ದೇರಳಕಟ್ಟೆ: ಲೀಲಾ ನಾರಾಯಣ ಶೆಟ್ಟಿ ಸೆಂಟರ್ ಫಾರ್ ನ್ಯೂರೋ ಸೈನ್ಸಸ್ ಹಾಗೂ ಸಂಶೋಧನಾ ಕೇಂದ್ರ ಉದ್ಘಾಟನೆ

Update: 2016-04-29 16:42 GMT

 ಕೊಣಾಜೆ, ಎ.29: ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಲೀಲಾ ನಾರಾಯಣ ಶೆಟ್ಟಿ ಅವರ ಹೆಸರಿನಲ್ಲಿ ಪ್ರಾಯೋಜಿಸಿದ ಲೀಲಾ ನಾರಾಯಣ ಶೆಟ್ಟಿ ಸೆಂಟರ್ ಫಾರ್ ನ್ಯೂರೋ ಸೈನ್ಸಸ್ ಹಾಗೂ ಸಂಶೋಧನಾ ಕೇಂದ್ರವನ್ನು ಅಮೆರಿಕದ ಪಿಟ್ಸ್‌ಬರ್ಗ್‌ನ ಖ್ಯಾತ ಹೃದ್ರೋಗ ತಜ್ಞ ಡಾ. ಕೆ. ನಾರಾಯಣ ಶೆಟ್ಟಿ ಶುಕ್ರವಾರ ಉದ್ಘಾಟಿಸಿದರು.

ಬಳಿಕ ದೇರಳಕಟ್ಟೆಯ ನಿಟ್ಟೆ ವೈದ್ಯಕೀಯ ಶಿಕ್ಷಣ ಕ್ಯಾಂಪಸ್‌ನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನರರೋಗ ಹಾಗೂ ಕ್ಯಾನ್ಸರ್ ಸಂಬಂಧಿ ರೋಗಿಗಳಿಗೆ ನಾನು ಸಹಾಯ ಹಸ್ತ ನೀಡುತ್ತಾ ಬಂದಿದ್ದು ಮುಂದಿನ ದಿನಗಳಲ್ಲೂ ಅಂತಹ ಸೇವೆಯನ್ನು ನೀಡಲು ಸದಾ ಸಿದ್ಧನಾಗಿದ್ದೇನೆ. ನಿಟ್ಟೆ ವಿಶ್ವವಿದ್ಯಾನಿಲಯ ಗುಣಮಟ್ಟದ ಶಿಕ್ಷಣ ಹಾಗೂ ಅತ್ಯುತ್ತಮ ಸೇವೆಯ ಮೂಲಕ ದೇಶ ವಿದೇಶದಲ್ಲಿ ಪ್ರಸಿದ್ಧಿ ಗಳಿಸಿದ್ದು ನಮಗೂ ಹೆಮ್ಮೆ ತಂದಿದೆ ಎಂದು ನುಡಿದರು.


 ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಎನ್.ವಿನಯ್ ಹೆಗ್ಡೆ ಮಾತನಾಡಿ, ನೂತನ ಕೇಂದ್ರವನ್ನು 10 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದ್ದು ನಿಟ್ಟೆ ವಿವಿ ಗುಣಮಟ್ಟದ ಶಿಕ್ಷಣ, ಅತ್ಯುತ್ತಮ ಸೇವೆಯ ಮೂಲಕ ಆರೋಗ್ಯ ಮತ್ತು ಶೈಕ್ಷಣಿಕ ರಂಗದಲ್ಲಿ ತನ್ನದೇ ಆದ ಪಾತ್ರ ನಿರ್ವಹಿಸುತ್ತಿದೆ. ಹಾಗೆಯೇ ಸುಸಜ್ಜಿತ ಹಾಗೂ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಪ್ರತಿಕ್ಷಣವೂ ಕ್ರಿಯಾಶೀಲವಾಗಿದೆ ಎಂದು ನುಡಿದರು.


  ಕ್ಷೇಮದಲ್ಲಿ 280 ಸ್ನಾತಕೋತ್ತರ ಶಿಕ್ಷಕರಿದ್ದಾರೆ. 23 ಸೂಪರ್ ಸ್ಪೆಷಾಲಿಟಿ ವಿಭಾಗಗಳಿವೆ. ಯುವ ವೈದ್ಯರು ಹೆಚ್ಚಿನ ಸೇವೆ ಸಲ್ಲಿಸುತ್ತಿದ್ದು ಪ್ರತಿದಿನ ಮೂರು ಸಾವಿರ ರೋಗಿಗಳಿಗೆ ವಿವಿಧ ವಿಭಾಗದಲ್ಲಿ ತಪಾಸಣೆ ಹಾಗೂ ಚಿಕಿತ್ಸೆ ಲಭಿಸುತ್ತಿದೆ. ನಗರದಲ್ಲಿ ಕ್ಲಿನಿಕ್ ಒಂದನ್ನು ತೆರದರೂ ವೈದ್ಯರಿಗೆ ಹೆಚ್ಚಿನ ಆದಾಯ ಗಳಿಸುವ ಅವಕಾಶವಿದ್ದರೂ ಕ್ಷೇಮ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ವೈದ್ಯರು ರೋಗಿಗಳಿಗೆ ಉತ್ತಮ ಸೇವೆ ನೀಡುವ ಮೂಲಕ ಸಂಪೂರ್ಣ ತೃಪ್ತರಾಗಿದ್ದಾರೆ. ಹಣದ ಹಿಂದೆ ಹೋಗದೆ ರೋಗಿಗಳಿಗೆ ಉತ್ತಮ ಸೇವೆ ನೀಡುತ್ತಾ ರೋಗಿಯ ಸೇವೆ ಮಾಡುತ್ತಾ ಗುಣಪಡಿಸಿದ ತೃಪ್ತಭಾವದಲ್ಲಿದೇ ನೆಮ್ಮದಿ ಕಂಡುಕೊಂಡಿದ್ದಾರೆ. ಅಂತಹ ಸೇವೆಯೇ ಸಂಸ್ಥೆಯ ಯಶಸ್ಸಿಗೆ ಕಾರಣವಾಗಿದೆ ಎಂದು ನುಡಿದರು.
    ಡಾ.ಕೆ. ನಾರಾಯಣ ಶೆಟ್ಟಿಯವರ ಪುತ್ರಿ ನೀನಾ ಶೆಟ್ಟಿಯವರು ಲೀಲಾ ನಾರಾಯಣ ಶೆಟ್ಟಿ ಕುರಿತಾಗಿ ಮಾತನಾಡಿ ಸಂಸ್ಥೆಗೆ ಶುಭಹಾರೈಸಿದರು.
ಆಸ್ಪತ್ರೆಯ ಆಡಳಿತ ಹಾಗೂ ವೈದ್ಯಕೀಯ ಸ್ನಾತಕೋತ್ತರ ಆಧ್ಯಯನ ಸಹ ಕುಲಪತಿ ಪ್ರೊ. ಡಾ. ಎಂ. ಶಾಂತಾರಾಮ ಶೆಟ್ಟಿ, ಡಾ. ಕೆ. ನಾರಾಯಣ ಶೆಟ್ಟಿ ಹಾಗೂ ನೂತನ ಕೇಂದ್ರದ ಕುರಿತಾಗಿ ಮಾತನಾಡಿದರು.
 ರಾಜ್ಯ ನಿವೃತ್ತ ಲೋಕಾಯುಕ್ತ ನ್ಯಾ.ಎನ್. ಸಂತೋಷ್ ಹೆಗ್ಡೆ ಶುಭ ಕೋರಿದರು.

 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News