'ನಮೋ ಬ್ರಿಗೇಡ್' ನರೇಶ್ ಶೆಣೈಗೆ ನಿರೀಕ್ಷಣಾ ಜಾಮೀನು ನಿರಾಕರಣೆ

Update: 2016-04-29 15:42 GMT

ಮಂಗಳೂರು, ಎ. 29: ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗಾ ಹತ್ಯೆಯ ಪ್ರಧಾನ ಆರೋಪಿ ಎನ್ನಲಾದ ನಮೋ ಬ್ರಿಗೇಡ್‌ನ ಸಂಸ್ಥಾಪಕ ನರೇಶ್ ಶೆಣೈಗೆ ಇಲ್ಲಿನ ಎರಡನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ನಿರಾಕರಿಸಿ ಆದೇಶ ನೀಡಿದೆ.

ಮಾ.21ರಂದು ನಡೆದ ಬಾಳಿಗ ಹತ್ಯೆಗೆ ಸಂಬಂಧಿಸಿದಂತೆ ನರೇಶ್ ಶೆಣೈ ವಿರುದ್ಧ ಸರಕಾರಿ ವಕೀಲರು ಪೂರಕ ಸಾಕ್ಷ ನೀಡಿದ್ದು, ಯಾವುದೇ ಕಾರಣಕ್ಕೂ ನಿರೀಕ್ಷಣಾ ಜಾಮೀನು ನೀಡಬಾರದು ಎಂದು ಎ.26ರಂದು ವಾದ ಮಂಡಿಸಿದ್ದರು. ಬಾಳಿಗ ಕುಟುಂಬಸ್ಥರ ಪರವಾಗಿ ವಕೀಲ ಸಚಿನ್ ದೇವೇಂದ್ರ ಎಂಬವರು ನ್ಯಾಯಾಲಯಕ್ಕೆ ಪ್ರತ್ಯೇಕ ಅಫಿದವಿತ್ ಸಲ್ಲಿಸಿದ್ದು, ನರೇಶ್ ಶೆಣೈಗೆ ನಿರೀಕ್ಷಣಾ ಜಾಮೀನು ನೀಡದಂತೆ ಕೋರಿದ್ದರು. ನ್ಯಾಯಾಲಯವು ತೀರ್ಪನ್ನು ಶುಕ್ರವಾರಕ್ಕೆ ಮುಂದೂಡಿತ್ತು. ಇಂದು ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ. ವಿನಾಯಕ ಬಾಳಿಗರನ್ನು ಅವರ ಮನೆಯ ಸಮೀಪವೇ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಕೊಲೆಯಲ್ಲಿ ನರೇಶ್ ಶೆಣೈ ಕೈವಾಡದ ಹಿನ್ನೆಲೆಯಲ್ಲಿ ಪೊಲೀಸರು ಆತನಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದರು. ಇದೇ ಸಂದರ್ಭದಲ್ಲೇ ಆತ ತಲೆಮರೆಸಿಕೊಂಡಿದ್ದು, ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಬಾಳಿಗಾರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಾ.27ರಂದು ವಿನೀತ್ ಪೂಜಾರಿ ಮತ್ತು ವಿಶಿತ್ ದೇವಾಡಿಗ ಎಂಬಿಬ್ಬರನ್ನು ಬಂಧಿಸಿದ್ದರು. ಈ ಬಂಧಿತ ಆರೋಪಿಗಳು ಪಂಜಿಮೊಗರು ಗ್ರಾಮದ ಉರುಂಡಾಡಿಗುಡ್ಡೆಯ ಶಿವ (21) ಎಂಬಾತ ಬಾಳಿಗಾ ಹತ್ಯೆಗಾಗಿ ನಮಗೆ ಸುಪಾರಿ ನೀಡಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾರೆಂದು ಹೇಳಲಾಗಿತ್ತು. ಕಾವೂರು ಶಾಂತಿನಗರ ಮೈದಾನದ ಬಳಿಯ ಶ್ರೀಕಾಂತ್ (40) ಎಂಬಾತ ಶಿವ ಎಂಬಾತನ ಮೂಲಕ ಕೊಲೆಗೆ ಗುತ್ತಿಗೆ ನೀಡಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು.
  ಯುವ ಬ್ರಿಗೇಡ್‌ನ ಸಂಸ್ಥಾಪಕ ನರೇಶ್ ಶೆಣೈ ನಡೆಸುತ್ತಿದ್ದ ಹಾಸ್ಟೆಲ್‌ಗಳ ನಿರ್ವಹಣೆ ಕೆಲಸವನ್ನು ಶ್ರೀಕಾಂತ್ ಮಾಡುತ್ತಿದ್ದ. ಬಾಳಿಗಾರನ್ನು ಹತ್ಯೆ ಮಾಡಿದ ಆರೋಪಿಗಳು ನರೇಶ್ ಶೆಣೈ ಆಪ್ತರಿಗೆ ಸೇರಿದ ಕ್ವಾಲಿಸ್ ವಾಹನವೊಂದರಲ್ಲಿ ಪರಾರಿಯಾಗಿದ್ದರು. ಬಂಧಿತರು ನೀಡಿದ್ದ ಮಾಹಿತಿಯಂತೆ ಹತ್ಯೆಯಲ್ಲಿ ನರೇಶ್ ಶೆಣೈ ಕೈವಾಡ ಇರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು. ಅದರಂತೆ ಪೊಲೀಸರು ನರೇಶ್ ಶೆಣೈಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಆದರೆ ನರೇಶ್ ಶೆಣೈ ತನಿಖಾ ತಂಡದ ಎದುರು ಹಾಜರಾಗಲಿಲ್ಲ. ಪೊಲೀಸರು ಮಾ.31ರಂದು ನಗರದ ವಿ.ಟಿ. ರಸ್ತೆಯಲ್ಲಿರುವ ಶೆಣೈ ಮನೆಗೆ ದಾಳಿ ಮಾಡಿ ಶೋಧ ನಡೆಸಿದ್ದರು. ಆದರೆ ಆತ ಪತ್ತೆಯಾಗಿರಲಿಲ್ಲ. ಪೊಲೀಸರು ಹುಡುಕಾಟ ಆರಂಭಿಸಿದ್ದರಿಂದ ನರೇಶ್ ಶೆಣೈ , ನಿರೀಕ್ಷಣಾ ಜಾಮೀನು ಕೋರಿ ನಗರದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಈಗ ಅವರಿಗೆ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದೆ. ಇದರಿಂದ ನರೇಶ್ ಬಂಧನಕ್ಕೆ ಪೋಲೀಸರ ಮೇಲೆ ಒತ್ತಡ ಹೆಚ್ಚಾದಂತಾಗಿದೆ.
ಬಾಳಿಗಾ ಅವರು ಮಾಹಿತಿ ಹಕ್ಕು ಅಡಿಯಲ್ಲಿ ನಗರದ ಬಿಲ್ಡರ್ಸ್‌ಗಳ, ಅಕ್ರಮ ಕಟ್ಟಡಗಳ, ಕೆಲವು ವ್ಯಕ್ತಿ, ದೇವಸ್ಥಾನದ ಅಕ್ರಮಗಳನ್ನು ಬಯಲಿಗೆಳೆದಿದ್ದರು. ಕಾರ್‌ಸ್ಟ್ರೀಟ್‌ನ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸುಮಾರು 7ರಿಂದ 8 ಕೋಟಿ ರೂ.ಗಳಷ್ಟು ಅವ್ಯವಹಾರ ನಡೆದಿದೆ ಎಂದು ಬಾಳಿಗಾರವರು ಆರೋಪಿಸಿದ್ದರೆಂದು ಅವರ ಸ್ನೇಹಿತ ಹಾಗೂ ಪ್ರಕರಣಕ್ಕೆ ಸಂಬಂಧಿಸಿ ಅವರಿಗೆ ಸಹಕರಿಸುತ್ತಿದ್ದ ಗಣೇಶ್ ಬಾಳಿಗಾ ಎಂಬವರು ಇತ್ತೀಚೆಗೆ ಆರೋಪಿಸಿದ್ದರು. ದೇವಸ್ಥಾನದಲ್ಲಿರುವ ಚಿನ್ನ, ಬೆಳ್ಳಿಗೆ ಸಂಬಂಧಿಸಿ ದಾಖಲೆಗಳಿಲ್ಲ. ಆಡಳಿತದಲ್ಲಿ ಲೋಪ ಎಸಗಿರುವುದು ನಿಜ. ಆದ್ದರಿಂದ ದೇವಸ್ಥಾನ ಉತ್ತಮ ರೀತಿಯಲ್ಲಿ ಮುನ್ನಡೆಯಬೇಕು. ದೇವರ ಹಣ ಪೋಲಾಗಬಾರದು. ಹಾಗೂ ಅವ್ಯವಹಾರ ನಡೆಸಿದವರನ್ನು ತನಿಖೆಗೊಳಪಡಿಸಬೇಕೆಂದು ಗಣೇಶ್ ಬಾಳಿಗಾ ಒತ್ತಾಯಿಸಿದ್ದರು.

ಹೈಕೋರ್ಟ್‌ಗೆ ಅರ್ಜಿ:

ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಹೈಕೋರ್ಟ್‌ಗೆ ಮನವಿ ಸಲ್ಲಿಸುವುದಾಗಿ ನರೇಶ್ ಶೆಣೈ ಪರ ವಕೀಲ ಶಂಭು ಶರ್ಮ ತಿಳಿಸಿದ್ದಾರೆ.
ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಮೇ 2ರಂದು ಧರಣಿ: ನರೇಂದ್ರ ನಾಯಕ್
 ಬಾಳಿಗಾ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ನರೇಶ್ ಶೆಣೈ ಹಾಗೂ ಅವರ ಸಹವರ್ತಿ ಶ್ರೀಕಾಂತ್ ಮತ್ತು ವ್ನಿೇಶ್ ಎಂಬವರನ್ನು ತಕ್ಷಣ ಬಂಧಿಸುವಲ್ಲಿ ಪೊಲೀಸರು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿರುವ ರಾಷ್ಟ್ರೀಯ ವಿಚಾರವಾದಿ ವೇದಿಕೆಯ ಮುಖಂಡ ಪ್ರೊ.ನರೇಂದ್ರ ನಾಯಕ್, ಇದರ ವಿರುದ್ಧ ಮೇ 2ರಂದು ಮಧ್ಯಾಹ್ನ 3:30ಕ್ಕೆ ಬಾಳಿಗ ಮನೆಯಿಂದ ನಗರ ಪೊಲೀಸ್ ಆಯುಕ್ತರ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಹೇಳಿದ್ದಾರೆ.
ಬಾಳಿಗಾ ಹತ್ಯೆಯ ಬಳಿಕ ತಲೆಮರೆಸಿಕೊಂಡಿದ್ದ ನರೇಶ್ ಶೆಣೈ ಅಮಾಯಕ ಎಂದು ಬಿಂಬಿಸಲು ಕೆಲವರು ಪ್ರಯತ್ನಿಸಿದ್ದರು. ಆತ ಅಮಾಯಕನಾಗಿದ್ದರೆ, ಹತ್ಯೆ ಬಳಿಕ ತಲೆಮರೆಸಿಕೊಳ್ಳುವ ಅಗತ್ಯ ಏನಿತ್ತು ಎಂದು ಅವರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News