ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಸಾಮೂಹಿಕ ಜವಾಬ್ದಾರಿ: ರಮಾನಾಥ ರೈ

Update: 2016-04-30 17:14 GMT

 ಸುಳ್ಯ, ಎ.30: ಶಿಕ್ಷಣ ಸಂಸ್ಥೆಗಳನ್ನು ಕಟ್ಟುವುದು, ಬೆಳೆಸುವುದು ಕೇವಲ ಜನಪ್ರತಿನಿಧಿಗಳ ಮತ್ತು ಸರ್ಕಾರದ ಕರ್ತವ್ಯವಲ್ಲ. ಪೋಷಕರು ಹಾಗೂ ಸಮಾಜದ ಎಲ್ಲರೂ ಸೇರಿ ಸಾಮೂಹಿಕ ಜವಾಬ್ದಾರಿಯಿಂದ ಶಿಕ್ಷಣ ಸಂಸ್ಥೆಗಳನ್ನು ಬೆಳೆಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡ ಹಾಗೂ ಮಲ್ಟಿ ಜಿಮ್‌ನ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ದೇಶದ ಜನಸಂಖ್ಯೆಯನ್ನು ಗಮನಿಸಿದಾಗ ಪದವಿ ಪಡೆಯುತ್ತಿರುವವರ ಸಂಖ್ಯೆ ಬಹಳ ಸೀಮಿತವಾಗಿದೆ. ಹೀಗಾಗಿ ಕಾಲೇಜು ಶಿಕ್ಷಣಕ್ಕೆ ಗಮನ ನೀಡಬೇಕಾದ ಅಗತ್ಯವಿದೆ. ಸಾಮಾಜಿಕವಾಗಿ ಅಭದ್ರತೆ ಇರುವ ಕಾರಣದಿಂದ ಹೆಣ್ಣು ಮಕ್ಕಳು ಕಾಲೇಜು ಶಿಕ್ಷಣದಿಂದ ದೂರ ಉಳಿದಿದ್ದಾರೆ. ಹೀಗಾಗಿ ಹೆಣ್ಣು ಮಕ್ಕಳು ಹೆಚ್ಚಿನ ಶಿಕ್ಷಣ ಪಡೆಯುವಂತಾಗಬೇಕು ಎಂದವರು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪೈಪೋಟಿ ನೀಡಬಲ್ಲ ಶಕ್ತಿ ಜಿಲ್ಲೆಯ ಸರಕಾರಿ ಶಿಕ್ಷಣ ಸಂಸ್ಥೆಗಳಿಗೆ ಇದೆ ಎಂದರಲ್ಲದೆ, ಕಾಲೇಜಿನ ಕ್ರೀಡಾಂಗಣದ ಅಭಿವೃದ್ಧಿಗೆ 5 ಲಕ್ಷ ರೂ. ಅನುದಾನ ನೀಡುವುದಾಗಿ ಪ್ರಕಟಿಸಿದರು.
ಕಾಲೇಜಿನಲ್ಲಿ ನಿರ್ಮಿಸಿರುವ ಮಲ್ಟಿಜಿಮ್‌ನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಕಾಲೇಜಿಗೆ ಸೋಲಾರ್ ಸೌಲಭ್ಯವನ್ನು ಒದಗಿಸುವ ಭರವಸೆ ನೀಡಿದರು.
 
ಶಾಸಕ ಎಸ್.ಅಂಗಾರ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ಜಿಪಂ ಸದಸ್ಯ ಹರೀಶ್ ಕಂಜಿಪಿಲಿ, ಉಬರಡ್ಕ ಗ್ರಾಪಂ ಅಧ್ಯಕ್ಷ ಹರೀಶ್ ಉಬರಡ್ಕ, ಸುಳ್ಯ ನಪಂ ಅಧ್ಯಕ್ಷ ಪ್ರಕಾಶ್ ಹೆಗ್ಡೆ, ಸದಸ್ಯ ರಮಾನಂದ ರೈ, ಮಂಗಳೂರು ವಿ.ವಿ. ಸಿಂಡಿಕೇಟ್ ಸದಸ್ಯ ವಿಜಯಕುಮಾರ್ ಸೊರಕೆ, ನಪಂನ ಮಾಜಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ರೈಟ್ ಕಂಪೆನಿಯ ಅನೀಶ್ ವೇದಿಕೆಯಲ್ಲಿದ್ದರು.

ಎಂ.ವೆಂಕಪ್ಪ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಪದ್ಮನಾಭ ನೆಟ್ಟಾರು ಸ್ವಾಗತಿಸಿದರು. ಮನಮೋಹನ ಬಳ್ಳಡ್ಕ ಹಾಗೂ ರಾಮಚಂದ್ರ ಕಾರ್ಯಕ್ರಮ ನಿರೂಪಿಸಿದರು. ಸತೀಶ್ ಕೊಯಿಂಗಾಜೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News