ಭಟ್ಕಳ ತಹಶೀಲ್ದಾರ ಬಂಧನಕ್ಕೆ ದಲಿತ ಸಂಘಟನೆಗಳ ಒತ್ತಾಯ

Update: 2016-04-30 08:58 GMT

ಮುಂಡಗೋಡ, ಎ. 30: ಭಟ್ಕಳ ತಹಶೀಲ್ದಾರ ಗ್ರೇಡ್1 ಹಾಗೂ ಗ್ರೇಡ್2 ಇವರ ವಿರುದ್ಧ ಎಸ್.ಸಿ./ಎಸ್.ಟಿ ದೌರ್ಜನ್ಯ ಅಧಿನಿಯಮದಡಿಯಲ್ಲಿ ದೂರು ದಾಖಲಾಗಿದ್ದು, ಅವರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಿದೆ.

ಭಟ್ಕಳ ತಾಲೂಕಿನಲ್ಲಿ 11 ವ್ಯಕ್ತಿಗಳು ಸುಳ್ಳು ದಾಖಲಾತಿಗಳನ್ನು ಹಾಜರುಪಡಿಸಿ ಪರಿಶಿಷ್ಟ ಜಾತಿಗೆ ಸೇರಿದ ಬಗ್ಗೆ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದು, ಈ ಕುರಿತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯು ಸದರಿ ಪ್ರಮಾಣ ಪತ್ರಗಳನ್ನು ರದ್ದುಪಡಿಸುವಂತೆ ಆದೇಶಿಸಿರುತ್ತಾರೆ. ಈ ಆದೇಶ ಹೊರಡಿಸಿ ಎರಡು ವರ್ಷಗಳು ಕಳೆದರೂ ಜಾತಿ ಪ್ರಮಾಣ ಪತ್ರಗಳನ್ನು ರದ್ದುಪಡಿಸದೇ ಅನಗತ್ಯ ವಿಳಂಬ ಮಾಡುತ್ತಿರುವ ಗ್ರೇಡ್1 ತಹಶೀಲ್ದಾರ ಬಾಡ್ಕರ್ ಹಾಗೂ ಗ್ರೇಡ್2 ತಹಶೀಲ್ದಾರ ಹೆಗಡೆ ವಿರುದ್ಧ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಶ್ರೀ ಕಿರಣಕುಮಾರ ಶಿರೂರ ಎಸ್.ಸಿ/ಎಸ್.ಟಿ ದೌರ್ಜನ್ಯ ಅಧಿನಿಯಮದಡಿಯಲ್ಲಿ ದೂರು ದಾಖಲಿಸಿದ್ದಾರೆ.

ಭಟ್ಕಳ ತಹಶೀಲ್ದಾರ ಗ್ರೇಡ್1 ಹಾಗೂ ಗ್ರೇಡ್2 ಇವರು ಜಿಲ್ಲಾಧಿಕಾರಿಗಳ ಆದೇಶವನ್ನು ಪಾಲಿಸದೇ, ಕರ್ತವ್ಯಲೋಪ ಎಸಗಿರುತ್ತಾರೆ. ದಲಿತರಿಗೆ ಸಲ್ಲಬೇಕಾದ ಮೀಸಲಾತಿ ಸೌಲಭ್ಯವನ್ನು ವಂಚಿಸಿದ ಬಗ್ಗೆ ಇವರನ್ನು ತಕ್ಷಣ ಬಂಧಿಸಬೇಕು. ಇಲ್ಲವಾದಲ್ಲಿ ಜಿಲ್ಲೆಯಾದ್ಯಂತ ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಬೇಕಾಗುತ್ತದೆ.

ಜಿಲ್ಲೆಯ ಕೆಲವು ಜನಪ್ರತಿನಿಧಿಗಳು ಆರೋಪಿತರಿಗೆ ರಕ್ಷಣೆ ನೀಡಿ, ನೈಜ ಪರಿಶಿಷ್ಟರಿಗೆ ಅನ್ಯಾಯ ಮಾಡುತ್ತಿದ್ದು, ಈ ಬಗ್ಗೆ ಮತದಾರರಲ್ಲಿ ಇವರ ದ್ವಿಮುಖ ನೀತಿಯ ಕುರಿತು ತಿಳಿಸಲಾಗುವುದು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News