ಕುಡಿಯುವ ನೀರಿಗೆ ಗ್ರಾಮಸ್ಥರ ಆಗ್ರಹ, ಆಕ್ರೋಶ

Update: 2016-04-30 12:36 GMT

 ಉಪ್ಪಿನಂಗಡಿ, ಎ.30: ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಪಿಡಿಒ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಶನಿವಾರ 34ನೆ ನೆಕ್ಕಿಲಾಡಿ ಗ್ರಾಪಂನ ಗ್ರಾಮಸಭೆಯಲ್ಲಿ ನಡೆಯಿತು.

ಗ್ರಾಪಂ ಅಧ್ಯಕ್ಷೆ ರತಿ ಎಸ್. ನಾಯ್ಕರ ಅಧ್ಯಕ್ಷತೆಯಲ್ಲಿ ಪಂಚಾಯತ್‌ನ ಸಭಾಂಗಣದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಮಾತನಾಡಿದ ಗ್ರಾಮಸ್ಥ ಮಹಿಳೆಯೋರ್ವರು, ನೀರಿನ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿ ಕುಡಿಯಲು ನೀರು ನೀಡಿ ಎಂದು ಆಗ್ರಹಿಸಿದರು. ಇದಕ್ಕೆ ದನಿಗೂಡಿಸಿದ ಗ್ರಾಮಸ್ಥರು ಆದರ್ಶ ನಗರದಲ್ಲಿರುವ ಮನೆಯೊಂದಕ್ಕೆ ಪಂಚಾಯತ್‌ನ ಕುಡಿಯುವ ನೀರಿನ ಟ್ಯಾಂಕ್‌ಗೆ ಬರುವ ಪೈಪ್‌ನಿಂದಲೇ ನೇರವಾಗಿ ಸಂಪರ್ಕ ಒದಗಿಸಲಾಗಿದೆ. ಇದರಿಂದ ಟ್ಯಾಂಕ್‌ನ ಒಳಹರಿವು ಕಡಿಮೆಯಾಗಿದ್ದು, ಈ ಟ್ಯಾಂಕ್‌ನಿಂದ ಸಂಪರ್ಕ ಪಡೆದ ಮನೆಯವರಿಗೆ ನೀರಿಲ್ಲದಂತಾಗಿದೆ ಎಂಬ ಆರೋಪಿಸಿದರು. ಈ ಬಗ್ಗೆ ಒಂದು ತಿಂಗಳ ಹಿಂದೆ ಪಿಡಿಒ ಗಮನಕ್ಕೆ ತರಲಾಗಿದೆ. ಆದರೂ ಯಾವುದೇ ಕ್ರಮವಾಗಿಲ್ಲ ಎಂದು ದೂರಿದರಲ್ಲದೆ, ಕೆಲಸದಲ್ಲಿ ಉದಾಸೀನತೆ ತೋರಿದ ಪಿಡಿಒನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಕೃಷಿಗೆ ನೀರು ಕೊಡಲು ಆಗ್ರಹ:

 ಒಂದು ಕೊಳವೆ ಬಾವಿಯಿಂದ ಇನ್ನೊಂದು ಕೊಳವೆಬಾವಿಗೆ 500 ಮೀಟರ್ ಅಂತರವಿಡಬೇಕೆಂದು ಸರಕಾರ ಆದೇಶಿಸಿದೆ. ಆದರೆ ಒಂದೆರಡು ಎಕರೆ ಕೃಷಿ ಹೊಂದಿರುವ ರೈತರು ಈ ಅಂತರ ಕಾಪಾಡಲು ಸಾಧ್ಯವೇ ಎಂದು ಪ್ರಶ್ನಿಸಿದ ಗ್ರಾಮಸ್ಥರು, ಕೊಳವೆ ಬಾವಿ ತೋಡಲು ಸರಕಾರ ನಿಗದಿಪಡಿಸಿದ ಅಂತರವನ್ನು ಕಡಿಮೆಗೊಳಿಸಬೇಕು. ಕುಡಿಯುವ ನೀರಿನೊಂದಿಗೆ ಬರಗಾಲ ಪೀಡಿತ ಪ್ರದೇಶದ ರೈತರಿಗೆ ಕೃಷಿಗೂ ನೀರು ಒದಗಿಸಬೇಕು ಎಂದು ಒತ್ತಾಯಿಸಿದರು. ಗ್ರಾಪಂ ವ್ಯಾಪ್ತಿಯಲ್ಲೇ ನೇತ್ರಾವತಿ- ಕುಮಾರಧಾರಾ ನದಿಗಳು ಹರಿಯುತ್ತಿವೆ. ಆದರೆ ಅದರ ನೀರಿನ ಬಳಕೆ ಪಂಚಾಯತ್ ವ್ಯಾಪ್ತಿಗಾಗುತ್ತಿಲ್ಲ. ಇದೀಗ ಇಲ್ಲಿ ಕೂಡಾ ಬರಪರಿಸ್ಥಿತಿ ತಲೆದೋರಿದ್ದು, ಕುಡಿಯಲು ನೀರು ಇಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದರು. ಕಟ್ಟಡ ತೆರಿಗೆ ಹಾಗೂ ನೀರಿನ ತೆರಿಗೆ ಪರಿಷ್ಕರಣೆ ನಡೆಸುವುದಾಗಿ ಪಂಚಾಯತ್‌ನ ವರದಿಯಲ್ಲಿ ಉಲ್ಲೇಖಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥ ಕಾಲಿಸ್ತಾ ಮಿನೇಜಸ್, ಮೊದಲು ಸಮರ್ಪಕವಾಗಿ ಕುಡಿಯಲು ನೀರು ಕೊಡಿ. ಬಳಿಕ ನೀರಿನ ತೆರಿಗೆ ಪರಿಷ್ಕರಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಾಳೆಹಿತ್ಲು 1ನೆ ವಾರ್ಡ್‌ನಲ್ಲಿ ನೀರು ಬಿಡುವವರು ಇಲ್ಲಿರುವ ಎರಡು ಟ್ಯಾಂಕ್‌ಗಳಲ್ಲಿ ತನ್ನ ಸ್ವಂತ ಉಪಯೋಗಕ್ಕಾಗಿ ಒಂದು ಟ್ಯಾಂಕ್‌ಗೆ ಧಾರಾಳ ನೀರು ಬಿಡುತ್ತಾರೆ. ಈ ಟ್ಯಾಂಕ್‌ನ ನೀರು ಕೇವಲ ಐದು ಮನೆಗಳಿಗೆ ಮಾತ್ರ ಸರಬರಾಜಾಗುತ್ತಿದೆ. ಆದರೂ ಈ ಟ್ಯಾಂಕ್ ಯಾವಾಗಲೂ ತುಂಬಿ ನೀರು ಹೊರಹರಿಯುತ್ತಿದೆ. ಹೀಗೆ ಹೊರಬರುವ ನೀರನ್ನು ತನ್ನ ತೋಟಕ್ಕೆ ಬಳಸುತ್ತಿದ್ದಾರೆ ಎಂದು ಆರೋಪಿಸಿದರಲ್ಲದೆ, ಟ್ಯಾಂಕ್‌ನಲ್ಲಿ ನೀರು ತುಂಬಿ ಹೊರಹರಿಯುವ ವೀಡಿಯೊ ದೃಶ್ಯಾವಳಿಗಳನ್ನು ಸಭೆೆಗೆ ಪ್ರದರ್ಶಿಸಿದರು. ಅಲ್ಲದೇ, ಹಲವು ಮನೆಗಳಿಗೆ ಸಂಪರ್ಕ ಕಲ್ಪಿಸುವ ಟ್ಯಾಂಕ್ ಹೆಚ್ಚಾಗಿ ಖಾಲಿಯಾಗಿರುತ್ತದೆ. ಇದರಿಂದ ನಮಗೆ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಈ ಬಗ್ಗೆ ತೀವ್ರ ಚರ್ಚೆ ನಡೆದು ವಾಗ್ವಾದಕ್ಕೆ ಕಾರಣವಾಯಿತು. ಪರಿಸ್ಥಿತಿ ಕೈ ಮೀರುವ ಹಂತ ನಿರ್ಮಾಣವಾದಾಗ ಗ್ರಾಮಸ್ಥರು ಸಮಾಧಾನಪಡಿಸಿ ಈ ವಿಷಯದ ಕುರಿತಾದ ಚರ್ಚೆಗೆ ತೆರೆ ಎಳೆದರು.

ಮರಳು ಸಿಗದಿರುವುದಕ್ಕೆ ಆಕ್ರೋಶ:

ಸಾಮಾಜಿಕ ಕಾರ್ಯಕರ್ತ ಅಬ್ದುರ್ರಹ್ಮಾನ್ ಯುನಿಕ್ ಮಾತನಾಡಿ, ಸರಕಾರದ ಮರಳು ನೀತಿಯಿಂದಾಗಿ ಅಕ್ರಮ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು, ದುಪ್ಪಟ್ಟು ಹಣಕ್ಕೆ ಮರಳು ಸಿಗುವಂತಾಗಿದೆ. ಬಡವನಿಗೆ ಮರಳು ಸಿಗದ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಮನೆ ನಿರ್ಮಾಣಕ್ಕೆ ಪಂಚಾಯತ್ ವ್ಯಾಪ್ತಿಯಲ್ಲಿರುವ ಮರಳನ್ನು ಗ್ರಾಮಸ್ಥರು ಪಂಚಾಯತ್‌ನಿಗದಿಪಡಿಸಿದ ದುಡ್ಡುಕಟ್ಟಿ ಖರೀದಿಸಲು ಅವಕಾಶ ನೀಡುವಂತೆ ನಿರ್ಣಯ ಕೈಗೊಂಡು ಸರಕಾರಕ್ಕೆ ಕಳುಹಿಸಲು ಸಲಹೆ ನೀಡಿದರು. ಇದಕ್ಕೆ ಸಭೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿ, ಪಂಚಾಯತ್ ವ್ಯಾಪ್ತಿಯ ಮರಳಿಗೆ ಅಲ್ಲಿನವರೇ ಪ್ರಮುಖ ಹಕ್ಕುದಾರರು ಎಂಬುದನ್ನು ಉಲ್ಲೇಖಿಸಿ, ನಮ್ಮ ಗ್ರಾಮ- ನಮ್ಮ ಮರಳು ಎಂಬುದಾಗಿ ನಿರ್ಣಯವನ್ನು ಕೈಗೊಂಡು, ಸರಕಾರಕ್ಕೆ ಕಳುಹಿಸುವುದಾಗಿ ಗ್ರಾಪಂ ಉಪಾಧ್ಯಕ್ಷ ಅಸ್ಕರ್ ಅಲಿ ತಿಳಿಸಿದರು.

ನಗರಸಭೆ ನೀರು ಕೊಡಲಿ:

ಪುತ್ತೂರು ನಗರಸಭೆ 34ನೆ ನೆಕ್ಕಿಲಾಡಿ ಪಂಚಾಯತ್ ವ್ಯಾಪ್ತಿಯಿಂದ ನೀರು ಪಡೆದು ಪುತ್ತೂರು ಪೇಟೆಗೆ ಸರಬರಾಜು ಮಾಡುತ್ತಾರೆ. ಆದರೆ ಅದಕ್ಕೆ ಯಾವುದೇ ಶುಲ್ಕ ಪಾವತಿಸುತ್ತಿಲ್ಲ. ಶುಲ್ಕ ನಮಗೆ ಬೇಡ. ಅದರ ಬದಲಾಗಿ ನೆಕ್ಕಿಲಾಡಿ ಪಂಚಾಯತ್ ವ್ಯಾಪ್ತಿಗೆ ಕುಡಿಯುವ ನೀರು ಪೂರೈಸುವ ಜವಾಬ್ದಾರಿಯನ್ನು ವಹಿಸಿಕೊಳ್ಳಲಿ ಎಂದು ಗ್ರಾಮಸ್ಥರು ಒತ್ತಾಯಿಸಿದರಲ್ಲದೆ, ತಪ್ಪಿದಲ್ಲಿ ನಗರಸಭೆಯ ನೀರು ಶುದ್ದೀಕರಣ ಘಟಕಕ್ಕೆ ಬೀಗ ಜಡಿಯುವ ಎಚ್ಚರಿಕೆ ನೀಡಿದರು. ಈ ಸಂದರ್ಭ ಮಾತನಾಡಿದ ಪಂಚಾಯತ್ ಉಪಾಧ್ಯಕ್ಷ ಅಸ್ಕರ್ ಅಲಿ, ಈ ಬಗ್ಗೆ ನಮ್ಮದೂ ಸಹಮತವಿದೆ. ಈ ಪ್ರಕರಣ ಈಗಾಗಲೇ ನ್ಯಾಯಾಲಯದಲ್ಲಿದ್ದು, ಆದ್ದರಿಂದ ಇದರ ಬಗ್ಗೆ ಚರ್ಚೆ ಬೇಡ. ಇನ್ನೊಂದು ನಿರ್ಣಯ ಅಂಗೀಕರಿಸೋಣ ನಗರಸಬೆಗೆ ಕಳಿಸೋಣ ಎಂದರು. ಪಂಚಾಯತ್ ಇಂಗು ಗುಂಡಿ ತೋಡುವುದಾದರೆ ತನ್ನ 50 ಸೆಂಟ್ಸ್ ಜಾಗವನ್ನು ಪಂಚಾಯತ್‌ಗೆ ನೀಡುವುದಾಗಿ ಕಾಲಿಸ್ತಾ ಮಿನೇಜಸ್ ಸಭೆಯಲ್ಲಿ ಘೋಷಿಸಿದರು.

 ಕಿಂಡಿ ಅಣೆಕಟ್ಟಿಗೆ ಒತ್ತಾಯ: ದ.ಕ. ಜಿಲ್ಲೆಯಲ್ಲಿ ಕೃಷಿಗೆ ಯಾವುದೇ ನೀರಾವರಿ ವ್ಯವಸ್ಥೆ ಇಲ್ಲ. ಆದ್ದರಿಂದ ನೇತ್ರಾವತಿ ಹಾಗೂ ಕುಮಾರಧಾರ ನದಿಗಳಿಗೆ ಕಿಂಡಿ ಅಣೆಕಟ್ಟುಗಳನ್ನು ಕಟ್ಟಿ ಅದರ ನೀರನ್ನು ಕೃಷಿಕರಿಗೆ ನೀಡಲು ಸರಕಾರಕ್ಕೆ ಪತ್ರ ಬರೆಯಬೇಕೆಂದು ರೈತ ಸಂಘದ ರೂಪೇಶ್ ರೈ ಅಲಿಮಾರ್ ಒತ್ತಾಯಿಸಿದರು. ಈ ಬಗ್ಗೆ ನಿರ್ಣಯ ಅಂಗೀಕರಿಸಲಾಯಿತು.

ಉಚಿತ ಸಕ್ಕಿಂಗ್ ಯಂತ್ರದ ಭಾಗ್ಯವಿಲ್ಲ: ಸಾಮಾಜಿಕ ಕಾರ್ಯಕರ್ತ ಅಬ್ದುರ್ರಹ್ಮಾನ್ ಯುನಿಕ್ ಮಾತನಾಡಿ, ಬಡ ಕುಟುಂಬದವರ ಶೌಚ ಗುಂಡಿಗಳನ್ನು ಸ್ವಚ್ಛಗೊಳಿಸಲು ಉಚಿತವಾಗಿ ಸಕ್ಕಿಂಗ್ ಯಂತ್ರ ಪೂರೈಸುವುದಾಗಿ ಭರವಸೆ ನೀಡಿದ ತಾಪಂ ನೆಕ್ಕಿಲಾಡಿ ಗ್ರಾಪಂನಿಂದ 50 ಸಾವಿರ ರೂ. ವಸೂಲಿ ಮಾಡಿದೆ. ಆದರೆ ಶೌಚ ಗುಂಡಿ ಶುಚಿಗೊಳಿಸಲು ಕಡು ಬಡವನಿಂದಲೂ ತಾಪಂ 1,000 ರೂ. ಪಡೆಯುತ್ತದೆ ಹಾಗೂ ಸಕ್ಕಿಂಗ್ ಯಂತ್ರ ಬರಲು 15-20 ದಿನ ಕಾಯಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಕೊಟ್ಟ ಭರವಸೆ ಈಡೇರಿಸಲು ಸಾಧ್ಯವಾಗದಿದ್ದರೆ ತಾಪಂ ಗ್ರಾಪಂನಿಂದ ಪಡೆದುಕೊಂಡು 50 ಸಾವಿರ ರೂ.ನ್ನು ವಾಪಸ್ ನೀಡಲಿ ಎಂದು ಒತ್ತಾಯಿಸಿದರು.

ಗ್ರಾಮಸ್ಥರಾದ ಅಬ್ದುರ್ರಹ್ಮಾನ್ ಯುನಿಕ್, ಕಾಲಿಸ್ತಾ ಮಿನೇಜಸ್, ಅಮಿತಾ ನೆಕ್ಕಿಲಾಡಿ, ಸದಾನಂದ ಕಾರ್‌ಕ್ಲಬ್, ರೂಪೇಶ್ ರೈ ಅಲಿಮಾರ್, ಬಬಿತಾ ಲವೀನಾ ಮಿನೇಜಸ್ ಚರ್ಚೆಯಲ್ಲಿ ಬಾಗವಹಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ಅಸ್ಕರ್ ಅಲಿ, ಸದಸ್ಯರಾದ ಮೈಕಲ್ ವೇಗಸ್, ಎನ್. ಶೇಕಬ್ಬ, ಸತ್ಯವತಿ, ಯಮುನಾ, ದೇವಕಿ, ಬಾಬು ನಾಯ್ಕ, ಪ್ರಶಾಂತ ಎನ್., ಕೃಷ್ಣವೇಣಿ, ಜ್ಯೋತಿ ಉಪಸ್ಥಿತರಿದ್ದರು. ವಿವಿಧ ಇಲಾಖಾಧಿಕಾರಿಗಳು ಹಾಜರಾಗಿ ಮಾಹಿತಿ ನೀಡಿದರು. ಪಿಡಿಒ ಜಯಪ್ರಕಾಶ ಎಂ. ಸ್ವಾಗತಿಸಿದರು. ಕಾರ್ಯದರ್ಶಿ ರಾಮಣ್ಣ ವಂದಿಸಿದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಪುತ್ತೂರು ಉಪವಿಭಾಗದ ಸಹಾಯಕ ಕಾರ್ಯಕಾರಿ ಅಭಿಯಂತರ ನಾರಾಯಣ ನಾಯ್ಕ ಮಾರ್ಗದರ್ಶಿ ಅಧಿಕಾರಿಯಾಗಿ ಸಭೆ ನಡೆಸಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News