಎಫ್ ನಿರ್ವಸಿತರ ಹೋರಾಟ ಸಮಿತಿಯ ಅಧ್ಯಕ್ಷ ಜೋಕಿಂ ಡಿಕೋಸ್ತಾ ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News