ರಾಜ್ಯದಲ್ಲಿ ಬರ ಇಲ್ಲ ಎಂದ ಸಚಿವ ಹೆಚ್.ಕೆ.ಪಾಟೀಲ್ ರಾಜೀನಾಮೆ ನೀಡಲಿ:ಬಿ.ಜನಾರ್ಧನ ಪೂಜಾರಿ

Update: 2016-04-30 09:29 GMT

ಮಂಗಳೂರು, ಎ.30: ರಾಜ್ಯದಲ್ಲಿ ಬರ ಇಲ್ಲ ಎಂದು ಹೇಳಿಕೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಸೃಷ್ಟಿಸಿರುವ ಗ್ರಾಮೀಣಾಭಿವೃದ್ದಿ ಸಚಿವ ಹೆಚ್.ಕೆ.ಪಾಟೀಲ್ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ಬಿ.ಜನಾರ್ದನ ಪೂಜಾರಿ ಆಗ್ರಹಿಸಿದರು.
 

  ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಹೆಚ್.ಕೆ.ಪಾಟೀಲ್ ಅವರ ಹೇಳಿಕೆ ನಾಚಿಕೆಗೇಡಿಗೇನದು. ಮುಖ್ಯಮಂತ್ರಿಗಳು ಬರಪೀಡಿತ ಜಿಲ್ಲೆಗಳ ಪ್ರವಾಸ ಮಾಡುತ್ತಿದ್ದಾರೆ. ಆದರೆ ಹೆಚ್.ಕೆ .ಪಾಟೀಲ್ ಬರಪೀಡಿತ ಜಿಲ್ಲೆಗಳಿಗೆ ಹೋಗುತ್ತಿಲ್ಲ. ರಾಜ್ಯದಲ್ಲಿ ಬರ ಇಲ್ಲ ಅಂದರೆ ಕೇಂದ್ರದಿಂದ ಬರ ಪರಿಹಾರ ಪಡೆಯಲು ಸಾಧ್ಯವಿಲ್ಲ. ಹೆಚ್.ಕೆ.ಪಾಟೀಲ್ ಹೇಳಿಕೆಯಿಂದ ಪಕ್ಷಕ್ಕೆ ಮುಜುಗುರ ಉಂಟಾಗಿದ್ದು ಮುಖ್ಯಮಂತ್ರಿಗಳು ಅವರ ಹೇಳಿಕೆಯನ್ನು ಸಮರ್ಥಿಸುವುದು ಸರಿಯಲ್ಲ. ಮುಖ್ಯಮಂತ್ರಿಗಳಾಗಲು ಹೊರಟಿರುವ ಹೆಚ್.ಕೆ.ಪಾಟೀಲ್ ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು ಎಂದು ಹೇಳಿದರು.

ಪಕ್ಷದ ಆಂತರಿಕ ವಿಷಯ ಬಹಿರಂಗ ಚರ್ಚೆ ಮಾಡಬಾರದೆಂದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ನೀಡಿರುವ ಸೂಚನೆ ಬಗ್ಗೆ ಪ್ರತಿಕ್ರೀಯಿಸಿದ ಅವರು ನಾನು ಪಕ್ಷದ ಸಂವಿಧಾನವನ್ನು ಕರಗತ ಮಾಡಿಕೊಂಡಿದ್ದು ಪಕ್ಷದ ಸಂವಿಧಾನಕ್ಕೆ ಪೂರಕವಾಗಿ ಮಾತನಾಡುತ್ತಿದ್ದೇನೆ.ಪಕ್ಷದ ಕಾರ್ಯಕ್ರಮಗಳನ್ನು ಟೀಕಿಸಿದರೆ ಪಕ್ಷ ವಿರೋಧಿಯಾಗುತ್ತದೆ. ಭ್ರಷ್ಠಾಚಾರವನ್ನು ವಿರೋಧಿಸುವುದು ಪಕ್ಷದ ಸಂವಿಧಾನದ ಪ್ರಕಾರ ಸರಿಯಾಗಿದ್ದು ಅದರಂತೆ ನಾನು ಮಾತನಾಡಿದ್ದೇನೆ . ಪಕ್ಷದ ಅಧ್ಯಕ್ಷರು ಪಕ್ಷದ ಸಂವಿಧಾನವನ್ನು ಅಧ್ಯಯನ ಮಾಡಲಿ ಎಂದು ಹೇಳಿದರು.
 

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪರಮೇಶ್ವರ್ ಅವರ ಅವಧಿ ಮುಗಿದಿದ್ದು ಅವರು ಮುಂದಿನ ಅವಧಿಗೆ ಅಧ್ಯಕ್ಷರಾಗುವುದಿಲ್ಲ ಎಂದು ಹೇಳಿದ್ದಾರೆ. ನಾನು ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಲ್ಲ.ಮುನಿಯಪ್ಪನವರು ಅಧ್ಯಕ್ಷ ಸ್ಥಾನ ಬಯಸುವುದು ತಪ್ಪಲ್ಲ. 7 ಬಾರಿ ಸಂಸದರಾಗಿರುವ ಮುನಿಯಪ್ಪನವರು ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಸಮರ್ಥರಿದ್ದಾರೆ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿನ ಕೊರತೆಯಿದ್ದು ಎತ್ತಿನಹೊಳೆ ಯೋಜನೆ ವಿರುದ್ದ ದೊಡ್ಡ ಮಟ್ಟದ ಹೋರಾಟವನ್ನು ಮಾಡಿದ್ದೇನೆ. ಮೆ.19 ರಂದು ನಡೆಯುವ ಬಂದ್‌ಗೆ ನನ್ನ ಬೆಂಬಲವಿಲ್ಲ. ಸುಪ್ರೀಂಕೋರ್ಟ್ ಬಂದ್ ಮಾಡುವುದು ಅಪರಾಧವೆಂದು ತಿಳಿಸಿದ್ದು ಬಂದ್‌ನಿಂದ ಆಗುವ ನಷ್ಟವನ್ನು ಬಂದ್‌ಗೆ ಕರೆ ನೀಡಿದವರೆ ಭರಿಸಬೇಕಾಗುತ್ತದೆ. ಎತ್ತಿನಹೊಳೆ ಯೋಜನೆ ವಿರುದ್ದ ಹೊರಾಟಗಾರರು ಮನೆಮನೆ ಪ್ರಚಾರವನ್ನು ಮಾಡಬೇಕಾಗಿದೆ ಎಂದು ಹೇಳಿದರು.
 

ಪ್ರಧಾನಿ ನರೇಂದ್ರ ಮೋದಿಯವರು ಸುಬ್ರಹ್ಮಣ್ಯ ಸ್ವಾಮಿಯವರ ಹಿಂದೆ ಅಡಗಿ ನಿಂತುಕೊಂಡು ಸೋನಿಯಾಗಾಂಧಿಯವರ ಮೇಲೆ ದಾಳಿ ನಡೆಸುತ್ತಿದ್ದಾರೆ. ಇಂದಿರಾಗಾಂಧಿಯವರ ವಿರುದ್ದ ಸಮರ ಸಾರಿದ್ದ ಸುಬ್ರಹ್ಮಣ್ಯಸ್ವಾಮಿಯವರು ಇದೀಗ ಸೋನಿಯಾಗಾಂಧಿಯವರ ವಿರುದ್ದ ಸಮರ ಸಾರಿದ್ದು ಇದಕ್ಕೆ ಮೋದಿಯವರು ಅವರಿಗೆ ಮಂತ್ರಿಗಿರಿಯ ಕೊಡುಗೆಯನ್ನು ಕೊಡಬಹುದು.
 

 ಆಗಸ್ಟಾ ಪ್ರಕರಣದಲ್ಲಿ ಭ್ರಷ್ಟಾಚಾರ ಆರೋಪ ಬಂದ ಕೂಡಲೆ ಯುಪಿಎ ಸರಕಾರ ಒಪ್ಪಂದವನ್ನು ರದ್ದುಮಾಡಿದೆ. ಒಂದು ವೇಳೆ ಭೃಷ್ಟಾಚಾರ ಮಾಡಿದ್ದರೆ ಒಪ್ಪಂದವನ್ನು ರದ್ದು ಮಾಡುತ್ತಿರಲಿಲ್ಲ. ಅಮಿತ್ ಷಾ ಅವರು ಸೋನಿಯಾ ಗಾಂಧಿಯವರಿಗೆ ಹಣದ ಬಗ್ಗೆ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಕೆಂದ್ರದಲ್ಲಿ ಅವರದೇ ಆದ ಸರಕಾರವಿದೆ. ತನಿಖೆ ಮಾಡಿ ತಿಳಿದುಕೊಳ್ಳಬಹುದೆಂಬ ಕನಿಷ್ಠ ಜ್ಞಾನವು ಅವರಿಗಿಲ್ಲ ಎಂದು ಟೀಕಿಸಿದರು.

ಮೋದಿ ಸರಕಾರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳುಗಡವುತ್ತಿದೆ. ದೇಶದ ಚೀಫ್ ಜಸ್ಟಿಸ್ ಅವರು ಕಣ್ಣೀರು ಹಾಕುವಂತಹ ಪರಿಸ್ಥಿತಿಯನ್ನು ಸೃಷ್ಟಿಸಿದ್ದಾರೆ ಎಂದು ಹೇಳಿದರು.

 ಪತ್ರಿಕಾಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಕಳ್ಳಿಗೆ ತಾರನಾಥ ಶೆಟ್ಟಿ, ಉಮೇಶ್ಚಂದ್ರ, ಟಿ.ಕೆ.ಸುಧೀರ್, ಅರುಣ್ ಕೊಯ್ಲೋ, ಪುರಂದರದಾಸ್ ಕೂಳೂರು,ರಮಾನಂದ ಪೂಜಾರಿ,ಕರುಣಾಕರ್ ಶೆಟ್ಟಿ,ನೀರಜ್ ಪಾಲ್, ಗೋಪಾಲ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News